ಸೋಮವಾರ, ಮೇ 23, 2022
30 °C
ಸಾಮರಸ್ಯದ ಹಬ್ಬಗಳಿಗೆ ಸಾಕ್ಷಿಯಾದ ನಗರ, ಎರಡು ವರ್ಷಗಳ ಬಳಿಕ ಸರ್ವ ಧರ್ಮೀಯರಿಗೂ ಸಡಗರ

ಬಸವ ಜಯಂತಿ, ಈದ್‌; ದುಪ್ಪಟ್ಟು ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಒಂದೆಡೆ ಬಸವ ಜಯಂತಿ ಇನ್ನೊಂದೆಡೆ ಈದ್‌ ಉಲ್‌ ಫಿತ್ರ್‌. ಎರಡೂ ಹಬ್ಬಗಳ ಸಡಗರ ನಗರದಲ್ಲಿ ಮನೆ ಮಾಡಿದೆ. ಬಸವ ಜಯಂತಿಗೆ ಇಲ್ಲಿನ ಜಗತ್‌ ವೃತ್ತದಲ್ಲಿ ಆಡಂಬರದ ತಯಾರಿ ಮಾಡಿಕೊಳ್ಳಲಾಗಿದೆ. ಅದೇ ರೀತಿ ಪ್ರತಿ ಮಸೀದಿ, ದರ್ಗಾಗಳಲ್ಲೂ ಈದ್‌ಗಾಗಿ ಭರದ ಸಿದ್ಧತೆ ನಡೆದಿವೆ.

ಪ್ರಮುಖ ವೃತ್ತಗಳು, ಚೌಕಗಳಲ್ಲಿ ಬಸವೇಶ್ವರರ ಭಾವಚಿತ್ರಿವಿರುವ ಕಟೌಟ್‌ಗಳು ರಾರಾಜಿಸುತ್ತಿವೆ. ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರೂ ಸ್ವಗತ ಕಮಾನುಗಳನ್ನು ನಿಲ್ಲಿಸಿದ್ದಾರೆ. ಬಸವೇಶ್ವರರ ಪ್ರತಿಮೆ ಇರುವ ಇಲ್ಲಿನ ಜಗತ್‌ ವೃತ್ತವನ್ನು ಇನ್ನಿಲ್ಲದಂತೆ ಅಲಂಕರಿಸಲಾಗಿದೆ. ಎಲ್ಲೆಲ್ಲೂ ಪರಪರಿ ಕಟ್ಟಿ, ಬಸವ ಬಾವುಗಳನ್ನು ಕಟ್ಟಲಾಗಿದೆ. ಅನ್ನ ದಾಸೋಹ ಮಾಡುವ ತಂಡಗಳು ಈಗಾಗಲೇ ಠಿಕಾಣೆ ಹೂಡಿವೆ.

ಕಾರ್ಯಕ್ರಮ ಆವರಣ ಪ್ರವೇಶಿಸಲು ವರ್ಣರಂಜಿತ ಸ್ವಾಗತ ಕಮಾನು ಸಿದ್ಧಗೊಳಿಸಲಾಗಿದೆ. ಅದರ ಎದುರಿಗೆ ಬಸವಣ್ಣನವರ ಬೃಹತ್‌ ಕಟೌಟು ಇಡೀ ವೃತ್ತಕ್ಕೆ ಹೊಸ ಕಳೆ ತಂದಿದೆ. ನಗರದ
ಪ್ರಮುಖ ರಸ್ತೆಗಳು, ವೃತ್ತಗಳು ಬಸವಮಯವಾಗಿವೆ.

ಮಂಗಳವಾರ ಸಂಜೆ ನಗರೇಶ್ವರ ಶಾಲೆಯಿಂದ ಜಗತ್‌ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆವರೆಗೆ ಮೆರವಣಿಗೆ ನಡೆಯಲಿದೆ.
ಇದಕ್ಕೂ ಜಗತ್ ವೃತ್ತದಲ್ಲಿ ಅಶ್ವಾರೋಹಿ ಬಸವೇಶ್ವರರ ಪ್ರತಿಮೆಗೆ ಹೆಲಿಕಾಫ್ಟರ್‌ ಮೂಲಕ ಪುಷ್ಪ ವೃಷ್ಟಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಸೀದಿಗಳಲ್ಲೂ ಸಂಭ್ರಮ: ನಗರದ ಎಲ್ಲ ಮಸೀದಿ, ದರ್ಗಾಗಳಲ್ಲೂ ಇಸ್ಲಾಂ ಧರ್ಮದ ಧ್ವಜಗಳು ಹಾರಾಡುತ್ತಿವೆ. ಬಣ್ಣಬಣ್ಣದ ವಿದ್ಯುದ್ದೀಪಾಲಂಕಾರ ಮಾಡಿದ್ದು ಮಸೀದಿಗಳು ಕಂಗೊಳಿಸುತ್ತಿವೆ. ಭಾನುವಾರ ಚಂದ್ರ ದರ್ಶನವಾಗದ ಕಾರಣ ಹಬ್ಬವನ್ನು ಒಂದು ದಿನ ಮುಂದೂಡಿದ್ದು ಮಂಗಳವಾರ (ಮೇ 3) ಈದ್‌ ಸಂಭ್ರಮಾಚರಣೆ ನಡೆಯಲಿದೆ. ಇದಕ್ಕಾಗಿ ಎಲ್ಲ ಮುಸ್ಲಿಮರ ಮನೆಗಳಲ್ಲೂ ಸಂಭ್ರಮದ ವಾತಾವರಣ ಮೂಡಿದೆ.

ಇನ್ನೊಂದೆಡೆ ಮಸೀದಿ ಸಮಿತಿಗಳು, ನಮಾಜ್‌ ಕಮಿಟಿಗಳ ಮುಖಂಡರು ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಕಟೌಟ್‌, ಬ್ಯಾನರ್‌ ಹಾಕಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ದಕ್ಷಿಣ ಭಾರತದ ಪ‍್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಇಲ್ಲಿನ ಖಾಜಾ ಬಂದಾ ನವಾಜ್‌ ದರ್ಗಾದಲ್ಲಿ ಕೂಡ ತಿಂಗಳ ಕಾಲ ಹಬ್ಬದ ಸಾಂಪ್ರದಾಯಿಕ ಆಚರಣೆ ನೆರವೇರಿಸಲಾಯಿತು. ದರ್ಗಾದ ಮುಖ್ಯಸ್ಥರಾದ ಡಾ.ಸಯ್ಯದ್‌ ಶಾ ಖುಸ್ರೊ ಹುಸೇನಿ ಸಜ್ಜಾದಾ ನಶೀನ್‌ ಅವರ ನೇತೃತ್ವದಲ್ಲಿ ಹಬ್ಬದ ಆಚರಣೆಗೆ ತಯಾರಿ ಮಾಡಲಾಗಿದೆ.

ಉಳಿದಂತೆ ಮುಸ್ಲಿಂ ಚೌಕ್‌, ದರ್ಗಾ ರಸ್ತೆ, ಸಾತ್‌ ಗುಂಬಜ್‌, ಕಪಡಾ ಬಜಾರ್‌, ಎಪಿಎಂಸಿ ರಸ್ತೆ, ಗಂಜ್‌, ಹಳೆ ಜೇವರ್ಗಿ ರಸ್ತೆ, ರೈಲು ನಿಲ್ದಾಣದ ಮಾರ್ಗ, ಎಪಿಎಂಸಿ ಸರ್ಕಲ್‌, ಹುಮನಾಬಾದ್‌ ರಿಂಗ್‌ ರಸ್ತೆ, ಸಂತ್ರಾಸವಾಡಿ, ಖೂನಿ ಹವಾಲಾ, ಇಸ್ಲಾಂ ಕಾಲೊನಿ, ಗಾಜಿ ಮೊಹಲ್ಲ, ಎಂಎಸ್‌ಕೆ ಮಿಲ್‌ ಪ್ರದೇಶದಲ್ಲಿರುವ ಮಸೀದಿಗಳಲ್ಲೂ ಈದ್‌ ಸಂಭ್ರಮ ಮನೆ ಮಾಡಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಟದಿಂದಾಗಿ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲಾಗಿಲ್ಲ. ಮನೆಗಳಿಗೆ ಮಾತ್ರ ಸೀಮಿತವಾಗಿದ್ದ ಸಂಭ್ರಮದ ಕ್ಷಣಗಳು ಈಗ ಮತ್ತೆ ಮರಳಿವೆ. ಅದರಲ್ಲೂ ಬಸವ ಜಯಂತಿ ಹಾಗೂ ಈದ್‌ ಉಲ್‌ ಫೀತ್ರ್‌ ಒಂದೇ ದಿನ ಬಂದಿದ್ದರಿಂದ ನಗರದ ವೈಭವ ಇಮ್ಮಡಿಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು