ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ರೈತರಿಗೆ ನೆರವಾದ ಡಿಸಿಸಿ ಬ್ಯಾಂಕ್

ನಾಡೆಪಲ್ಲಿ: ಸಂಸದ ಡಾ.ಉಮೇಶ ಜಾಧವ ಅಭಿಮತ
Last Updated 9 ಅಕ್ಟೋಬರ್ 2021, 6:25 IST
ಅಕ್ಷರ ಗಾತ್ರ

ಸೇಡಂ: ‘ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಟಿಕೆಟ್ ಕೊಟ್ಟು ಸೋಲಿಸುವ ಸಿದ್ಧಾಂತವನ್ನೇ ರೂಢಿಸಿಕೊಂಡಿದೆ. ಆದರೆ ಬಿಜೆಪಿ ಹಾಗಿಲ್ಲ, ಟಿಕೆಟ್ ಕೊಟ್ಟ ಮೇಲೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವವರೆಗೂ ಶ್ರಮಿಸುವ ಪಕ್ಷವಾಗಿದೆ. ಇದಕ್ಕೆ ನಾನು ಮತ್ತು ಪುತ್ರ ಶಾಸಕ ಡಾ.ಅವಿನಾಶ ಜಾಧವ ಉದಾಹರಣೆ ಯಾಗಿದ್ದೇವೆ’ ಎಂದು ಸಂಸದ ಡಾ.ಉಮೇಶ ಜಾಧವ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ನಾಡೆಪಲ್ಲಿ ಗ್ರಾಮದಲ್ಲಿ ಶುಕ್ರವಾರ ನಡೆದ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸೇಡಂ ಶಾಸಕರಾಗಿರುವ ರಾಜಕುಮಾರ ಪಾಟೀಲ ತೆಲ್ಕೂರ ಅವರು ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆ ಮಾಡುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ. ಈ ಹಿಂದೆ ಡಿಸಿಸಿ ಬ್ಯಾಂಕ್ ಅಂದ್ರೆ ಉಗಿಸಿಕೊಳ್ಳುವ ಪರಿಸ್ಥಿತಿ ಇತ್ತು. ಆದರೆ ಈಗ ರೈತರ ಆಶಾಧಾಯಕವಾಗಿ ಅದೇ ಬ್ಯಾಂಕ್ ಬೆಳೆದಿದೆ ಎಂದರೆ ಅದಕ್ಕೆ ತೆಲ್ಕೂರ ಅವರ ಅವಿತರ ಶ್ರಮ ಅಡಗಿದೆ. ರೈತರು ಬಡ್ಡಿರಹಿತ ಸಾಲ ಪಡೆದು, ಲಾಭ ಪಡೆದುಕೊಳ್ಳಬೇಕು’ ಎಂದರು.

ಸಿಸಿಐ ಕಾರ್ಖಾನೆ ಆರಂಭಕ್ಕೆ ಪ್ರಯತ್ನ: ‘ಕುರಕುಂಟಾ ಗ್ರಾಮದಲ್ಲಿರುವ ಸಿಸಿಐ ಕುರಕುಂಟಾ ಕಾರ್ಖಾನೆಯ ಆರಂಭದ ಕುರಿತು ಸಂಸತ್‌ನಲ್ಲಿ ಹತ್ತಾರು ಬಾರಿ ಧ್ವನಿ ಎತ್ತಿದ್ದೇನೆ. ಸ್ಥಳೀಯ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮತ್ತು ನಾನು ಮುಂದಿನ ದಿನಗಳಲ್ಲಿ ಆರಂಭಿಸುತ್ತೇವೆ. ಜೊತೆಗೆ ನಾಡೆಪಲ್ಲಿ ಪ್ರದೇಶದ ಕಡೆಯಲ್ಲಿ ಭತ್ತದ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವ ಕುರಿತು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ’ ಎಂದು ಸಂಸದ ಜಾಧವ ಭರವಸೆ ನೀಡಿದರು.

ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ‘ನಾಡೆಪಲ್ಲಿ ಗ್ರಾಮದಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದು ಕೇವಲ ಆರಂಭ, ಮುಂದಿನ ದಿನಗಳಲ್ಲಿ ಸಾವಿರಾರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ’ ಎಂದ ಅವರು, ‘ಅಧಿಕಾರಿವಿಲ್ಲದೆ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಪರಿಸ್ಥಿತಿ ನೀರಿಲ್ಲದ ಮೀನನಂತಾಗಿದೆ. ತುಘಲಕ್ ದರ್ಬಾರ್ ಮಾಡಿ, ಸೋತು ಮನೆಯಲ್ಲಿ ಕೂತಿದ್ದಾರೆ’ ಎಂದರು.

ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ರೈತರಿಗೆ ಬಡ್ಡಿರಹಿತ ಸಾಲ ವಿತರಣೆ ಕಾರ್ಯಕ್ರಮ ಶ್ಲಾಘನೀಯ. ರೈತರ ಮುಷ್ಕರ ಮಾಡುವ ಬೆಂಬಲ ಮಾಡ್ತಿದ್ದಾರೆ. ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ತೆಲ್ಕೂರ ಅಣ್ಣಾವ್ರು ಮಾಡ್ತಿದ್ದಾರೆ. ಇದನ್ನು ಸಹಿಸಲಾಗದವರು ಮುಷ್ಕರ ಮಾಡ್ತಿದ್ದಾರೆ’ ಎಂದರು.

ಪರ್ವತರೆಡ್ಡಿ ಪಾಟೀಲ ನಾಮವಾರ, ನಾಗರೆಡ್ಡಿ ದೇಶಮುಖ, ನಾಗೀಂದ್ರಪ್ಪ ಶಿಲಾರಕೋಟ, ಜಗದೀಶಗೌಡ, ಶ್ರೀಕಾಂತರೆಡ್ಡಿ ಮುಧೋಳ, ಪಾಪಯ್ಯಗೌಡ, ಪ್ರಶಾಂತ ಕೇರಿ, ಲಕ್ಷ್ಮೀನಾರಾಯಣ ಚಿಮ್ಮನಚೋಡ್ಕರ್, ಲಕ್ಷ್ಮಿಕಾಂತ ಹೊನಕೇರಿ, ವಿಜಯ ಕುಮಾರರೆಡ್ಡಿ, ಗೋವಿಂದ ಯಾಕಂಬ್ರಿ, ರವಿಕುಮಾರ ಭಂಟನಳ್ಳಿ, ಮಲ್ಲಿಕಾರ್ಜುನ ಸ್ವಾಮಿ ಬಿಬ್ಬಳ್ಳಿ, ಭೀಮರಾಯ ಹಣಮನಳ್ಳಿ, ವೆಂಕಟೇಶ ಬೇಕರಿ, ತಿರುಪತಿ ಶಾಬಾದಕರ್, ಶಿವಾನಂದಸ್ವಾಮಿ, ಲಕ್ಷ್ಮಿಕಾಂತ ಹೊನಕೇರಿ ಇದ್ದರು. ನಾಗಪ್ಪ ಕೊಳ್ಳಿ ಸ್ವಾಗತಿಸಿದರು. ಓಂಪ್ರಕಾಶ ಪಾಟೀಲ ತರನಳ್ಳಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT