‘ಉಪಕಾರ ಮಾಡುವುದು ಮನುಷ್ಯ ಗುಣ’

7

‘ಉಪಕಾರ ಮಾಡುವುದು ಮನುಷ್ಯ ಗುಣ’

Published:
Updated:
Deccan Herald

ಕಲಬುರ್ಗಿ: ‘ನಮ್ಮ ಜೀವನದಲ್ಲಿ ಯಾವುದಾದರೂ ರೀತಿಯಿಂದ ಯಾರಾದರೂ ಉಪಕಾರ ಮಾಡಿದರೆ ಅವರಿಗೆ ಮರಳಿ ಉಪಕಾರ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದು ಬೆಂಗಳೂರಿನ ಡಾ. ಡಿ.ಎಚ್.ರಾವ್ ಹೇಳಿದರು.

ನಗರದ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವ ವಿಶ್ವವಿದ್ಯಾಲಯದಿಂದ ಶನಿವಾರ ಹಮ್ಮಿಕೊಂಡಿದ್ದ ಬುನಾದಿ ತರಬೇತಿಯಲ್ಲಿ ಕುರಿತು ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸಬೇಕು. ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಹೊರಹೊಮ್ಮಬೇಕು’ ಎಂದರು.

‘ಸಣ್ಣ ಸಣ್ಣ ಕೆಲಸಗಳಿಗೆ ಸಹಾಯ ಮಾಡಿದವರಿಗೆ ಧನ್ಯವಾದ ಹೇಳಬೇಕು. ಇದರಿಂದ ಅವರಲ್ಲಿ ಇನ್ನಷ್ಟು ಸೇವೆ ಮಾಡುವ ಹುಮ್ಮಸ್ಸು ಬರುತ್ತದೆ. ಎಲ್ಲರನ್ನು ಗೌರವ ಭಾವದಿಂದ ಕಾಣಬೇಕು. ಜಾತಿ, ಧರ್ಮ, ವರ್ಣಗಳ ಆಧಾರದ ಮೇಲೆ ಭೇದ ಭಾವ ಮಾಡಬಾರದು’ ಎಂದು ನುಡಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ವರ್ತನೆಗಳು ಮಿತಕಾರಿಯಾಗಿರಬೇಕು. ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರ ಮಾಡಬಾರದು. ಇದು ಸಮಾಜದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಉಪಕಾರ ಮಾಡಿದ ಫಲ ನಮ್ಮ ಜೀವನದಲ್ಲಿ ತಿರುಗಿ ಬಂದೇ ಬರುತ್ತದೆ, ಅದಕ್ಕಾಗಿ ನಾವು ಕಾಯಬೇಕು’ ಎಂದು ಹೇಳಿದರು.

‘ಶಿಸ್ತು, ತಾಳ್ಮೆ, ಶ್ರದ್ಧೆಯಿಂದ ಕಾರ್ಯಗಳನ್ನು ಮಾಡಬೇಕು. ಬಿಡುವಿನ ವೇಳೆಯಲ್ಲಿ ಒಳ್ಳೆಯ ಪುಸ್ತಕಗಳನ್ನು ಓದಬೇಕು. ಯೋಗ, ಪ್ರಾಣಾಯಾಮ, ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಮ ಕುಲಪತಿ ಡಾ. ವಿ.ಡಿ.ಮೈತ್ರಿ, ಡೀನ್ ಡಾ.ಲಿಂಗರಾಜ ಶಾಸ್ತ್ರಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !