ಮಂಗಳವಾರ, ಆಗಸ್ಟ್ 3, 2021
27 °C

ಬಕ್ರೀದ್ | ಕೊರೊನಾ ನಿವಾರಣೆಗೆ ಸಾಮೂಹಿಕ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಶನಿವಾರ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶ್ರದ್ಧೆ– ಭಕ್ತಿಯಿಂದ ಆಚರಿಸಲಾಯಿತು. ಪ್ರಪಂಚವನ್ನು ಕಾಡುತ್ತಿರುವ ಕೊರೊನಾ ವೈರಾಣು ಶೀಘ್ರ ನಾಶವಾಗಲಿ ಎಂದೇ ಬಹುಪಾಲು ಮುಸ್ಲಿಮರು ಪ‍್ರಾರ್ಥನೆ ಸಲ್ಲಿಸಿದರು.

ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಈ ಬಾರಿ ಈದ್ಗಾ ಮೈದಾನಗಳಲ್ಲಿನ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧ ಮಾಡಲಾಗಿತ್ತು. ಮುಸ್ಲಿಮರು ಅವರು ವಾಸವಾಗಿರುವ ಬಡಾವಣೆಗಳಲ್ಲಿನ ಮಸೀದಿಗಳಲ್ಲಿ ಮಾತ್ರ ಸಾಮೂಹಿಕ ಪ್ರಾರ್ಥನೆ ಮಾಡಿದರು.

ಬೆಳಿಗ್ಗೆ 6ರಿಂದಲೇ ಮಸೀದಿಗಳತ್ತ ಬಂದ ಮುಸ್ಲಿಮರು, ನಮಾಜ್‌ಗಾಗಿ ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು. ಬಹುಪಾಲು ಮಸೀದಿಗಳಲ್ಲಿ ಬಣ್ಣದ ಗುರುತು ಮಾಡಿ, ಅಂತರ ಕಾಪಾಡಿಕೊಳ್ಳಲಾಯಿತು. ಒಂದು ಬಾರಿಗೆ 50 ಮಂದಿಯನ್ನು ಮಾತ್ರ ಒಳಗೆ ಬಿಡಲಾಯಿತು.

ಆರಂಭದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ, ಸ್ಯಾನಿಟೈಸ್‌ ಹಚ್ಚಲಾಯಿತು. ಮಾಸ್ಕ್‌ ಧರಿಸಿದವರನ್ನು ಮಾತ್ರ ಪ್ರಾರ್ಥನೆಗೆ ಬಿಡಲಾಯಿತು. ಎಲ್ಲ ಸಿದ್ಧತೆಗಳನ್ನು ಆಯಾ ಮಸೀದಿಯ ನಿರ್ವಹಣಾ ಸಮಿತಿಗೆ ವಹಿಸಲಾಗಿತ್ತು. ಕೆಲವು ಸಮಾಜ ಸೇವಕರು ಮಸೀದಿಗಳ ಆವರಣದಲ್ಲಿ ನಿಂತು ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಿದರು.

ನಗರದ ಸೇಡಂ ರಸ್ತೆಯ ಈದ್ಗಾ ಮೈದಾನ, ಎಂಎಸ್‌ಕೆ ಮಿಲ್‌ ಪ್ರದೇಶದ ಬಹಮನಿ ಈದ್ಗಾ ಮೈದಾನ, ಐತಿಯಾಸಿಕ ಬಹನಿ ಕೋಟೆ ಆವರಣದಲ್ಲಿರುವ ಜಾಮಿಯಾ ಮಸೀದಿ ಆವರಣ, ರಾಜಾಪುರ ಈದ್ಗಾ, ನಾಗನಹಳ್ಳಿ ಈದ್ಗಾ ಹಾಗೂ ಹಾಗರಗಾ ರಸ್ತೆಯ ಈದ್ಗಾಗಳಲ್ಲಿ ಪ್ರತಿ ವರ್ಷ ಅಪಾರ ಸಂಖ್ಯೆಯಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ನಿಷೇಧದ ಕಾರಣ, ಈ ಬಾರಿ ಎಲ್ಲ ಕಡೆ ಪೊಲೀಸ್‌ ಕಾವಲು ಇತ್ತು.

ಹೊಸ ಉಡುಗೆಯಲ್ಲಿ ಬಂದ ಕೆಲವು ಮಕ್ಕಳು, ಹಿರಿಯರು, ಪರಸ್ಪರ ಆಲಿಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ‘ಗಲೇ ಮಿಲನ’ ಮಾಡಕೂಡದು ಎಂದು ಮಸೀದಿಯ ವ್ಯವಸ್ಥಾ‍ಪಕರು ‍ಪದೇಪದೇ ಎಚ್ಚರಿಕೆ ನೀಡುತ್ತಲೇ ಇದ್ದರು.

ಮನೆಯಲ್ಲೇ ಪ‍್ರಾರ್ಥನೆ: ಬೆಳಿಗ್ಗೆ ಮಸೀದಿಗಳಲ್ಲಿ ವಿಶೇಷ ನಮಾಜ್‌ ಹಾಗೂ ಖುತ್ಬಾ (ಪ್ರವಚನ) ನೆರವೇರಿತು. ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಧರ್ಮಗುರುಗಳು ಹಬ್ಬದ ಸಂದೇಶ ಸಾರಿದರು.

ಬಹುಪಾಲು ಮಂದಿ ತಮ್ಮ ತಮ್ಮ ಮನೆಗಳಲ್ಲೇ, ತಾರಸಿ ಮೇಲೆ ನಮಾಜ್‌ ಮಾಡಿದರು. ಪ್ರಾರ್ಥನೆಯ ಬಳಿಕ ಕೆಲವರು ಸ್ನೇಹಿತರು, ಬಂಧುಗಳ ಮನೆಗೆ ತೆರಳಿ ಮಾಂಸ (ಕುರ್ಬಾನಿ) ಹಂಚಿದರು. ಪ್ರವಾದಿಗಳ ತ್ಯಾಗ, ಬಲಿದಾನಗಳನ್ನು ಸ್ಮರಿಸಿದರು.

‘ದುಲ್‌ಹಜ್‌’ ತಿಂಗಳ ವಿಶೇಷ: ಇಸ್ಲಾಮಿಕ್‌ ಕ್ಯಾಲೆಂಡರಿನಲ್ಲಿ ಬರುವ ‘ದುಲ್‌ಹಜ್‌’ ತಿಂಗಳಲ್ಲಿ ಬಕ್ರೀದ್‌ ಆಚರಿಸಲಾಗುತ್ತದೆ. ಹಜ್‌ ಯಾತ್ರೆಗೆ ಮೆಕ್ಕಾ (ಸೌದಿಅರೇಬಿಯಾ)ಗೆ ತೆರಳಿದವರು ತಮ್ಮ ಯಾತ್ರೆಯನ್ನು ಇದೇ ದಿನ ಕೊನೆಗೊಳಿಸುವುದು ವಾಡಿಕೆ.

ಈ ಹಬ್ಬಕ್ಕೆ ಎರಡು ದಿನ ಮುಂಚೆ ಉಪವಾಸ ಮಾಡುವುದು ರೂಢಿ. ಬಕ್ರೀದ್‌ ಹಬ್ಬದ ಮುನ್ನಾದಿನ ಅಥವಾ ‘ದುಲ್‌ ಹಜ್‌’ ತಿಂಗಳ 9ರಂದು ಹಜ್‌ ಯಾತ್ರಿಕರು ಮೆಕ್ಕಾ ನಗರದ ಅರಾಫತ್ ಬೆಟ್ಟದಲ್ಲಿ ಸೇರುತ್ತಾರೆ. ಆ ಯಾತ್ರಿಕರಿಗೆ ಬೆಂಬಲ ನೀಡಲು ವಿಶ್ವದಾದ್ಯಂತ ಮುಸ್ಲಿಮರು ಈ ದಿನ ಉಪವಾಸ ಇರುತ್ತಾರೆ ಎಂದು ಮೌಲ್ವಿಗಳು ಮಾಹಿತಿ ನೀಡಿದರು.

ಬಕ್ರೀದ್‌ಗೆ ಭರ್ಜರಿ ಖಾದ್ಯ: ಬಕ್ರೀದ್‌ ಹಬ್ಬಕ್ಕಾಗಿ ಮಾರುಕಟ್ಟೆಗಳಲ್ಲಿ ಎಲ್ಲ ವಸ್ತುಗಳ ದರವೂ ದುಬಾರಿ ಆಗಿದೆ. ಆದರೂ, ಸಂಭ್ರಮಕ್ಕೇನೂ ಅಡ್ಡಿ ಇರಲಿಲ್ಲ.

ಈದ್‌ ವಿಶೇಷ ಖಾದ್ಯಗಳಾದ ಶುರಕುಂಬ, ಗುಕಂದ್‌, ಫಿಕನಿ, ಪನೀರ್‌, ಕೀರ್‌, ಮಕನೆಕೀರ್‌, ಶಾಹಿ ತುಕಡಿ ಮುಂತಾದ ಸಿಹಿ ಪದಾರ್ಥಗಳನ್ನು ಪಾಡುವುದು ಕಲ್ಯಾಣ ಕರ್ನಾಟಕ ಭಾಗದ ವಾಡಿಕೆ.

ಜತೆಗೆ, ಖಾರದ ತಿನಿಸುಗಳಾದ ಮಟನ್‌ ಬಿರಿಯಾನಿ, ಚಿಕನ್‌ ಬಿರಿಯಾನಿ,  ಚಿಕನ್‌ ಕೋಫ್ತಾ, ಕಲೇಜಾ ಮಸಾಲಾ, ಕಚ್ಚಾಕೀಮ್‌, ಮಟ್‌ಟಿಕ್ಕಾ, ಚಿಕನ್‌ ಕಬಾಬ್‌, ಚಿಕನ್‌ ತಂದೂರಿ, ಚಿಕನ್‌ ಫ್ರೈ, ಮಟನ್‌ ಫ್ರೈ ಮುಂತಾದ ತಹರೇವಾದು ಖಾದ್ಯಗಳನ್ನು ತಯಾರಿಸುತ್ತಾರೆ. ಗೃಹಿಣಿಯರಿಗಂತೂ ಬೆಳಿಗ್ಗೆಯಿಂದ ಬಿಡುವುದಿಲ್ಲ ಕೆಲಸ. ಮಧ್ಯಾಹ್ನದ ಹೊತ್ತಿಗೆ ಕುಟುಂಬ ಸಮೇತ ಭರ್ಜರಿ ಭೋಜನ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು