ಬುಧವಾರ, ಸೆಪ್ಟೆಂಬರ್ 18, 2019
25 °C
ಪದಾಧಿಕಾರಿಗಳ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹೇಳಿಕೆ

ರಾವಣರ ಸಂಹಾರಕ್ಕೆ ಬಿಜೆಪಿಯಿಂದ ರಾಮರ ಸೃಷ್ಟಿ: ನಳಿನ್‌ಕುಮಾರ್ ಕಟೀಲ್‌

Published:
Updated:
Prajavani

ಕಲಬುರ್ಗಿ‌: ‘ಗಾಂಧೀಜಿಯವರ ರಾಮರಾಜ್ಯ ಕಲ್ಪನೆಯನ್ನು ಕಾಂಗ್ರೆಸ್‌ ಜಾರಿಗೆ ತರಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಆ ಪಕ್ಷದ ದುರಾಡಳಿತದಿಂದಾಗಿ ಸಮಾಜದಲ್ಲಿ ರಾವಣರು ಸೃಷ್ಟಿಯಾಗಿದ್ದಾರೆ. ರಾವಣರ ಸಂಹಾರಕ್ಕೆ ಬಿಜೆಪಿ ಪ್ರತಿಯೊಂದು ಮನೆಯಲ್ಲಿ ರಾಮರನ್ನು ಸೃಷ್ಟಿಸಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಪಕ್ಷದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಜಿಲ್ಲಾ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ರಾಮನ ಬಗ್ಗೆ ಮಾತನಾಡುವವರನ್ನು ಕಾಂಗ್ರೆಸ್ಸಿಗರು ಕೋಮುವಾದಿ ಎಂದು ಕರೆಯುತ್ತಾರೆ. ಹಾಗಿದ್ದರೆ ರಾಮರಾಜ್ಯದ ಬಗ್ಗೆ ಹೇಳಿದ ಮಹಾತ್ಮ ಗಾಂಧೀಜಿ ಕೋಮುವಾದಿಯೇ’ ಎಂದು ಪ್ರಶ್ನಿಸಿದರು. 

‘ರಾಮಾಯಣದಲ್ಲಿ ರಾವಣ ಒಬ್ಬನೇ ಇದ್ದ. ಆತನ ಸಂಹಾರಕ್ಕೆ ಒಬ್ಬ ರಾಮ ಸಾಕಾಗಿತ್ತು. ಈಗ ಪ್ರತಿಯೊಂದು ಮನೆಗೂ ಒಬ್ಬ ರಾಮರು ಉದಯಿಸಬೇಕಿದೆ. ವ್ಯಕ್ತಿಗಳನ್ನು ನಾವು ರಾಮರನ್ನಾಗಿ ತಯಾರು ಮಾಡುತ್ತೇವೆ’ ಎಂದರು.

‘ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವ ಎಂಬುದೇ ಇಲ್ಲ. ನಾನು 2004ರಲ್ಲಿ ಪಕ್ಷದ ಕೆಲಸಗಳಲ್ಲಿ ಅಧಿಕೃತವಾಗಿ ತೊಡಗಿಸಿಕೊಂಡೆ. ಆಗ ಕಾಂಗ್ರೆಸ್‌ಗೆ ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿದ್ದರು. ಬಿಜೆಪಿಯಲ್ಲಿ ವೆಂಕಯ್ಯನಾಯ್ಡು ಅಧ್ಯಕ್ಷರಾಗಿದ್ದರು. ಆ ಬಳಿಕ ಬಿಜೆಪಿ ಅಧ್ಯಕ್ಷರಾಗಿ ರಾಜನಾಥ ಸಿಂಗ್‌, ನಿತಿನ್‌ ಗಡ್ಕರಿ, ಅಮಿತ್‌ ಶಾ ಅವರು ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಜೆ.ಪಿ. ನಡ್ಡಾ ಅವರು ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಈಗಲೂ ಕಾಂಗ್ರೆಸ್‌ ಗಾಂಧಿ ಕುಟುಂಬದ ಕೈಯಲ್ಲೇ ಇದೆ. ಆದರೆ, ಬಿಜೆಪಿಯಲ್ಲಿ ಅಧ್ಯಕ್ಷರು ಬದಲಾಗುತ್ತಲೇ ಇರುತ್ತಾರೆ. ನಿಜವಾದ ಪ್ರಜಾಪ್ರಭುತ್ವ ಬಿಜೆಪಿಯಲ್ಲೇ ಇದೆ’ ಎಂದು ಹೇಳಿದರು.

‘ಪಕ್ಷದ ಸದಸ್ಯತ್ವ 11 ಕೋಟಿ ಮೀರಿದ್ದು, ಬೂತ್‌ ಹಂತದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ’ ಎಂದರು.

Post Comments (+)