ಕಲಬುರಗಿ: ಜಿಲ್ಲೆಯಲ್ಲಿ ಇತ್ತೀಚಿಗೆ ತೊಗರಿ ಬೆಳೆಯ ಗಿಡಗಳ ಕಾಂಡದ ಮೇಲೆ ಕಪ್ಪು ಮಚ್ಚೆಗಳು ಕಂಡುಬರುತ್ತಿವೆ. ಈ ಮಚ್ಚೆಗಳು ಒಂದಕ್ಕೊಂದು ಸೇರಿ ಗಾಳಿ ಬಿಟ್ಟಾಗ ಮಚ್ಚೆ ಇರುವ ಜಾಗದಲ್ಲಿ ತೊಗರಿ ಗಿಡಗಳು ಮುರಿದು ಬೀಳುವುದು ಕಂಡು ಬಂದಿದೆ. ಜತೆಗೆ ಕೆಲವೊಮ್ಮೆ ಬೇರುಗಳಲ್ಲಿ ಗಂಟುಗಳು ಕಂಡು ಬರುತ್ತಿವೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ನಿರಂತರವಾಗಿ ಬೀಳುತ್ತಿರುವ ಮಳೆ ಹಾಗೂ ಆರ್ದ್ರತೆಯಿಂದ ಕೂಡಿದ ವಾತಾವರಣದಿಂದಾಗಿ ಈ ರೋಗವು ಉಲ್ಬಣ ಆಗುವ ಸಾಧ್ಯತೆಯಿದೆ. ಈ ರೋಗವು ಫೈಟೋಪ್ಥರಾ ಶೀಲೀಂಧ್ರದಿಂದ ಆಗುತ್ತಿದ್ದು, ಜಿಲ್ಲೆಯ ರೈತರು ಈ ಕೆಳಗಿನಂತೆ ಶಿಫಾರಸ್ಸು ಮಾಡಲಾದ ನಿಯಂತ್ರಣಾ ಕ್ರಮಗಳನ್ನು ಅಳವಡಿಸಬೇಕು.
ರಿಡೋಮಿಲ್ ಗೋಲ್ಡ್ ಶೀಲಿಂಧ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ 3 ಗ್ರಾಂನಂತೆ (200 ಲೀಟರ್‌ಗೆ 600 ಗ್ರಾಂ) ಬೆರೆಸಿ ಚೆನ್ನಾಗಿ ಕಲಸಿ ಪ್ರತಿಗಿಡದ ಸುತ್ತಲು ಮಣ್ಣಿಗೆ ಸೇರಿಸಬೇಕು. ಟ್ರೀಕೋಡರ್ಮಾ ಜೈವಿಕ ಪೀಡೆನಾಶಕವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂನಂತೆ ಬೆರೆಸಿ ಪ್ರತಿ ಗಿಡದ ಸುತ್ತಲು ಮಣ್ಣಿಗೆ ಸೇರಿಸಬೇಕು ಎಂದು ತಿಳಿಸಿದ್ದಾರೆ.