ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ರಸ್ತೆಗಿಳಿಯದ ಬಸ್; ಭಾರತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಆಟೊ, ಖಾಸಗಿ ವಾಹನ ಸಂಚಾರ ಯಥಾಸ್ಥಿತಿ
Last Updated 8 ಜನವರಿ 2019, 14:05 IST
ಅಕ್ಷರ ಗಾತ್ರ

ಕಲಬುರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಜ. 8 ಮತ್ತು 9ರಂದು ಕರೆ ನೀಡಿರುವ ಭಾರತ ಬಂದ್‌ಗೆ ಮೊದಲ ದಿನವಾದ ಮಂಗಳವಾರ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಹೀಗಾಗಿ ಕೇಂದ್ರ ಬಸ್ ನಿಲ್ದಾಣದ ಆವರಣ ಬಿಕೋ ಎನ್ನುತ್ತಿತ್ತು. ಪರ ಊರುಗಳಿಂದ ಬಂದವರು ಮತ್ತು ಹೋಗಬೇಕಾದವರು ಪರದಾಡುವಂತಾಯಿತು.

ಆಟೊ, ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಇತ್ತು. ಕೆಲವು ಆಟೊ ಚಾಲಕರು ನಿಗದಿತ ದರದ ಎರಡರಷ್ಟು ಹಣ ಪಡೆಯುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು. ಎಂಎಸ್‌ಕೆ ಮಿಲ್, ಕೇಂದ್ರ ಬಸ್ ನಿಲ್ದಾಣ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಸೂಪರ್ ಮಾರ್ಕೆಟ್ ರಸ್ತೆವರೆಗಿನ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಸೂಪರ್ ಮಾರ್ಕೆಟ್‌, ಗಂಜ್ ಹಾಗೂ ನಗರದ ವಿವಿಧ ಬಡಾವಣೆಗಳಲ್ಲಿ ಅಂಗಡಿಗಳು ಎಂದಿನಂತೆ ತೆರೆದಿದ್ದವು. ವ್ಯಾಪಾರ–ವಹಿವಾಟವೂ ಸಹಜವಾಗಿತ್ತು. ವಾಹನ ಸಂಚಾರ ವಿರಳವಾಗಿತ್ತು.

ಕಣ್ಣಿ ಮಾರುಕಟ್ಟೆ ಮತ್ತು ಸೂಪರ್ ಮಾರ್ಕೆಟ್‌ನಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಕೂಡ ವ್ಯಾಪಾರ ಎಂದಿನಂತೆ ಇತ್ತು. ಆದರೆ, ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಹಲವೆಡೆ ಪೆಟ್ರೋಲ್ ಬಂಕ್‌ಗಳು ಬಂದ್ ಆಗಿದ್ದವು.

ಸಂಜೆ ನಂತರ ಅಂಗಡಿ–ಮುಂಗಟ್ಟುಗಳು ತೆರೆದವು. ಬಸ್ ಸಂಚಾರ ಆರಂಭಗೊಂಡಿತು.

ಶಾಲಾ–ಕಾಲೇಜು ಬಂದ್: ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಹೀಗಾಗಿ ವಿದ್ಯಾರ್ಥಿಗಳು ರಸ್ತೆಗೆ ಇಳಿಯಲಿಲ್ಲ. ಬ್ಯಾಂಕ್ ಹಾಗೂ ಅಂಚೆ ನೌಕರರು ಕೂಡ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.

ಎಐಟಿಯುಸಿ, ಐಎನ್‌ಟಿಯುಸಿ, ಸಿಪಿಐ, ಸಿಐಟಿಯು, ಟಿಯುಸಿಸಿ, ಎಐಸಿಸಿಟಿಯು, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು), ಅಂಗನವಾಡಿ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ಅನೇಕರು ಅಲ್ಲಲ್ಲಿ ಪ್ರತಿಭಟನೆ, ಬೈಕ್ ರ್‍ಯಾಲಿ, ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮನವಿಪತ್ರ ಸಲ್ಲಿಸಿದರು.

ಮುಖಂಡರಾದ ಮಾರುತಿ ಮಾನ್ಪಡೆ, ಎಸ್.ಕೆ.ಕಾಂತಾ, ಗೌರಮ್ಮ ಪಾಟೀಲ, ಗಂಗಮ್ಮ ಬಿರಾದಾರ, ಭೀಮಶೆಟ್ಟಿ ಯಂಪಳ್ಳಿ, ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡಿಯಾಳ, ಮೌಲಾಮುಲ್ಲಾ, ಜಗದೇವಿ ಹೆಗಡೆ, ವಿಠ್ಠಲ ಪೂಜಾರಿ, ಸುಧಾಮ ಧನ್ನಿ, ಶಾಂತಪ್ಪ ಪಾಟೀಲ, ಎಸ್.ಎಂ.ಶರ್ಮಾ, ಭೀಮಾಶಂಕರ ಪಾಣೇಗಾಂವ ಇದ್ದರು.

ಪೊಲೀಸರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಮಾಡಿದ್ದರು.

ಬೇಡಿಕೆ ಈಡೇರಿಕೆಗೆ ಆಗ್ರಹ: ಕಾರ್ಪೋರೇಟ್ ಬಂಡವಾಳ ಪರ ಕಾರ್ಮಿಕ ಕಾನೂನುಗಳ ತಿದ್ದುಪಡಿ ಮತ್ತು ಮೋಟಾರು ವಾಹನ (ತಿದ್ದುಪಡಿ) ಮಸೂದೆಯನ್ನು ಕೈಬಿಡಬೇಕು. ಬೆಲೆ ಏರಿಕೆ ನಿಯಂತ್ರಿಸಬೇಕು ಮತ್ತು ಸಾರ್ವತ್ರಿಕ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಬ್ಯಾಂಕ್, ವಿಮೆ ಮತ್ತು ರಕ್ಷಣಾ ವಲಯಗಳಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಪಿಕೆಜಿಬಿ ನೌಕರರು ಭಾಗಿ: ದಿನಗೂಲಿ ನೌಕರರ ಕಾಯಂಮಾತಿ, ಸಮಾನ ಪಿಂಚಣಿ ಜಾರಿಗೆ ಒತ್ತಾಯಿಸಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘದ ಸದಸ್ಯರು ಪ್ರತಿಭಟನಾ ರ್‍ಯಾಲಿ ನಡೆಸಿದರು.

ಗ್ರಾಮೀಣ ಬ್ಯಾಂಕುಗಳ ಖಾಸಗೀಕರಣವನ್ನು ಕೈಬಿಡಬೇಕು. ವಾಣಿಜ್ಯ ಬ್ಯಾಂಕುಗಳಲ್ಲಿರುವ ನೇಮಕಾತಿ ಮತ್ತು ಬಡ್ತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಅಭಿಜಿತ್ ರೋಣಿಹಾಳ, ಕಾರ್ಯದರ್ಶಿ ರವಿ ಸೊಂಡೂರ, ಪದಾಧಿಕಾರಿಗಳಾದ ಕೈಲಾಸ ಬೆಳ್ಳಿ, ಶರಣಗೌಡ ಬಿರಾದಾರ, ಪ್ರಸನ್ನ ಕುಲಕರ್ಣಿ, ಪರಮೇಶ್ವರ ಪಾತಾಳೆ, ಸಿದ್ದಣ್ಣ, ಕೇಶವ ರಾಠೋಡ ರ್‍ಯಾಲಿಯ ನೇತೃತ್ವ ವಹಿಸಿದ್ದರು.

ಬೈಕ್ ರ್‍ಯಾಲಿ: ಬಂದ್ ಬೆಂಬಲಿಸಿ ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಅಸೋಸಿಯೇಷನ್‌ ಪದಾಧಿಕಾರಿಗಳು ಬೈಕ್ ರ್‍ಯಾಲಿ ನಡೆಸಿದರು. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಬಂದ್‌ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT