ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ದಿಢೀರ್ ವರ್ಗಾವಣೆ

ಚಿತ್ತಾಪುರ: ಆದೇಶ ಉಲ್ಲಂಘಿಸಿ ಶೂ, ಸಾಕ್ಸ್ ಖರೀದಿ ಪ್ರಕರಣ
Last Updated 14 ಅಕ್ಟೋಬರ್ 2019, 16:26 IST
ಅಕ್ಷರ ಗಾತ್ರ

ಚಿತ್ತಾಪುರ: ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ ಅವರನ್ನು ಕಲಬುರ್ಗಿ ಸಿ.ಟಿ.ಇ ಕಾಲೇಜಿನಲ್ಲಿ ಖಾಲಿಯಿದ್ದ ಉಪನ್ಯಾಸಕಿ ಹುದ್ದೆಗೆ ವರ್ಗಾವಣೆ ಮಾಡಿ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಡಿ ನಾಗೇಂದ್ರ ಅವರು ಅ.12 ರಂದು ಆದೇಶ ಹೊರಡಿಸಿದ್ದಾರೆ.

ಕಲಬುರ್ಗಿ ಜಗತ್ ಏರಿಯಾದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಈಶ್ವರಪ್ಪ ಬಿ. ನೀರಡಗಿ ಅವರನ್ನು ಚಿತ್ತಾಪುರಕ್ಕೆ ಸ್ವತಂತ್ರ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಿಯೋಜನೆ ಮಾಡಿದ್ದಾರೆ. ನೀರಡಗಿ ಅವರು ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಶೂ, ಸಾಕ್ಸ್ ಖರೀದಿ ವರದಿ ಪರಿಣಾಮ: 2019-20ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ 1 ರಿಂದ 10ನೇ ತರಗತಿ ಮಕ್ಕಳಿಗೆ ಉಚಿತವಾಗಿ ವಿತರಿಸಲು ಶೂ, ಸಾಕ್ಸ್ ಖರೀದಿ ಕುರಿತು, 'ಮಾಹಿತಿ ಮುಚ್ಚಿಟ್ಟ ಶಿಕ್ಷಣಾಧಿಕಾರಿ, ಮೇಲ್ವಿಚಾರಣೆ ಮರೆತ ಹಿರಿಯ ಅಧಿಕಾರಿ-ಸರ್ಕಾರದ ಆದೇಶ ಉಲ್ಲಂಘಿಸಿ ಶೂ, ಸಾಕ್ಸ್ ಖರೀದಿ' ಎಂಬ ಶೀರ್ಷಿಕೆಯಡಿ ಪ್ರಜಾವಾಣಿ ಸೆ.26ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ತಾಲ್ಲೂಕಿನಲ್ಲಿ ಗ್ರೀನ್ ಶೂ ಕಂಪನಿಯ ಶೂ ಖರೀದಿ ಮತ್ತು ವಿತರಣೆ ಮಾಡುತ್ತಿರುವ ಬಗ್ಗೆ ಪತ್ರಿಕೆ ವರದಿ ಮಾಡಿತ್ತು.

ವರದಿ ಪ್ರಕಟವಾದ ದಿನವೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ ರಾಜಾ ಅವರು ಸಮಗ್ರ ವರದಿ ನೀಡುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಫ್ಯಾಕ್ಸ್ ಮೂಲಕ ಪತ್ರ ಬರೆದು ಸೂಚಿಸಿದ್ದರು.

ಶೂ, ಸಾಕ್ಸ್ ಖರೀದಿ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ ಅವರನ್ನು ಡಿಡಿಪಿಐ ಕಚೇರಿಯ ಹದ್ದೆಯೊಂದಕ್ಕೆ ವರ್ಗಾವಣೆಗೊಳಿಸಲು ಮುಂದಾಗಿತ್ತು ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಶೂ, ಸಾಕ್ಸ್ ಖರೀದಿ ಪ್ರಕರಣವನ್ನು ಮುಚ್ಚಿಹಾಕಲು ವರ್ಗಾವಣೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಚೆಕ್ ನೀಡಲು ಹಿಂದೇಟು: ಸರ್ಕಾರ ಸೂಚಿಸಿದ ಕಂಪೆನಿಗಳನ್ನು ಹೊರತುಪಡಿಸಿ ಬೇರೆ ಕಂಪೆನಿಯ ಶೂ, ಸಾಕ್ಸ್ ಖರೀದಿಸಿ ವಿತರಿಸಲಾಗುತ್ತಿದೆ ಎಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ನಂತರ ಶಾಲಾ ಮುಖ್ಯ ಶಿಕ್ಷಕರು ಶೂ, ಸಾಕ್ಸ್ ಸರಬರಾಜು ಮಾಡಿದ ಅಂಗಡಿಯವರಿಗೆ ಹಣದ ಚೆಕ್ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT