ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರಿದ್‌ 2021: ‘ದುಲ್‌ಹಜ್‌’ ತಿಂಗಳ ವಿಶೇಷ ಏನು?:

ಸಾಮೂಹಿಕ ಪ್ರಾರ್ಥನೆ ಇಲ್ಲ, ಮಸೀದಿಗಳಲ್ಲಿ ಒಂದು ಬಾರಿಗೆ 50 ಮಂದಿಯಿಂದ ಪ್ರಾರ್ಥನೆ
Last Updated 21 ಜುಲೈ 2021, 6:32 IST
ಅಕ್ಷರ ಗಾತ್ರ

ಕಲಬುರ್ಗಿ: ಪ್ರವಾದಿ ಮಹಮ್ಮದ್‌ ಅವರ ತ್ಯಾಗ– ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದು ಮಂಗಳವಾರ ಕಂಡುಬಂತು.

ಶ್ರದ್ಧೆ ಹಾಗೂ ಭಕ್ತಿ ಪ್ರಧಾನವಾದ ಈ ಹಬ್ಬಕ್ಕೆ ‘ಈದ್‌ ಉಲ್‌ ಅದಾ’ ಎನ್ನುತ್ತಾರೆ.

‘ಕೊರೊನಾ ವೈರಾಣು ಉಪಟಳದ ಕಾರಣ, ಈ ಬಾರಿ ಹಬ್ಬವನ್ನೂ ಸಂಕ್ಷಿಪ್ತವಾಗಿ ಆಚರಿಸಲು ಮುಸ್ಲಿಂ ಸಮುದಾಯದ ಸಂಘಟನೆಗಳು ಹಾಗೂ ಮಸೀದಿ ಸಮಿತಿಗಳು ನಿರ್ಧರಿಸಿವೆ. ಕೋವಿಡ್‌ ಮಾರ್ಗಸೂಚಿಯಂತೆ ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ಕೈಬಿಡಲಾಗಿದೆ. ಆದರೆ, ಪ್ರತಿ ಮಸೀದಿಯಲ್ಲೂ ಒಂದು ಬಾರಿಗೆ 50 ಮಂದಿ ಹೋಗಿ ನಮಾಜ್‌ ಮಾಡಲು ಅನುಮತಿ ನೀಡಿದ್ದಾರೆ. ಅದರ ಅನುಸಾರ ಮಸೀದಿ ಆವರಣದಲ್ಲಿ ಕನಿಷ್ಠ ಅಂತರ ಇರುವಂತೆ ಮಾರ್ಕಿಂಗ್‌ ಮಾಡಲಾಗುತ್ತಿದೆ’ ಎಂದು ಸಮುದಾಯದ ಮುಖಂಡ ಸಯ್ಯದ್‌ ಮುಸ್ತಫಾ ಹೇಳಿದರು.

‘ಕೆಲವೇ ಮಂದಿಗೆ ಪ್ರಾರ್ಥನೆಗೆ ಅವಕಾಶ ನೀಡಿದ್ದರಿಂದ ಈ ಬಾರಿ ಬೆಳಿಗ್ಗೆ 4ರಿಂದಲೇ ಪ್ರಾರ್ಥನೆ ಆರಂಭಿಸಲಾಗುತ್ತದೆ. ಪಾಳಿ ಪ್ರಕಾರ ಬರುವಂತೆ ಜನರಿಗೆ ತಿಳಿಸಲಾಗಿದೆ. ಬಾಗಿಲಲ್ಲಿ ಸ್ಯಾನಿಟೈಸರ್‌ ನೀಡಲಾಗುವುದು. ಕೈ– ಕಾಲು ತೊಳೆದ ನಂತರ ಮಸೀದಿ ಒಳಗೆ ಪ್ರವೇಶ ನೀಡಲಾಗುವುದು. ಮಾಸ್ಕ್‌ ಧರಿಸುವಂತೆ ಸೂಚನೆ ನೀಡಲಾಗುವುದು. ಕಳೆದ ಬಾರಿ ಕೂಡ ಕೊರೊನಾ ಕಾರಣಕ್ಕೆ ಇದೇ ಮಾರ್ಗಸೂಚಿ ಅನುಸರಿಸಲಾಗಿತ್ತು’ ಎಂದು ಶಹಾನಾ ಮಸೀದಿಯ ಮುಖ್ಯಸ್ಥರು ಮಾಹಿತಿ ನೀಡಿದರು.

ಸಾಂಕೇತಿಕ ಪ್ರಾರ್ಥನೆ: ನಗರದ ಸೇಡಂ ರಸ್ತೆಯ ಈದ್ಗಾ ಮೈದಾನ, ಎಂಎಸ್‌ಕೆ ಮಿಲ್‌ ಪ್ರದೇಶದ ಬಹಮನಿ ಈದ್ಗಾ ಮೈದಾನ, ಐತಿಯಾಸಿಕ ಬಹನಿ ಕೋಟೆ ಆವರಣದಲ್ಲಿರುವ ಜಾಮಿಯಾ ಮಸೀದಿ ಆವರಣ, ರಾಜಾಪುರ ಈದ್ಗಾ, ನಾಗನಹಳ್ಳಿ ಈದ್ಗಾ ಹಾಗೂ ಹಾಗರಗಾ ರಸ್ತೆಯ ಈದ್ಗಾಗಳಲ್ಲಿ ಸಾಂಕೇತಿಕ ಪ್ರಾರ್ಥನೆ ನಡೆಸಲು ಈದ್‌ ಕಮಿಟಿಗಳು ನಿರ್ಧರಿಸಿವೆ. ಬೆಳಿಗ್ಗೆ ಮಸೀದಿಗಳಲ್ಲಿ ಮಾತ್ರ ವಿಶೇಷ ನಮಾಜ್‌ ಹಾಗೂ ಖುತ್ಬಾ (ಪ್ರವಚನ) ಇರುತ್ತದೆ.

ಭರ್ಜರಿ ಖಾದ್ಯ:ಈದ್‌ ವಿಶೇಷ ಖಾದ್ಯಗಳಾದ ಶುರಕುಂಬ, ಗುಕಂದ್‌, ಫಿಕನಿ, ಪನೀರ್‌, ಕೀರ್‌, ಮಕನೆಕೀರ್‌, ಶಾಹಿ ತುಕಡಿ ಮುಂತಾದ ಸಿಹಿ ಪದಾರ್ಥಗಳನ್ನು ಮಾಡುವುದು ಕಲ್ಯಾಣ ಕರ್ನಾಟಕ ಭಾಗದ ವಾಡಿಕೆ. ಜತೆಗೆ, ಖಾರದ ತಿನಿಸುಗಳಾದ ಮಟನ್‌ ಬಿರಿಯಾನಿ, ಚಿಕನ್‌ ಬಿರಿಯಾನಿ, ಚಿಕನ್‌ ಕೋಫ್ತಾ, ಕಲೇಜಾ ಮಸಾಲಾ, ಕಚ್ಚಾಕೀಮ್‌, ಮಟ್‌ಟಿಕ್ಕಾ, ಚಿಕನ್‌ ಕಬಾಬ್‌, ಚಿಕನ್‌ ತಂದೂರಿ, ಚಿಕನ್‌ ಫ್ರೈ, ಮಟನ್‌ ಫ್ರೈ ಇಂಥ ಹಲವು ಖಾದ್ಯಗಳನ್ನೂ ಮಾಡಿ ಸವಿಯುವುದು ಸಂಪ್ರದಾಯ ಎನ್ನುವುದು ಮೋಘಾದ ಗೃಹಿಣಿ ಅಪ್ಸರಾ ಬೇಗಂ ಅವರ ಹೇಳಿಕೆ.

‘ದುಲ್‌ಹಜ್‌’ ತಿಂಗಳ ವಿಶೇಷ ಏನು?:ಇಸ್ಲಾಮಿಕ್‌ ಕ್ಯಾಲೆಂಡರಿನಲ್ಲಿ ಬರುವ ‘ದುಲ್‌ಹಜ್‌’ ತಿಂಗಳಲ್ಲಿ ಬಕ್ರೀದ್‌ ಆಚರಿಸಲಾಗುತ್ತದೆ. ಹಜ್‌ ಯಾತ್ರೆಗೆ ಮೆಕ್ಕಾ (ಸೌದಿಅರೇಬಿಯಾ)ಗೆ ತೆರಳಿದವರು ತಮ್ಮ ಯಾತ್ರೆಯನ್ನು ಇದೇ ದಿನ ಕೊನೆಗೊಳಿಸುವುದು ವಾಡಿಕೆ.

ಈ ಹಬ್ಬಕ್ಕೆ ಎರಡು ದಿನ ಮುಂಚೆ ಉಪವಾಸ ಮಾಡುವುದು ರೂಢಿ. ಬಕ್ರೀದ್‌ ಹಬ್ಬದ ಮುನ್ನಾದಿನ ಅಥವಾ ‘ದುಲ್‌ಹಜ್‌’ ತಿಂಗಳ 9ರಂದು ಹಜ್‌ ಯಾತ್ರಿಕರು ಮೆಕ್ಕಾ ನಗರದ ಅರಾಫತ್ ಬೆಟ್ಟದಲ್ಲಿ ಸೇರುತ್ತಾರೆ ಎಂದು ಮೌಲ್ವಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT