ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಲ್ಲಿ ನೀರೂರಿಸುವ ‘ಬಿಜಾಪುರ ಚೂಡಾ’

ಅಪ್ಪನ ಜಾತ್ರೆಯಲ್ಲಿ ಗಮನ ಸೆಳೆಯುತ್ತಿರುವ ಬಗೆಬಗೆಯ ತಿನಿಸುಗಳು
Last Updated 15 ಮಾರ್ಚ್ 2023, 5:24 IST
ಅಕ್ಷರ ಗಾತ್ರ

ಕಲಬುರಗಿ: ಬಿಸಿಲಿನ ತಾಪ ಇಳಿಕೆ ಆಗುತ್ತಿದ್ದಂತೆ ಜನರು ತಂಡೋಪತಂಡವಾಗಿ ಅಪ್ಪನ ಜಾತ್ರಾ ಮೈದಾನದತ್ತ ಬರುತ್ತಿದ್ದಾರೆ. ಜಾತ್ರೆ ಮೈದಾನಕ್ಕೆ ಕಾಲಿಡುತ್ತಿದ್ದಂತೆ ‘ಬಿಜಾಪುರ ಚೂಡಾ’ ಮಳಿಗೆಗಳು ಗಮನ ಸೆಳೆಯುತ್ತವೆ. ಖಾರ ಮಿಶ್ರಿತವಾದ ಈ ಮಂಡಕ್ಕಿ ಚೂಡಾ ಬಾಯಲ್ಲಿ ನೀರೂರಿಸದೆ ಇರದು.

ಶರಣಬಸವೇಶ್ವರ ದೇವಸ್ಥಾನದ ಎದುರಿನ ರಸ್ತೆಯ ಬಲಬದಿಯಲ್ಲಿ ‘ಬಿಜಾಪುರ ಚೂಡಾ’ದ ಎರಡು ಮಳಿಗೆ ಗಳಿವೆ. ರುಚಿರುಚಿಯಾದ ಚೂಡಾದ ಜೊತೆಗೆ ಜಿಲೇಬಿ, ಪಕೋಡಾ, ಮಿರ್ಚಿ ಭಜ್ಜಿ, ಪಾಪಡ ಖಾರ, ಸಾಬೂದಾಣಿ ಸೇರಿ ವಿವಿಧ ಖಾದ್ಯಗಳನ್ನು ಮಾರಲಾಗುತ್ತಿದೆ. 20ಕ್ಕೂ ಹೆಚ್ಚು ದಿನ ಈ ಮಳಿಗೆಗಳು ಇಲ್ಲಿ ಇರುತ್ತವೆ.

ಮಂಡಕ್ಕಿ, ಖಾರದ ಪುಡಿ, ಶೇಂಗಾ, ಪುಟಾಣಿ, ಮಸಾಲ, ಅಡುಗೆ ಎಣ್ಣೆ, ಕರಿಬೇವಿನಿಂದ ಚೂಡಾ ತಯಾರಿಸಲಾಗುತ್ತದೆ. 250 ಗ್ರಾಂ ಚೂಡಾಗೆ ₹ 100 ದರ ಇದ್ದರೆ ಲೀಟರ್‌ ಮಾಪ್‌ಗೆ ₹ 60 ಮತ್ತು ₹ 30 ಇದೆ. ಇವುಗಳನ್ನು ಅಳತೆ ಮಾಡಿ ಕಟ್ಟಿ ಇಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಬೇಕಾದಲ್ಲಿ ಖುಲ್ಲಾ ಚೂಡಾ ತೂಕ ಮಾಡಿ ಕೊಡಲಾಗುತ್ತದೆ. ಕೆಲವರು ಕೆಜಿಗಟ್ಟಲೇ ಚೂಡಾ ಕೊಂಡೊಯ್ಯುತ್ತಿರುವುದು ಕಂಡುಬಂತು.

‘50 ಚೀಲ ಮಂಡಕ್ಕಿ(ಮಂಡಾಳು), ಅರ್ಧ ಕ್ವಿಂಟಲ್‌ ಬ್ಯಾಡಗಿ ಮೆಣಸಿನಕಾಯಿ ಖಾರ, 1 ಕ್ವಿಂಟಲ್‌ ಶೇಂಗಾ, 40 ಕೆ.ಜಿ. ಪುಟಾಣಿ, ₹ 30 ಸಾವಿರ ಮೊತ್ತದ ಮಸಾಲ ಪದಾರ್ಥ, ತಲಾ 15 ಕೆ.ಜಿಯ 30 ಟಿನ್‌ ಅಡುಗೆ ಎಣ್ಣೆ ಮತ್ತು ಕರಿಬೇವು ತೆಗೆದುಕೊಂಡು ಬಂದಿದ್ದೇವೆ. ಕಡಿಮೆ ಬಿದ್ದ ವಸ್ತುಗಳನ್ನು ಮತ್ತೆ ತರಿಸುತ್ತೇವೆ’ ಎಂದು ವ್ಯಾಪಾರಿ ಅಮೋಘಸಿದ್ಧ ಖಂಜೆದಾರ ತಿಳಿಸಿದರು.

‘ನಮ್ಮದು ವಿಜಯಪುರ. ಸೊಲ್ಲಾಪುರದಲ್ಲಿ ವಾಸ ಮಾಡುತ್ತೇವೆ. 30 ವರ್ಷಗಳಿಂದ ಶರಣಬಸವೇಶ್ವರ ಜಾತ್ರೆಗೆ ಬರುತ್ತಿದ್ದೇವೆ. ಎಲ್ಲ ಕಚ್ಚಾವಸ್ತುಗಳ ಬೆಲೆ ಏರಿಕೆ ಆಗಿದ್ದರಿಂದ ವರ್ಷದಿಂದ ವರ್ಷಕ್ಕೆ ವಹಿವಾಟು ಇಳಿಕೆ ಆಗುತ್ತಿದೆ. ಶರಣಬಸವನ ಮೇಲೆ ಭಾರ ಹಾಕಿ ಜಾತ್ರೆಯಲ್ಲಿ ಮಳಿಗೆ ಹಾಕಿದ್ದೇವೆ’ ಎನ್ನುತ್ತಾರೆ ಅವರು.

‘ಒಂದು ಬಾರಿ ‘ಬಿಜಾಪುರ ಚೂಡಾ’ ರುಚಿ ನೋಡಿದರೆ ಖರೀದಿ ಮಾಡದೇ ಇರಲಾಗದು. ಪಾರ್ಸೆಲ್‌ ಜೊತೆಗೆ ಸ್ಥಳ ದಲ್ಲಿಯೂ ಕೊಡುತ್ತಿರುವುದು ವಿಶೇಷ. ಈರುಳ್ಳಿ, ನಿಂಬೆ ರಸ ಬೆರೆಸಿ ಚೂಡಾ ತಿಂದರೆ ಅದರ ಮಜವೇ ಬೇರೆ’ ಎಂದು ಅಫಜಲಪುರದ ಗ್ರಾಹಕ ರವಿಕಿರಣ ಖುಷಿಯಿಂದ ಹೇಳಿಕೊಂಡರು.

ಸಿಹಿ ತಿನಿಸುಗಳ ಸಾಲುಸಾಲು ಮಳಿಗೆ

ಜಾತ್ರೆಯಲ್ಲಿ ಬೆಂಡು– ಬತ್ತಾಸು, ಪೇಢೆ, ಜಿಲೇಬಿ, ಬಾಲುಶಾ, ಮಾಲಪುರಿನಿಂದ ಹಿಡಿದು ಬಹುಪಾಲು ಸಿಹಿ ತಿನಿಸುಗಳ ಮಳಿಗೆಗಳನ್ನು ಶರಣಬಸವೇಶ್ವರ ದೇವಸ್ಥಾನದ ರಸ್ತೆಯ ಇಕ್ಕೆಲಗಳಲ್ಲಿ ಹಾಕಲಾಗಿದೆ. ಗೋಬಿ ಮಂಚೂರಿ, ಭಜ್ಜಿ, ಪಕೋಡಾ, ಚುರುಮುರಿ, ಸೂಸಲಾ, ಪಾನಿಪುರಿ ಸೇರಿದಂತೆ ಬಗೆಬಗೆಯ ಕುರುಕಲು ತಿಂಡಿಗಳಿಗೂ ಇಲ್ಲಿ ಬರವಿಲ್ಲ.

ಬಿಸಿಲಿನ ಧಗೆ ಹೆಚ್ಚಾಗಿದ್ದರಿಂದ ಐಸ್‌ಕ್ರೀಮ್‌, ಹಣ್ಣಿನ ಜೂಸ್‌, ಕಬ್ಬಿನ ಹಾಲು, ಮಜ್ಜಿಗೆ, ಬದಾಮಿ ಹಾಲು, ಕಲ್ಲಂಗಡಿ ಮಾರಾಟ ಕೂಡ ಬಲು ಜೋರಾಗಿದೆ.

ಪ್ರತಿ ವರ್ಷ ಶರಣಬಸವೇಶ್ವರ ಜಾತ್ರೆಗೆ ಬಂದಾಗ ‘ಬಿಜಾಪುರ ಚೂಡಾ’ ತೆಗೆದುಕೊಂಡು ಹೋಗುತ್ತೇವೆ. ಖಾರ ಮಿಶ್ರಿತವಾದ ಈ ಮಂಡಕ್ಕಿ ಚೂಡಾ ತಿನ್ನಲು ಬಹುರುಚಿಯಾಗಿರುತ್ತದೆ. ಕುಟುಂಬಸ್ಥರೆಲ್ಲರೂ ಇದನ್ನು ಇಷ್ಟಪಡುತ್ತಾರೆ.
-ದೊಡ್ಡಯ್ಯ ಸ್ವಾಮಿ, ಕಲಬುರಗಿ

ಕಲಬುರಗಿ ಶರಣಬಸವೇಶ್ವರ ಜಾತ್ರೆಗೆ ಚೂಡಾ ಮಳಿಗೆ ಹಾಕಲು ಕುಟುಂಬ ಸಮೇತ ತಪ್ಪದೇ ಬರುತ್ತೇವೆ. ಚೂಡಾಗೆ ತಕ್ಕಮಟ್ಟಿಗೆ ಬೇಡಿಕೆ ಇದೆ. ಆದರೆ, ಕಚ್ಚಾವಸ್ತುಗಳ ಬೆಲೆ ಏರಿಕೆಯೇ ನಮಗೆ ಸವಾಲಾಗುತ್ತದೆ.
-ಅಮೋಘಸಿದ್ಧ ಖಂಜೆದಾರ, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT