ಸಾಲ ಮನ್ನಾ : ಜಿಲ್ಲೆಯ 30 ಸಾವಿರ ರೈತರಿಗೆ ಅನುಕೂಲ

7

ಸಾಲ ಮನ್ನಾ : ಜಿಲ್ಲೆಯ 30 ಸಾವಿರ ರೈತರಿಗೆ ಅನುಕೂಲ

Published:
Updated:

ಕಲಬುರ್ಗಿ: ಜಿಲ್ಲೆಯಲ್ಲಿ ಸಹಕಾರ ಸಂಘಗಳಿಂದ ರೈತರು ಪಡೆದ ₹ 319 ಕೋಟಿ ಸಾಲ ಮನ್ನಾ ಆಗಲಿದೆ. ಇದರಿಂದ 30 ಸಾವಿರಕ್ಕೂ ಹೆಚ್ಚು ರೈತರು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 28 ಲಕ್ಷ ರೈತರು ಸಹಕಾರ ಸಂಘಗಳಿಂದ, 28 ಲಕ್ಷ ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆದಿದ್ದು, ಅವರೆಲ್ಲ ಫಲಾನುಭವಿ ಆಗಿದ್ದಾರೆ. ಸುಮಾರು 15 ಲಕ್ಷ ರೈತರು ಖಾಸಗಿ ಲೇವಾದೇವಿದಾರರ ಸಾಲದಲ್ಲಿದ್ದು, ಅದನ್ನೂ ಮಾಫಿ ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ರಾಜ್ಯಪಾಲರಿಗೆ ಕಡತ ಸಲ್ಲಿಸಲಾಗಿದೆ’ ಎಂದರು.

‘ಇನ್ನೂ ಕೆಲವು ರೈತರು ಪಿಎಲ್‌ಡಿ ಬ್ಯಾಂಕಿನಿಂದ ಕೃಷಿ ಸಲಕರಣೆ ಖರೀದಿಗೆ ಸಾಲ ಪಡೆದಿದ್ದಾರೆ. ಆ ಸಾಲ ಮನ್ನಾ ಸದ್ಯಕ್ಕೆ ಇಲ್ಲ. ಮುಂದಿನ ದಿನಗಳಲ್ಲಿ ಚರ್ಚಿಸಿ ತೀರ್ಮಾಣ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಫೀಡ್‌ಪ್ಲ್ಯಾಂಟ್‌’ ನಿರ್ಮಾಣಕ್ಕೆ ಪ್ರಸ್ತಾವ: ಈ ಭಾಗದಲ್ಲಿ ಹಾಲು ಉತ್ಪಾದನೆಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕಿದೆ. ಇದಕ್ಕೆ ಅನುಕೂಲವಾಗುವಂತೆ ಪಶು ಆಹಾರ ಉತ್ಪಾದನಾ ಘಟಕ (ಫೀಡ್‌ಪ್ಲ್ಯಾಂಟ್‌) ನಿರ್ಮಾಣ ಮಾಡಲು ಪ್ರಸ್ತಾವ ಸಲ್ಲಿಸಿದ್ದೇನೆ’ ಎಂದು ಸಚಿವ ಕಾಶೆಂಪುರ ತಿಳಿಸಿದರು.

‘ಗುಲಬರ್ಗಾ– ಬೀದರ್‌ ಹಾಗೂ ಯಾದಗಿರಿ ಹಾಲು ಉತ್ಪಾದಕ ಸಹಕಾರರ ಸಂಘಗಳ ಒಕ್ಕೂಟದಿಂದ ಪ್ರತಿ ದಿನ 70 ಸಾವಿರ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ 60 ಸಾವಿರ ಲೀಟರ್‌ ಇಲ್ಲಿಯೇ ಖರ್ಚಾಗುತ್ತಿದೆ. ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಹೊರರಾಜ್ಯದಿಂದ ಸರಬರಾಜು ಆಗುತ್ತಿರುವ ಹಾಲನ್ನು ನಿಯಂತ್ರಿಸುವುದು ನಮ್ಮ ಮುಂದಿರುವ ಉದ್ದೇಶ. ಕಳಪೆ ಹಾಲು ಸರಬರಾಜು ಮಾಡುವ ಕಂಪನಿಗಳನ್ನು ‘ಕಪ್ಪುಪಟ್ಟಿ’ಗೆ ಸೇರಿಸಲು ಈಗಾಗಲೇ ಆದೇಶ ಹೊರಡಿಸಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !