'ಉರ್ದು ನಾಮಫಲಕ: ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ'

7

'ಉರ್ದು ನಾಮಫಲಕ: ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ'

Published:
Updated:

ಕಲಬುರ್ಗಿ: ‘ಮಹಾನಗರ ಪಾಲಿಕೆ ನೂತನ ಕಟ್ಟಡದ ಮೇಲೆ ರಾತ್ರೋರಾತ್ರಿ ಕಳ್ಳರಂತೆ ಉರ್ದು ನಾಮಫಲಕ ಅಳವಡಿಸಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ವಿಠ್ಠಲ ಜಾಧವ ಒತ್ತಾಯಿಸಿದರು.

‘ಸರ್ಕಾರದ ನಿಯಮ ಉಲ್ಲಂಘಿಸಿ, ರಾಜಾರೋಷವಾಗಿ ಉರ್ದು ನಾಮಫಲಕ ಅಳವಡಿಸಿರುವುದು ಖಂಡನೀಯ. ಈ ಕೃತ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಪಾಲಿಕೆ ಸಾಮಾನ್ಯ ಸಭೆಗಳಲ್ಲಿ ಉರ್ದು ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಚರ್ಚಿಸಲಾಗಿತ್ತು. ಅಲ್ಲದೆ, ಸರ್ವಾನುಮತದ ನಿರ್ಣಯ ಕೈಗೊಂಡು ಕನ್ನಡ, ಇಂಗ್ಲಿಷ್ ಜತೆಗೆ ಉರ್ದು ಭಾಷೆಯಲ್ಲೂ ನಾಮಫಲಕ ಅಳವಡಿಕೆಗೆ ಸೂಕ್ತ ನಿರ್ದೇಶನ ನೀಡುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿತ್ತು. ಕಚೇರಿಯಲ್ಲಿ ಉರ್ದು ಭಾಷೆ ಬಳಕೆ ಹಾಗೂ ಕಟ್ಟಡದ ಮೇಲೆ ನಾಮಫಲಕ ಅಳವಡಿಕೆಗೆ ನಿಯಮಾನುಸಾರ ಅವಕಾಶವಿಲ್ಲ ಎಂದು ಪೌರಾಡಳಿತ ನಿರ್ದೇಶನಾಲಯ ಸ್ಪಷ್ಟೀಕರಣ ನೀಡಿತ್ತು. ಹೀಗಾಗಿ ಉರ್ದು ನಾಮಫಲಕವನ್ನು ತೆಗೆದು ಹಾಕಬೇಕು' ಎಂದು ಆಗ್ರಹಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉರ್ದು ನಾಮಫಲಕ ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಒಂದು ಕೋಮಿನ ಜನರನ್ನು ಖುಷಿ ಪಡಿಸಲು ಮತ್ತು ಮತಗಳಿಕೆಗಾಗಿ ಈ ತಂತ್ರ ಹೆಣೆದಿದ್ದಾರೆ. ಪೌರಾಡಳಿತ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ತಿದ್ದುಪಡಿ ತರುತ್ತೇವೆ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ’ ಎಂದರು.

‘ನಾಮಫಲಕ ತೆಗೆದು ಹಾಕಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಮನವಿಪತ್ರ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಪಾಲಿಕೆ ಸದಸ್ಯರಾದ ಶಿವಾನಂದ ಪಾಟೀಲ, ವಿಶಾಲ ಎಸ್.ದರ್ಗಿ, ಪರಶುರಾಮ ನಸಲವಾಯಿ, ಗೀತಾ ಆರ್.ವಾಡೇಕರ್, ಆರತಿ ಎಸ್.ತಿವಾರಿ, ಮೀನಾಕ್ಷಿ ಬಂಡೆ, ಶಿವುಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !