ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ತತ್ವಗಳೇ ಸಂವಿಧಾನದಲ್ಲಿವೆ: ಮಲ್ಲಿಕಾರ್ಜುನ ಖರ್ಗೆ

ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಮತ
Last Updated 3 ಮೇ 2022, 4:52 IST
ಅಕ್ಷರ ಗಾತ್ರ

ಕಲಬುರಗಿ: ’ಮಹಾತ್ಮ ಬಸವೇಶ್ವರರು ಹೇಳಿದ ಸಮಾನತೆ, ಸ್ವಾತಂತ್ರ್ಯ, ಬಂಧು ಪ್ರೇಮದ ಅಂಶಗಳನ್ನೇ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಹೇಗಾದರೂ ಮಾಡಿ ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಮತ್ತೆ ಗುಲಾಮಗಾರಿ ಪದ್ಧತಿ ಬರಲಿದೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದರು.

ಬಸವ ಜಯಂತಿ ಉತ್ಸವ ಸಮಿತಿಯು ಬಸವಣ್ಣನವರ 889ನೇ ಜಯಂತ್ಯುತ್ಸವದ ನಿಮಿತ್ತ ಇಲ್ಲಿನ ಜಗತ್ ವೃತ್ತದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ‘ಬಸವಣ್ಣನವರು ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವೆಂದು ಹೇಳಿದ್ದರು. ಮಠಗಳನ್ನು ಕಟ್ಟಲು, ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಬಸವಣ್ಣನವರಿಗೆ ಅಷ್ಟೇನೂ ಇಷ್ಟವಿರಲಿಲ್ಲ. ಆದರೆ, ಇಂದು ಬಸವಣ್ಣನವರ ವಿಚಾರಗಳಿಗೆ ವಿರುದ್ಧವಾದ ವಿದ್ಯಮಾನಗಳು ಜರುಗುತ್ತಿವೆ. ನಾನು ದೊಡ್ಡ ದೇವಸ್ಥಾನ ಕಟ್ಟಿಸಿದ್ದೇನೆ ಎಂದು ಹೇಳುವವರು ಸಂಖ್ಯೆ ಜಾಸ್ತಿಯಾಗುತ್ತಿದೆ. ಇಲ್ಲಿ ನಾನು ರಾಜಕೀಯ ಭಾಷಣ ಮಾಡುತ್ತಿಲ್ಲ. ಆದರೆ, ಸಮಾಜದ ವಾಸ್ತವಗಳನ್ನು ತಿಳಿಸುತ್ತಿದ್ದೇನೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಗೆ ಕೂರಿಸಿಕೊಂಡೇ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಇದಿರು ಹಳಿಯಲುಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ಕೂಡಲ ಸಂಗಮದೇವನರೊಲಿಸುವ ಪರಿ ಎಂಬ ವಚನವನ್ನು ಹೇಳಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಇಷ್ಟು ನೌಕರಿಗಳನ್ನು ಕೊಡುತ್ತೇವೆ ಎಂದು ಸುಳ್ಳು ಭರವಸೆ ನೀಡಿರುತ್ತೇವೆ. ಅವು ಕಾರ್ಯರೂಪಕ್ಕೆ ಬಂದವೇ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು. ಅದಕ್ಕೇ ಅಣ್ಣನವರು ಹುಸಿಯ ನುಡಿಯಲು ಬೇಡ ಎಂದಿದ್ದಾರೆ. ಬಸವಣ್ಣನವರ ವಚನಗಳನ್ನು ಪಠಿಸಿದರಷ್ಟೇ ಸಾಲದು, ಅವುಗಳನ್ನು ಕಾರ್ಯರೂಪಕ್ಕೂ ತರಬೇಕಲ್ಲವೇ’ ಎಂದು ಪ್ರಶ್ನಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ,ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ್ ಮೋದಿ ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಮಾದನ ಹಿಪ್ಪರಗಾದ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ ವಹಿಸಿದ್ದರು.

ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ರವಿ ಬಿರಾದಾರ ಕಮಲಾ‍ಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಲಿಂಗಣ್ಣ ಬೋನಾಳ ವಿಶೇಷ ಉಪನ್ಯಾಸ ನೀಡಿದರು.

ಶಾಸಕರಾದ ಎಂ.ವೈ. ಪಾಟೀಲ, ಶರಣಬಸಪ್ಪ ದರ್ಶನಾಪೂರ, ಕನೀಜ್ ಫಾತಿಮಾ, ಮಾಜಿ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ, ರೇವೂ ನಾಯಕ ಬೆಳಮಗಿ, ಮಾಜಿ ಶಾಸಕ ಬಿ.ಆರ್. ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮುಖಂಡರಾದ ಬಸವರಾಜ ಭೀಮಳ್ಳಿ, ನೀಲಕಂಠರಾವ ಮೂಲಗೆ, ಭೀಮಾಶಂಕರ ಬಿಲಗುಂದಿ, ಜಗದೇವ ಗುತ್ತೇದಾರ, ನಾಸಿರ್ ಹುಸೇನ್ ಉಸ್ತಾದ್, ಶಿವಾನಂದ ಪಾಟೀಲ ಮರತೂರ, ವಿಜಯಕುಮಾರ್ ಜಿ. ರಾಮಕೃಷ್ಣ, ಅರುಣಕುಮಾರ್ ಪಾಟೀಲ್, ಅಂಬಾರಾಯ ಅಷ್ಠಗಿ ಇದ್ದರು.

ಕಾರ್ಯಕ್ರಮದಲ್ಲಿ ಸಾಧಕ ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಸ್ವಾಮಿಗಳನ್ನು ಜಾತಿಯಿಂದ ಗುರುತಿಸುವುದೇಕೆ?
ಸ್ವಾಮಿಗಳು ಎಂದರೆ ಸ್ವಾಮಿಗಳಷ್ಟೇ. ಅವರನ್ನು ಮಾದಾರ ಸ್ವಾಮೀಜಿ, ವಡ್ಡರ ಸ್ವಾಮೀಜಿ ಎಂದು ಜಾತಿಗಳ ಹಿನ್ನೆಲೆಯಿಂದ ಗುರುತಿಸುವುದೇಕೆ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಜಾತಿ ರಹಿತ ಸಮಾಜ ನಿರ್ಮಾಣ ಬಸವೇಶ್ವರರ ಗುರಿಯಾಗಿತ್ತು. ಆದರೆ, ಇಂದು ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುತ್ತಿದೆ. ಇದನ್ನು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಸವಣ್ಣ 12ನೇ ಶತಮಾನದಲ್ಲೇ ಅಂತರ್ಜಾತಿ ಮದುವೆ ಮಾಡಿದರು. ಆದರೆ, ಇಂದಿಗೂ ನಿರ್ಭಯವಾಗಿ ಅಂತರ್ಜಾತಿ ಮದುವೆಗಳು ನಡೆಯುತ್ತಿವೆಯೇ? ಎಷ್ಟೋ ಬಾರಿ ಇಲ್ಲದ ರಗಳೆ ಏಕೆ ಸುಮ್ಮನಾಗುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT