ತೈಲ ಬೆಲೆ ಏರಿಕೆ; ಮಾತನಾಡದ ಮೋದಿ: ಸಂಸದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

7
ತಕ್ಕ ಪಾಠ ಕಲಿಸಲು ಮನವಿ

ತೈಲ ಬೆಲೆ ಏರಿಕೆ; ಮಾತನಾಡದ ಮೋದಿ: ಸಂಸದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

Published:
Updated:

ಕಲಬುರ್ಗಿ: ‘4 ವರ್ಷಗಳಲ್ಲಿ 13 ಬಾರಿ ತೈಲ ಬೆಲೆ ಏರಿಕೆಯಾಗಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ನಗರದ ಹಳೆ ಚೌಕ್ ಪೊಲೀಸ್ ಠಾಣೆ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ‘ಭಾರತ ಬಂದ್’ ಅಂಗವಾಗಿ ಸೋಮವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ 4 ವರ್ಷ 5 ತಿಂಗಳಲ್ಲಿ ತೈಲ ಬೆಲೆ ಶೇ 214ರಷ್ಟು ಏರಿಕೆಯಾಗಿದೆ. ಯುಪಿಎ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 120 ರಿಂದ 140 ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ ₹55 ರಿಂದ 66 ಹಾಗೂ ಡೀಸೆಲ್ ಬೆಲೆ ₹35 ರಿಂದ 40 ಇತ್ತು. ಆದರೆ, ಇಂದು ಪ್ರತಿ ಬ್ಯಾರಲ್‌ ಕಚ್ಚಾ ತೈಲದ ದರ 80 ಡಾಲರ್ ಇದೆ. ಆದರೆ, ಪೆಟ್ರೋಲ್ ಬೆಲೆ ₹83 ಆಗಿದೆ. ಹಾಗಾದರೆ ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಏರಿಸಿ ಸಂಗ್ರಹಿಸಿದ ₹11 ಲಕ್ಷ ಕೋಟಿ ಎಲ್ಲಿ ಹೋಯಿತು’ ಎಂದು ಪ್ರಶ್ನಿಸಿದರು.

‘ಕಪ್ಪುಹಣ, ಉಗ್ರವಾದ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ನೋಟು ರದ್ದತಿ ಮಾಡಲಾಗಿತ್ತು’ ಎಂದು ಮೋದಿ ಹೇಳುತ್ತಾರೆ. ಆದರೆ, ಒಂದನ್ನೂ ನಿಯಂತ್ರಿಸಿಲ್ಲ. ಬರೀ ಭಾಷಣ ಮಾಡುತ್ತ ದೇಶದ ಆರ್ಥಿಕ ಸ್ಥಿತಿಯನ್ನು ಹದಗೆಡಿಸುತ್ತಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಎಂದಿದ್ದರು. ಆದರೆ, ಇಲ್ಲಿಯವರೆಗೆ ಕೇವಲ 25 ಲಕ್ಷ ಉದ್ಯೋಗ ಮಾತ್ರ ಸೃಷ್ಟಿಯಾಗಿವೆ. ಈ ಬಗ್ಗೆ ಕೇಳಿದರೆ ಪಕೋಡಾ ಮಾರುತ್ತಿದ್ದಾರೆ ಎಂದು ಹೇಳುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಸಿಸಿ ಕಾರ್ಯದರ್ಶಿ ಸಾಕೆ ಸೈಲಜಾನಾಥ, ಶಾಸಕರಾದ ಇಕ್ಬಾಲ್ ಅಹಮ್ಮದ್ ಸರಡಗಿ, ಕನ್ನೀಜ್ ಫಾತಿಮಾ, ಮೇಯರ್ ಶರಣಕುಮಾರ ಮೋದಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಡಾ.ಶರಣಪ್ರಕಾಶ ಪಾಟೀಲ, ಬಿ.ಆರ್.ಪಾಟೀಲ, ಅಲ್ಲಮಪ್ರಭು ಪಾಟೀಲ, ಇಲಿಯಾಸ್ ಭಾಗವಾನ್, ತಿಪ್ಪಣ್ಣಪ್ಪ ಕಮಕನೂರ, ಭೀಮರೆಡ್ಡಿ ಪಾಟೀಲ ಇದ್ದರು.

‘ಕಲಬುರ್ಗಿ ಹೇಗಿತ್ತು, ಈಗ ಹೇಗಿದೆ?’

‘70 ವರ್ಷದಲ್ಲಿ ಕಾಂಗ್ರೆಸ್‌ನವರು ಏನು ಮಾಡಿದ್ದಾರೆ’ ಎಂದು ಮೋದಿ ಕೇಳುತ್ತಾರೆ. ‘70 ವರ್ಷದ ಹಿಂದೆ ಕಲಬುರ್ಗಿ ಹೇಗಿತ್ತು, ಈಗ ಹೇಗಿದೆ ಎಂಬುದು ಮೋದಿ ಅವರಿಗೆ ಗೊತ್ತಿದೆಯೇ’ ಎಂದು ಖರ್ಗೆ ಪ್ರಶ್ನಿಸಿದರು.

‘ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ವೈದ್ಯಕೀಯ ಕಾಲೇಜು, ಇಎಸ್‌ಐ ಆಸ್ಪತ್ರೆ ಸ್ಥಾಪಿಸಲಾಗಿದೆ. ಈಗ ವಿಮಾನ ನಿಲ್ದಾಣದ ನಿರ್ಮಾಣವಾಗುತ್ತಿದೆ. ಇದನ್ನೆಲ್ಲ ಅಮಿತ್ ಷಾ, ಮೋದಿ ಮಾಡಿದ್ದಾರಾ’ ಎಂದು ವ್ಯಂಗ್ಯವಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !