ಶನಿವಾರ, ಜುಲೈ 2, 2022
25 °C

ಬಿಜೆಪಿ ಅಧ್ಯಕ್ಷರಿಂದ ಕೀಳು ರಾಜಕಾರಣ: ಮಲ್ಲಿಕಾರ್ಜುನ ಖರ್ಗೆ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಮನೆಗೆ ಕಳಿಸಿ ಎನ್ನುವ ಮೂಲಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೀಳು ರಾಜಕಾರಣ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ನನ್ನನ್ನು ಸೋಲಿಸಲು ಇದೇ ರೀತಿ ಕೀಳು ರಾಜಕಾರಣ ಮಾಡಿದ್ದರು’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದಕ್ಕೆ ಪೂರಕವಾಗಿ ಅರ್‌ಎಸ್ಎಸ್‌ ವಿವಿಧ ತಾಲ್ಲೂಕುಗಳಲ್ಲಿ ಕೆಲಸ ಮಾಡುತ್ತಿದೆ. ಸೈದ್ಧಾಂತಿಕ ತಳಹದಿಯ ರಾಜಕಾರಣ ಮಾಡುವ ಬದಲು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

ಮಸೀದಿಯಲ್ಲಿ ಹಿಂದೂ ದೇವರುಗಳಿಗೆ ಸಂಬಂಧಿಸಿದ ಕುರುಹು ಪತ್ತೆಯಾಗಿರುವ ವಿಚಾರವನ್ನೇ ಮುಂದಿ
ಟ್ಟುಕೊಂಡು ಬಿಜೆಪಿ ಕೋಮು ಧ್ರುವೀಕರಣ ಮಾಡುವ ಹುನ್ನಾರ ನಡೆಸಿದೆ. ಇದಕ್ಕಾಗಿ ಸಂವಿಧಾನವನ್ನು ತನಗೆ ಬೇಕಾದಂತೆ ವ್ಯಾಖ್ಯಾನ ಮಾಡುತ್ತಿದೆ ಎಂದು ಹೇಳಿದರು.

‘ಧಾರ್ಮಿಕ ತಾಣಗಳು ಹೇಗಿವೆಯೋ ಅದೇ ಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ 1993ರಲ್ಲಿ ಕಾನೂನೊಂದನ್ನು ಜಾರಿಗೊಳಿಸಿದೆ. ಇದೀಗ ಮಸೀದಿಯಲ್ಲಿ ಹಿಂದೂ ದೇವಾಲಯಗಳ ಕುರುಹು ಸಿಕ್ಕಿರುವುದನ್ನು ಬಿಜೆಪಿ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ ಎಂದು ಅವರು ಟೀಕೆ ಮಾಡಿದರು.

ಕಾಶಿ ವಿಶ್ವನಾಥ ಮಂದಿರ ಬಳಿಯ ಜ್ಞಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪ‌ತ್ತೆಯಾಗಿರುವ ವಿಚಾರ ಸದ್ಯ ನ್ಯಾಯಾಲಯದಲ್ಲಿದೆ. ಹಾಗಾಗಿ, ತೀರ್ಪು ನೀಡುವವರೆಗೆ ಕಾಯಬೇಕು’ ಎಂದರು.

ಪ್ರಶ್ನೆ ಮಾಡಿದ್ದಕ್ಕೆ ಸಿಬಿಐ ದಾಳಿ: ‘ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳನ್ನು ಪ್ರಶ್ನೆ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕ ‍ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮನೆ, ಕಚೇರಿಗಳ ಮೇಲಿ ಸಿಬಿಐ ದಾಳಿ ನಡೆಸಿದೆ. ಚಿದಂಬರಂ ಅವರು ವಕೀಲರೂ, ಅರ್ಥಶಾಸ್ತ್ರಜ್ಞರೂ ಆಗಿದ್ದಾರೆ. ಈ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಾರೆ. ಬಿಜೆಪಿ ತಾನು ನಂಬಿದ ಮನುವಾದಿ ಸಿದ್ಧಾಂತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದವರನ್ನು ಗುರಿಯಾಗಿಸಿ ಇಂತಹ ದಾಳಿಗಳನ್ನು ಮಾಡುತ್ತದೆ. ಒಟ್ಟಾರೆ ದೇಶದಲ್ಲಿ ಬಿಜೆಪಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ’ ಎಂದು ಖರ್ಗೆ ಅವರು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು