ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಇಡಿ ಪ್ರವೇಶ; ಕಾಲಾವಕಾಶಕ್ಕೆ ಒತ್ತಾಯ

ಆನ್‌ಲೈನ್‌ ಅಂಕಪಟ್ಟಿಗಳ ಮೇಲೆ ವಿ.ವಿ ಕುಲಸಚಿವರ ಸಹಿ ಕೇಳಿದ ಕಾಲೇಜುಗಳು, ತಪ್ಪದ ಪರದಾಟ
Last Updated 6 ಡಿಸೆಂಬರ್ 2021, 4:37 IST
ಅಕ್ಷರ ಗಾತ್ರ

ಕಲಬುರಗಿ: ಪ‍ದವಿ ‍ಪರೀಕ್ಷೆಯ ಅಂಕಪಟ್ಟಿ ಬರುವ ಮುನ್ನವೇ ಬಿ.ಇಡಿ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಆದ್ದರಿಂದ ದಾಖಲೆಗಳ ಪರಿಶೀಲನೆಗೆ ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಆಕಾಂಕ್ಷಿಗಳು ಒತ್ತಾಯಿಸಿದ್ದಾರೆ.

ಕೆಲವು ವಿಶ್ವವಿದ್ಯಾಲಯಗಳಲ್ಲಿ ಇನ್ನೂ ಪರೀಕ್ಷಾ ಫಲಿತಾಂಶ ಕೂಡ ಬಂದಿಲ್ಲ. ಫಲಿತಾಂಶಕ್ಕೂ ಮುಂಚೆಯೇ ಬಿ.ಇಡಿ ಪ್ರವೇಶಾತಿಗೆ ಅರ್ಜಿ ಕರೆದು ಗೊಂದಲ ಉಂಟು ಮಾಡಲಾಗಿದೆ. ಹೀಗಾಗಿ, ಅವರು ಶಿಕ್ಷಕರಾಗುವ ಕನಸಿಗೆ ಪೆಟ್ಟುಬಿದ್ದಿದೆ. ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಇಲಾಖೆ ನಡುವಿನ ಸಮನ್ವಯ ಕೊರತೆ ಕಾರಣ ಹಲವಾರು ವಿದ್ಯಾರ್ಥಿಗಳ ಭವಿಷ್ಯ ತ್ರಿಶಂಕು ಸ್ಥಿತಿಗೆ ಸಿಲುಕಿದೆ.

ರಾಜ್ಯದ ಎಲ್ಲ ಸರ್ಕಾರಿ ಕಾಲೇಜುಗಳಲ್ಲೂ ಈಗಾಗಲೇ ಪ್ರವೇಶಕ್ಕಾಗಿ ಮೂಲ ದಾಖಲಾತಿಗಳ ಪರಿಶೀಲನೆ ನಡೆದಿದೆ. ಆದರೆ, ಕೋವಿಡ್‌ ಕಾರಣದಿಂದ ಕೆಲವು ವಿಶ್ವವಿದ್ಯಾಲಯಗಳ ಪದವಿ 5ನೇ ಹಾಗೂ 6ನೇ ಸೆಮಿಸ್ಟರ್‌ ಪರೀಕ್ಷೆಗಳು ತಡವಾಗಿ ನಡೆದಿವೆ. ಹೀಗಾಗಿ, ಈವರೆಗೆ 5ನೇ ಸೆಮಿಸ್ಟರ್‌ನ ಅಂಕಪಟ್ಟಿ ಲಭ್ಯವಿದೆ. ಕೊನೆಯ ಸೆಮಿಸ್ಟರ್‌ ಫಲಿತಾಂಶ ಪ್ರಕಟವಾಗಿದ್ದು, ಅದರ ಅಂಕಪಟ್ಟಿ ಆನ್‌ಲೈನ್‌ನಲ್ಲಿ ಮಾತ್ರ ಸಿಗುತ್ತದೆ. ಈ ಅಂಕಪಟ್ಟಿಯ ಪ್ರತಿ ತೆಗೆದುಕೊಂಡು ಅದರ ಮೇಲೆ ಆಯಾ ಪದವಿ ಕಾಲೇಜುಗಳ ಪ್ರಾಂಶುಪಾಲರ ಸಹಿ ಪಡೆದರೂ ಬಿ.ಇಡಿ ಕಾಲೇಜುಗಳು ಪ್ರವೇಶಾತಿಗೆ ಅದನ್ನು ಪರಿಗಣಿಸಲು ತಯಾರಿಲ್ಲ.

ಕಲಬುರಗಿಯಲ್ಲಿರುವ ಸರ್ಕಾರಿ ಬಿ.ಇಡಿ ಕಾಲೇಜು ಪ್ರವೇಶಕ್ಕೆ ಬಂದಿದ್ದ ಹಲವು ವಿದ್ಯಾರ್ಥಿಗಳಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಆನ್‌ಲೈನ್‌ನಲ್ಲಿ ತೆಗೆದುಕೊಂಡ ಅಂಕಪಟ್ಟಿಗಳಿಗೆ ಕಾಲೇಜಿನ ಪ್ರಾಂಶುಪಾಲರ ಜತೆಗೆ, ಆಯಾ ವಿಶ್ವವಿದ್ಯಾಲಯದ ಕುಲಸಚಿವರ ಸಹಿಯನ್ನೂ ಪಡೆಯಬೇಕು ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಬೆಳಗಾವಿ, ವಿಜಯಪುರ, ಬಳ್ಳಾರಿ, ಧಾರವಾಡ ಸೇರಿದಂತೆ ವಿವಿಧೆಡೆ ಇರುವ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೂ ಇಲ್ಲಿ ಸೀಟ್‌ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಕಳೆದ ಒಂದು ವಾರದಿಂದ ದಾಖಲಾತಿಗೆ ಪರದಾಡುವಂತಾಗಿದೆ.‌

ಅಚ್ಚರಿಯೆಂದರೆ, ಗುಲಬರ್ಗಾ ವಿಶ್ವವಿದ್ಯಾಲಯದ ಪದವಿಯ 6ನೇ ಸೆಮಿಸ್ಟರ್‌ನ ಫಲಿತಾಂಶವೇ ಇನ್ನೂ ಬಂದಿಲ್ಲ! ಇದೇ ಪರಿಸ್ಥಿತಿ ಇನ್ನೂ ಕೆಲವು ವಿಶ್ವವಿದ್ಯಾಲಯಗಳಲ್ಲಿ ಇದೆ. ಈ ಕಾರಣಕ್ಕಾಗಿಯೇ ಬಿ.ಇಡಿ ‍ಪ್ರವೇಶಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು 5ನೇ ಸೆಮಿಸ್ಟರ್‌ವರೆಗಿನ ಅಂಕಪಟ್ಟಿಯೇ ಸಾಕು ಎಂದು ಸರ್ಕಾರ ಸಡಿಲಿಕೆ ನೀಡಿದೆ. ಆದರೆ, ಶಾಲಾ ದಾಖಲಾತಿಗಳ ಮೇಲೆ ಮುಖ್ಯಶಿಕ್ಷಕರ ಜತೆಗೆ ಕ್ಷೇತ್ರಶಿಕ್ಷಣಾಧಿಕಾರಿಯ ಸಹಿಯೂ ಇರಬೇಕು, ಪದವಿ ದಾಖಲೆ ಮೇಲೆ ಕುಲಸಚಿವರ ಸಹಿ ಇರಬೇಕು ಎಂಬ ನಿಯಮ ಮಾಡಿದ್ದು, ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿದೆ.‌

ಸದ್ಯ ದಾಖಲೆಗಳ ಪರಿಶೀಲನೆಗೆ ಡಿ. 10 ಕೊನೆಯ ದಿನ ಎಂದು ಪರಿಗಣಿಸಲಾಗಿದೆ. ಆದರೆ, ವಿಶ್ವವಿದ್ಯಾಲಯಗಳಿಂದ ಸಹಿ ತರಬೇಕಾದರೆ ಇನ್ನಷ್ಟು ಕಾಲಾವಕಾಶ ಬೇಕು. ಅಥವಾ ಕಾಲೇಜು ಪ್ರಾಂಶುಪಾಲರ ಸಹಿಯನ್ನೇ ಮಾನ್ಯ ಮಾಡಬೇಕು ಎಂಬುದು ಹಲವರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT