ದಲಿತ ಯುವಕನ ಕೊಲೆ: ಪೊಲೀಸರ ಮೇಲೆ ವಿಶ್ವಾಸವಿಲ್ಲ; ಸಿಬಿಐ ತನಿಖೆಯಾಗಲಿ–ಸುಭಾಸ

7
ಆರೋಪಿಗಳನ್ನು ವಾರದಲ್ಲಿ ಬಂಧಿಸದಿದ್ದರೆ ಹೋರಾಟ–ಶಾಸಕ ಸುಭಾಸ ಗುತ್ತೇದಾರ

ದಲಿತ ಯುವಕನ ಕೊಲೆ: ಪೊಲೀಸರ ಮೇಲೆ ವಿಶ್ವಾಸವಿಲ್ಲ; ಸಿಬಿಐ ತನಿಖೆಯಾಗಲಿ–ಸುಭಾಸ

Published:
Updated:
Deccan Herald

ಕಲಬುರ್ಗಿ: ‘ಆಳಂದ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಭೂಸನೂರ ಗ್ರಾಮದ ಲಕ್ಷ್ಮಣ ಬೀಳಗಿ ಅವರ ಪುತ್ರ ರಾಹುಲ್‌ ಬೀಳಗಿ ಅವರ ಕೊಲೆ ಆರೋಪಿಗಳನ್ನು ವಾರದಲ್ಲಿ ಬಂಧಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುತ್ತೇವೆ’ ಎಂದು ಆಳಂದ ಶಾಸಕ ಸುಭಾಸ ಗುತ್ತೇದಾರ ಹೇಳಿದರು.

‘ಇದು ರಾಜಕೀಯ ದ್ವೇಷದಿಂದ ನಡೆದ ಕೊಲೆ. ಮಾಜಿ ಶಾಸಕ ಬಿ.ಆರ್‌. ಪಾಟೀಲ ಅವರು ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ. ಪೊಲೀಸರೂ ನಿಷ್ಕ್ರಿಯರಾಗಿದ್ದಾರೆ. ಹೀಗಾಗಿ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಭೂಸನೂರ ಗ್ರಾಮದ ಬಾಬುಗೌಡ ಸಿದ್ದಣಗೌಡ ಪಾಟೀಲ, ನಾಗರಾಜ ಅಪ್ಪಾರಾವ ಪಾಟೀಲ ಸೇರಿದಂತೆ 14 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳಲ್ಲಿ ಕೆಲವರ ಮೇಲೆ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿದ್ದವು’ ಎಂದರು.

‘ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಅಪ್ಪಾರಾವ ಪಾಟೀಲ ಅವರ ಪತ್ನಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಗ್ರಾಮ ಪಂಚಾಯಿತಿಯಿಂದ ಮನೆ ಹಂಚಿಕೆಯಲ್ಲಿಯ ಅಕ್ರಮಗಳಿಗೆ ರಾಹುಲ್‌ ಅಡ್ಡಿಯಾಗಿದ್ದರು. ತಮ್ಮೂರಲ್ಲಿ ಬೇರೆ ಯಾರೂ ಬೆಳೆಯಬಾರದು ಎಂಬ ಕುತಂತ್ರದಿಂದ ರಾಹುಲ್‌ ಅವರನ್ನು ಕೊಲೆ ಮಾಡಲಾಗಿದೆ’ ಎಂದು ಅವರು ಆರೋಪಿಸಿದರು.

‘ತಮ್ಮ ಮಗನ ಜೀವಕ್ಕೆ ಅಪಾಯ ಇದೆ ಎಂದು ರಾಹುಲ್‌ ಅವರ ತಂದೆ ಕೆಲ ತಿಂಗಳ ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಪತ್ರ ಸಲ್ಲಿಸಿದ್ದರು. ಪೊಲೀಸರು ಸ್ಪಂದಿಸಲಿಲ್ಲ. ಆಳಂದ ತಾಲ್ಲೂಕಿನಲ್ಲಿಯ ಪೊಲೀಸರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸ್‌ ಠಾಣೆಯಲ್ಲಿಯೇ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದರೂ ಆತನ ವಿರುದ್ಧವೂ ಕ್ರಮ ಕೈಗೊಂಡಿಲ್ಲ’ ಎಂದು ಶಾಸಕರು ಆಪಾದಿಸಿದರು.

ಬಿಜೆಪಿ ಮುಖಂಡರಾದ ಅಮರನಾಥ ಪಾಟೀಲ, ಧರ್ಮಣ್ಣ ಇಟಗಾ, ಅಂಬಾರಾಯ ಅಷ್ಟಗಿ, ರಾಜು ವಾಡೇಕರ, ಪ್ರವೀಣ ತೇಗನೂರ, ಪರಶುರಾಮ ನಸಲವಾಯಿ, ವಿಜಯಕುಮಾರ ಆಡಕಿ, ಸಂಗಣ್ಣ ಇಜೇರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !