ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಮಾಜಿ ಸಚಿವ ಬಸವರಾಜ ಹೊರಟ್ಟಿ

ಶೈಕ್ಷಣಿಕ ಚಿಂತನ ವಿಚಾರ ಸಂಕಿರಣದ
Last Updated 21 ಜನವರಿ 2020, 11:00 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸರ್ಕಾರಿ ಸೇವೆ ತ್ಯಜಿಸಿ ಈ ಭಾಗದ ಅಭಿವೃದ್ಧಿಗಾಗಿ ಹೋರಾಟಕ್ಕಿಳಿದಿರುವ ಎಂ.ಬಿ. ಅಂಬಲಗಿ ಅವರ ಎಲ್ಲ ಹೋರಾಟಗಳಿಗೆ ಬೆಂಬಲ ನೀಡುವೆ’ ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಭರವಸೆ ನೀಡಿದರು.

ನಗರದಲ್ಲಿ ಸೋಮವಾರ ಆಯೋಜಿಸಿದ್ದ ಶೈಕ್ಷಣಿಕ ವಿಚಾರ ಸಂಕಿರಣದಲ್ಲಿ ‘ಕಲ್ಯಾಣ ಕರ್ನಾಟಕ ಶೈಕ್ಷಣಿಕ ಹೋರಾಟಗಾರ ಎಂ.ಬಿ. ಅಂಬಲಗಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಶೈಕ್ಷಣಿಕ ಸಮಸ್ಯೆ ಮುಂದಿಟ್ಟುಕೊಂಡು ಹೋರಾಡುತ್ತಿರುವ ಅಂಬಲಗಿ ಅವರಿಗೆ ಸಾರ್ವಜನಿಕರು ಬೆಂಬಲಿಸಬೇಕು’ ಎಂದರು.

‘ಖಾಸಗಿ ಶಾಲೆಗಳಿಗೆ ಮೈದಾನ ನಿರ್ಮಾಣ, ಪ್ರಯೋಗಾಲಯ, ಪೀಠೋಪಕರಣ ಖರೀದಿ, ಶೌಚಗೃಹ ನಿರ್ಮಿಸಲು ಅನುದಾನ ಕೊಡುವಂತೆ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಸಾಕಷ್ಟು ಅನುದಾನ ಬಳಕೆ ಆಗುತ್ತಿಲ್ಲ. ಅದನ್ನು ಶೈಕ್ಷಣಿಕ ಸಂಸ್ಥೆಗಳಿಗೆ ನೀಡುವ ಮೂಲಕ ನೆರವಿಗೆ ಬರಬೇಕು ಎಂಬ ಅಂಬಲಗಿ ಬೇಡಿಕೆ ನ್ಯಾಯಸಮ್ಮತವಾಗಿದೆ’ ಎಂದು ತಿಳಿಸಿದರು.

ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಮಾತನಾಡಿ, ‘ಕಲ್ಯಾಣ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಸೌಕರ್ಯ ಒದಗಿಸುವ ಅಗತ್ಯವಿದೆ. ಉಪನ್ಯಾಸಕರ ನೇಮಕಾತಿಯಲ್ಲಿ ಎಂಜಿನಿಯರಿಂಗ್ ಪದವೀಧರರ ನೇಮಕಕ್ಕೆ ಸರ್ಕಾರ ಚಿಂತನೆ ನಡೆಸಿದ್ದು ಸರಿಯಲ್ಲ. ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು’ ಎಂದರು.

ಈಶಾನ್ಯ ವಲಯ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ ಮಾತನಾಡಿ, ‘ಶಿಕ್ಷಕರ ನೇಮಕಕ್ಕೆ ಟಿಇಟಿ, ಸಿಇಟಿ, ಕೆಎಸ್‍ಇಟಿ ಮತ್ತು ಎನ್‍ಇಟಿ ಮುಂತಾದ ಪರೀಕ್ಷೆ ಬರೆಯುವ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಕೃಪಾಂಕ ನೀಡಬೇಕು. ಉನ್ನತ ಶಿಕ್ಷಣಕ್ಕಾಗಿ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು. ಎಲ್ಲ ಹುದ್ದೆ ಭರ್ತಿ ಮಾಡುವಂತೆ ಒತ್ತಾಯಿಸಿ ಫೆ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಗುವುದು’ ಎಂದು ಪ್ರಕಟಿಸಿದರು.

ಡಾ.ಬಿ.ಎಚ್. ಪುರವಂತಗಿ, ಗೌರಮ್ಮ ಪಾಟೀಲ, ನಿತಿನ್ ಕೋಸಗಿ, ಮಹಾಂತಯ್ಯ ಹಿರೇಮಠ, ನಾಗರಾಜ ಕುಲಕರ್ಣಿ, ಶಾಂತವೀರ ಹೀರಾಪುರ ಇದ್ದರು.

ಸಿಎಎಗೆ ಹೊರಟ್ಟಿ ವಿರೋಧ

ಪೌರತ್ವ (ತಿದ್ದುಪಡಿ) ಕಾಯ್ದೆ–ಸಿಎಎಯನ್ನು ಜಾರಿ ಮಾಡುವಾಗ ಒಂದೇ ಸಮುದಾಯವನ್ನು ಕೇಂದ್ರ ಸರ್ಕಾರ ಗುರಿಯಾಗಿಸಿಕೊಂಡಿದೆ. ಅಲ್ಲದೇ, ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಅಭಿಪ್ರಾಯ ಸಂಗ್ರಹಿಸುವ ಕೆಲಸವನ್ನೂ ಮಾಡಿಲ್ಲ ಎಂದು ಬಸವರಾಜ ಹೊರಟ್ಟಿ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಆನೆ ನಡೆದಿದ್ದೆ ದಾರಿ ಅನ್ನುವ ರೀತಿ ವರ್ತಿಸುತ್ತಿದ್ದಾರೆ.ಮನೆ ಯಜಮಾನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಒಳ್ಳೆಯದಾಗುತ್ತಿತ್ತು ಎಂದರು.

ಜೆಡಿಎಸ್ ‍ಪಕ್ಷದ ಮುಖಂಡರೊಂದಿಗೆ ಮುನಿಸಿಕೊಂಡ ಕುರಿತು ಪ್ರತಿಕ್ರಿಯಿಸಿದ ಹೊರಟ್ಟಿ,ರಾಜಕೀಯದಲ್ಲಿ ಸತ್ಯ ಹೇಳುವುದು ಅಪರಾಧವಾಗುತ್ತದೆ.ಈ ವಿಚಾರವಾಗಿ ದೇವೆಗೌಡರು ಮೊನ್ನೆ ಹೇಳಿದ್ದಾರೆ.ಉತ್ತರ ಕರ್ನಾಟಕಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತೇವೆ ಎಂದಿದ್ದಾರೆ. ದೇವೇಗೌಡರಂತೆ ಕುಮಾರಸ್ವಾಮಿ ಕಷ್ಟಪಟ್ಟಿಲ್ಲ. ಮೊದಲ ಅವಧಿಯ 20 ತಿಂಗಳಲ್ಲಿ ಕುಮಾರಸ್ವಾಮಿ ಒಳ್ಳೆ ಸರ್ಕಾರ ನೀಡಿದರು. ಆದ್ರೆ 14 ತಿಂಗಳಲ್ಲಿ ಒಳ್ಳೆ ಸರ್ಕಾರ ನೀಡಲಿಲ್ಲ.ಅದನ್ನು ನಾನು ಅವರಿಗೆ ಬಿಡಿಸಿ ಹೇಳಿದ್ದೆ.ದೇವೇಗೌಡರ ಮಾರ್ಗದರ್ಶನದಲ್ಲೇ ನಾವು ಇರುತ್ತೇವೆ.ಅಧಿಕಾರ ಇದ್ದಾಗ ಬೇರೆ, ಅಧಿಕಾರ ಇಲ್ಲದೆ ಇದ್ದಾಗ ಬೇರೆ ಇರುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT