ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ರಕ್ತದಾನ ಶ್ರೇಷ್ಠವಾದ ದಾನ: ರಾಜ್ಯಪಾಲ ಥಾವರಚಂದ್ ಗೆಹಲೋತ್

Published : 13 ಆಗಸ್ಟ್ 2024, 4:52 IST
Last Updated : 13 ಆಗಸ್ಟ್ 2024, 4:52 IST
ಫಾಲೋ ಮಾಡಿ
Comments

ಕಲಬುರಗಿ: ‘ದಾನಗಳಲ್ಲಿಯೇ ರಕ್ತದಾನ ಶ್ರೇಷ್ಠವಾಗಿದ್ದು, ಆರೋಗ್ಯವಂತ ಪ್ರತಿಯೊಬ್ಬರು ರಕ್ತದಾನ ಮಾಡಬೇಕು’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

ಇಲ್ಲಿನ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿ ಸೋಮವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕ ಜಿನೀವಾ ಒಪ್ಪಂದ ದಿನಾಚರಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆಯೂ ಹೆಚ್ಚಾಗಿದೆ. ಹೀಗಾಗಿ, ಎಲ್ಲೆಡೆ ಬ್ಲಡ್ ಬ್ಯಾಂಕ್‌ಗಳ ಜೊತೆಗೆ ರಕ್ತದಾನ ಶಿಬಿರ ಕಾರ್ಯಕ್ರಮಗಳು ಹೆಚ್ಚಳವಾಗಬೇಕಿದೆ’ ಎಂದರು.

‘ರಕ್ತದಾನ ಮಾಡುವುದರಿಂದ ಅಶಕ್ತರಾಗುವುದಿಲ್ಲ. ಬದಲಾಗಿ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ರಕ್ತ ಪಡೆದ ವ್ಯಕ್ತಿ ರಕ್ತದಾನ ಮಾಡಿದ ವ್ಯಕ್ತಿಯನ್ನು ತನ್ನ ಜೀವ ಉಳಿಸಿದವ ಎಂದು ಗೌರವದಿಂದ ಕಾಣುತ್ತಾನೆ. ರಕ್ತದಾನ ನಮ್ಮಲ್ಲಿ ಏಕತೆಯನ್ನು ಹೆಚ್ಚಿಸುತ್ತದೆ. ನಾನು ಎಂಟು ಬಾರಿ, ನನ್ನ ಮಗ 54 ಬಾರಿ ರಕ್ತದಾನ ಮಾಡಿದ್ದಾನೆ’ ಎಂದು ಹೇಳಿದರು.

‘ಕೋವಿಡ್ ಸಂದರ್ಭದಲ್ಲಿ ರಕ್ತದಾನದಿಂದ ಹಲವು ಜೀವಗಳು ಉಳಿದಿವೆ. ರಕ್ತದಾನ ಮಹತ್ವ ಕುರಿತು ಜನರಿಗೆ ಅರಿವಾಗಿದೆ. ಇದರ ಪರಿಣಾಮವಾಗಿ ಶಿಬಿರದಲ್ಲಿ 175ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದ್ದಾರೆ’ ಎಂದರು.

ಪ್ರಮಾಣ ಪತ್ರ ವಿತರಣೆ: ರಕ್ತದಾನ ಶಿಬಿರದಲ್ಲಿ ಸುಮಾರು 20 ವಿದ್ಯಾ ಸಂಸ್ಥೆಗಳ 175 ಜನರು ರಕ್ತದಾನ ಮಾಡಿದರು.

ಭಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಮತ್ತು ವಿವೇಕಾನಂದ ಆಶ್ರಮದ ಮಹೇಶ್ವರಾನಂದ ಮಹಾರಾಜರು ಸೇರಿದಂತೆ ರಕ್ತದಾನಿಗಳಿಗೆ ವಿತರಿಸಲು ಆಯಾ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಿಗೆ ರಾಜ್ಯಪಾಲರು ಪ್ರಮಾಣ ಪತ್ರ ವಿತರಣೆ ಮಾಡಿದರು.

ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ವಿಟಿಯು ಪ್ರಾದೇಶಿಕ ಕಚೇರಿಯ ನಿರ್ದೇಶಕ ಬಸವರಾಜ ಗಾದಗೆ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರಮುಖರಾದ ಅರುಣ್‌ ಕುಮಾರ ಲೋಯಾ, ರವೀಂದ್ರ ಶಾಬಾದಿ ಸೇರಿ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT