ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಕೋಟಿಗಟ್ಟಲೇ ವಂಚಿಸಿದ್ದ ಆರೋಪಿ ಬಂಧನ

ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಕಾರು ಖರೀದಿಸಲು ಬ್ಯಾಂಕುಗಳಿಂದ ಸಾಲ ಪಡೆದಿದ್ದ ಬಸವಂತರಾಯ
Last Updated 24 ಜೂನ್ 2020, 10:26 IST
ಅಕ್ಷರ ಗಾತ್ರ

ಕಲಬುರ್ಗಿ: ಬ್ಯಾಂಕುಗಳಿಂದ ಕಾರು ಸಾಲ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡಿದ ಪ್ರಮುಖ ಆರೋಪಿ ಚಿತ್ತಾಪುರದ ಬಸವಂತರಾಯ ಪಾಟೀಲ ಎಂಬಾತನನ್ನು ಕಲಬುರ್ಗಿ ಸೈಬರ್‌ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಸವಂತರಾಯನ ಜೊತೆಗೆ ಶಂಕರ ಕಾಳೆ, ಸಿದ್ದಮ್ಮ ಹಾಗೂ ಅಮರೇಶ್ವರ ಎಂಬುವವರು ಈ ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಅವರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

ಹೊಸ ಕಾರು ಖರೀದಿಸುವುದಾಗಿ ಇಲ್ಲಿ‌ನ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಶಾಖೆಯೊಂದರಲ್ಲಿ ₹ 45 ಲಕ್ಷ ಸಾಲ ಪಡೆದು ವಂಚನೆ ಮಾಡಲಾಗಿದೆ. ಅಲ್ಲದೇ, ಬ್ಯಾಂಕ್ ಆಫ್ ಬರೋಡಾ ಸೇರಿ ಹಲವು ಬ್ಯಾಂಕ್‌ಗಳಲ್ಲಿ ಕೋಟಿಗಟ್ಟಲೆ ಸಾಲ ಪಡೆದು ವಂಚಿಸಿದ್ದಾರೆ. ಬಸವಂತರಾಯ ಪಾಟೀಲ ಮತ್ತು ಮೂರು ಜನರು ಸೇರಿಕೊಂಡು ನಂದಿ ಟೊಯೊಟಾ ಶೋ ರೂಮ್‌ನಿಂದ ಕೊಟೇಷನ್ ಪಡೆದು ಬಳಿಕ ಅದನ್ನ ನಕಲು ಮಾಡಿ ಬ್ಯಾಂಕ್‌ಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರು. ಸಾಲಕ್ಕೆ ಅನುಮೋದನೆ ದೊರೆಯುತ್ತಿದ್ದಂತೆ ಬಸವಂತರಾಯ ತಾನು ಬಳಸುತ್ತಿದ್ದ ರಿಜಿಸ್ಟರ್ ಆಗದ ಕಾರಿನ ತಾತ್ಕಾಲಿಕ ಪಾಸಿಂಗ್ ದಾಖಲೆಯನ್ನು ನಕಲು ಮಾಡಿ ಕಾರು ಶೋರೂಮ್‌ನಿಂದ ಪಡೆದಿದ್ದಾಗಿ ಹೇಳಿ ಸಾಲ ಪಡೆಯುತ್ತಿದ್ದ. ಅಲ್ಲದೆ ಶೋ ರೂಂ ಹೆಸರಿನಲ್ಲೇ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರಿನ ರಾಜಾನಕುಂಟೆಯ ಬ್ಯಾಂಕ್‌ನಲ್ಲಿ ಅಕೌಂಟ್ ತೆರೆದಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಶಂಕರ ಕಾಳೆ, ಸಿದ್ದಮ್ಮಾ ಮತ್ತು ಅಮರೇಶ್ವರ ಎಂಬುವರ ಹೆಸರಿನಲ್ಲಿ ಹತ್ತಾರು ಬ್ಯಾಂಕ್‌ನಲ್ಲಿ ಕಾರು ಖರೀದಿಸುವ ಹೆಸರಿನಲ್ಲಿ ಕೋಟಿಗಟ್ಟಲೆ ಲೂಟಿ ಮಾಡಿದ್ದಾರೆ. ಲೋನ್ ಪಡೆದು ಒಂದೆರಡು ತಿಂಗಳು ಕಂತು ಕೂಡ ಕಟ್ಟಿದ್ದಾರೆ. ಯಾವಾಗ ಬ್ಯಾಂಕ್‌ಗಳು ಕಾರನ್ನು ತಂದು ತೋರಿಸುವಂತೆ ಒತ್ತಾಯ ಮಾಡಿದಾಗ ಕಂತು ಕಟ್ಟುವುದನ್ನು ಬಿಟ್ಟರು. ಬ್ಯಾಂಕ್‌ನತ್ತ ಸುಳಿಯುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಬ್ಯಾಂಕ್ ವ್ಯವಸ್ಥಾಪಕರು ಕಾರು ಶೋ ರೂಂಗೆ ಕರೆ ಮಾಡಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.

ವಂಚನೆ ಪ್ರಕರಣ ಸಂಬಂಧ ಕಲಬುರ್ಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಸವಂತರಾಯನಿಂದ ಮಹಿಂದ್ರಾ ರೆಕ್ಸ್ಟಾನ್, ಟೊಯೊಟಾ ಇನ್ನೋವಾ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT