ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಉತ್ತರ ಕ್ಷೇತ್ರ: ಕಾಂಗ್ರೆಸ್ ಗೆಲುವಿನ ಓಟಕ್ಕೆ ಬಿಜೆಪಿ, ಜೆಡಿಎಸ್ ಲಗಾಮು?

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆ ಸಾಧ್ಯತೆ
Last Updated 14 ಫೆಬ್ರುವರಿ 2023, 8:53 IST
ಅಕ್ಷರ ಗಾತ್ರ

ಕಲಬುರಗಿ: 2008ರಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆಯಾದ ಬಳಿಕ ಕಲಬುರಗಿ ಉತ್ತರ ಕ್ಷೇತ್ರವನ್ನು ಬಿಟ್ಟುಕೊಡದ ಕಾಂಗ್ರೆಸ್ ಈ ಬಾರಿಯೂ ಗೆಲುವನ್ನು ಮುಂದುವರೆ ಸಲಿದೆಯೇ? ಅದಕ್ಕೆ ಬಿಜೆಪಿ, ಜೆಡಿಎಸ್, ಎಐಎಂಐಎಂ, ಎಸ್‌ಡಿಪಿಐ, ಆಮ್ ಆದ್ಮಿ ಸೇರಿ ಇತರ ಪಕ್ಷಗಳು ಅವಕಾಶ ನೀಡಲಿವೆಯೇ ಎಂಬ ಚರ್ಚೆ ಕ್ಷೇತ್ರದಲ್ಲಿ ಜೋರಾಗಿ ನಡೆದಿದೆ.

ಕಲಬುರಗಿ ವಿಧಾನಸಭಾ ಕ್ಷೇತ್ರವನ್ನು ದಶಕಗಳವರೆಗೆ ಪ್ರತಿನಿಧಿಸಿದ್ದ ಖಮರುಲ್ ಇಸ್ಲಾಂ ಅವರು ಎಸ್‌.ಎಂ. ಕೃಷ್ಣ ಹಾಗೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2017ರಲ್ಲಿ ಹೃದಯಾಘಾತದಿಂದ ನಿಧನರಾದ ಬಳಿಕ ಅವರ ಸ್ಥಾನಕ್ಕೆ ಪತ್ನಿ ಖನೀಜ್ ಫಾತಿಮಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದಿತ್ತು. ಹೀಗಾಗಿ, ಸತತ ಕ್ಷೇತ್ರವು ಖಮರುಲ್ ಇಸ್ಲಾಂ ಕುಟುಂಬದ ಹಿಡಿತದಲ್ಲಿಯೇ ಇದೆ.

ಮುಸ್ಲಿಂ ಬಾಹುಳ್ಯದ ಕಲಬುರಗಿ ಉತ್ತರ ಕ್ಷೇತ್ರವನ್ನು ತನ್ನ ಕೈವಶ ಮಾಡಿಕೊಳ್ಳಲು ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ತೀವ್ರ ಪ್ರಯತ್ನ ನಡೆಸಿದರೂ ಯಶಸ್ವಿಯಾಗಿಲ್ಲ. ಖಮರುಲ್ ಇಸ್ಲಾಂ ಅವರು ಪಕ್ಷಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಕಾಂಗ್ರೆಸ್ ಈ ಬಾರಿಯೂ ಹಾಲಿ ಶಾಸಕಿ ಖನೀಜ್ ಫಾತಿಮಾ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ನಿಚ್ಚಳವಾಗಿವೆ.

ಜೆಡಿಎಸ್‌ನಿಂದ ಈ ಬಾರಿಯೂ ನಾಸಿರ್ ಹುಸೇನ್ ಉಸ್ತಾದ್ ಅವರು ಕಣಕ್ಕಿಳಿಯುವುದು ಖಚಿತ. ಅದಕ್ಕಾಗಿಯೇ ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ನಡೆಸಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಮುಸ್ಲಿಂ ಸಮಯದಾಯದ ಪ್ರಭಾವಿ ನಾಯಕರಾದ ನಾಸಿರ್ ಹುಸೇನ್ ಸಹ ಮೂರು–ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿ ಓಡಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ನೆಲೆ ಅಷ್ಟಾಗಿ ಇಲ್ಲದ ಈ ಸಂದರ್ಭದಲ್ಲಿ ನಾಸಿರ್ ತಮ್ಮ ವೈಯಕ್ತಿಕ ವರ್ಚಸ್ಸನ್ನು ಪಣಕ್ಕಿಟ್ಟು ಚುನಾವಣೆ ಎದುರಿಸಬೇಕಿದೆ. 2018ರ ಚುನಾವಣೆಯಲ್ಲಿ ನಾಸಿರ್ ಹುಸೇನ್ ಮತ ಗಳಿಕೆಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು ಪ್ರಬಲ ಪೈಪೋಟಿ ಒಡ್ಡಿತ್ತು. ಈ ಬಾರಿಯೂ ತನ್ನ ಅಭ್ಯರ್ಥಿಯನ್ನು ಕ್ಷೇತ್ರದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಒಂದೊಮ್ಮೆ ಕಣಕ್ಕಿಳಿದರೆ ಎಐಎಂಐಎಂ ಪಕ್ಷದ ಅಭ್ಯರ್ಥಿ ಕಾಂಗ್ರೆಸ್ ಮತಬುಟ್ಟಿಗೆ ಕೈಹಾಕಲಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಅಲ್ಲದೇ, ಎಸ್‌ಡಿಪಿಐ, ಆಮ್ ಆದ್ಮಿ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಹಾಗೂ ಎಡಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ.

ಚಂದು ಪಾಟೀಲ, ಮಹಾಜನ ಮಧ್ಯೆ ಟಿಕೆಟ್ ಫೈಟ್

ಕಲಬುರಗಿ ಉತ್ತರ ಕ್ಷೇತ್ರದಿಂದ ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ ಈ ಬಾರಿಯೂ ಟಿಕೆಟ್‌ಗಾಗಿ ಬೇಡಿಕೆ ಸಲ್ಲಿಸಿದ್ದು, ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ.

ಮತ್ತೊಂದೆಡೆ ಪಕ್ಷದ ಮುಖಂಡ, ಪ್ರಥಮ ದರ್ಜೆ ಗುತ್ತಿಗೆದಾರ ಶಿವಕಾಂತ ಮಹಾಜನ್ ಅವರೂ ಉತ್ತರ ಕ್ಷೇತ್ರದ ಟಿಕೆಟ್ ತಮಗೆ ನೀಡಬೇಕು ಎಂದು ವರಿಷ್ಠರ ಎದುರು ಬೇಡಿಕೆ ಇಟ್ಟಿದ್ದಾರೆ. ಇಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಪ್ರಬಲ ಆಕಾಂಕ್ಷಿಗಳಾಗಿರುವುದು ಬಿಜೆಪಿ ವರಿಷ್ಠರಿಗೆ ಬಿಸಿತುಪ್ಪವಾಗಿದೆ.

ಇತ್ತೀಚೆಗೆ ಕಲಬುರಗಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಈ ಬಾರಿ ಚಂದು ಪಾಟೀಲ ಅವರಿಗೇ ಟಿಕೆಟ್ ಸಿಗಲಿದೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದು ವಿವಾದಕ್ಕೆ ಗುರಿಯಾಗಿತ್ತು. ಇದಕ್ಕೆ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ನೇರವಾಗಿಯೇ ಆಕ್ಷೇಪಿಸಿದ್ದರು.

‘ಒಂದು ಕುಟುಂಬಕ್ಕೆ ಒಂದು ಹುದ್ದೆ’ ಎಂಬ ನಿಯಮದಂತೆ ಪಕ್ಷ ನಡೆದುಕೊಳ್ಳಬೇಕು. ಹಾಗಾದಲ್ಲಿ ಉತ್ತರ ಕ್ಷೇತ್ರದ ಟಿಕೆಟ್ ತಮಗೆ ನೀಡಬೇಕು ಎಂದು ಮಹಾಜನ್ ಒತ್ತಾಯಿಸುತ್ತಿದ್ದಾರೆ. ಚಂದು ಪಾಟೀಲ ಅವರ ತಂದೆ ಬಿ.ಜಿ. ಪಾಟೀಲ ಅವರು ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಹೀಗಾಗಿ, ಅವರ ಪುತ್ರ ಚಂದು ಅವರಿಗೆ ಟಿಕೆಟ್ ನೀಡಬಾರದು’ ಎಂಬುದು ಮಹಾಜನ್ ಒತ್ತಾಯ.

ಅತಿ ಹೆಚ್ಚು ಮತದಾರರಿರುವ ಕ್ಷೇತ್ರ

ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರವು ಜಿಲ್ಲೆಯಲ್ಲೇ ಅತಿ ಹೆಚ್ಚು ಮತದಾರರಿರುವ ಕ್ಷೇತ್ರವಾಗಿದ್ದು, ಎಲ್ಲ ಮತದಾರರನ್ನು ತಲುಪಲು ಅಭ್ಯರ್ಥಿಗಳು ಬೆವರು ಹರಿಸಬೇಕಿದೆ.

ಕ್ಷೇತ್ರದಲ್ಲಿ ಒಟ್ಟಾರೆ 3,00,493 ಮತದಾರರಿದ್ದು, ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಎರಡನೇ ಸ್ಥಾನದಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರವಿದ್ದು, ಅಲ್ಲಿ 2,71,820 ಮತದಾರರಿದ್ದಾರೆ.

***

1,49,840: ಪುರುಷ ಮತದಾರರು

1,50,653: ಮಹಿಳಾ ಮತದಾರರು

3,00,493: ಒಟ್ಟು ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT