ಸೇಡಂ: ಕಮಲಾವತಿ ನದಿ ಪ್ರವಾಹದಲ್ಲಿ ಕೊಚ್ಚಿ ಹೋದ ಬಾಲಕ ರಾಹುಲ್ ಎಳ್ಳಿ ಈವರೆಗೂ ಪತ್ತೆಯಾಗಿಲ್ಲ. ಕಾರ್ಯಾಚರಣೆ ವೇಳೆ ಬಂದಿದ್ದ ಸಚಿವ ಡಾ.ಶರಣಪ್ರಕಾಶ ಪಾಟೀಲ ಮತ್ತು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬೆಳಿಗ್ಗೆ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಭೇಟಿ ನೀಡಿ, ರಾಹುಲ್ ತಂದೆ-ತಾಯಿಗೆ ಧೈರ್ಯ ತುಂಬಿದರು. ಧೈರ್ಯ ಕಳೆದುಕೊಳ್ಳಬಾರದು. ಉಳಿದ ಮಕ್ಕಳ ಜವಾಬ್ದಾರಿಯಿದೆ. ನದಿಯಲ್ಲಿ ಮಗ ಸಿಗುತ್ತಾನೆಂದ ಅವರು, ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿ, ಎಸ್‌ಡಿಆರ್‌ಎಫ್ ತಂಡ ಕಳುಹಿಸಬೇಕು ಎಮದು ಮನವಿ ಮಾಡಿದರು.
ಮಧ್ಯಾಹ್ನ ಸಚಿವ ಡಾ.ಶರಣಪ್ರಕಾಶ ಪಾಟೀಲ, ಪತ್ನಿ ಡಾ.ಭಾಗ್ಯಶ್ರೀ ಪಾಟೀಲ ಸಮೇತ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ‘ಉಳಿದ ಮಕ್ಕಳಿಗೆ ದುಃಖವಾಗುತ್ತದೆ, ಅಳುವುದನ್ನು ನಿಲ್ಲಿಸಿ, ಆರೋಗ್ಯದತ್ತ ಕಾಳಜಿ ವಹಿಸಿ’ ಎಂದು ಸಾಂತ್ವನ ಹೇಳಿದರು. ಸಚಿವ ಡಾ.ಶರಣಪ್ರಕಾಶ ಪಾಟೀಲ ಬಾಲಕರನ ಕಾರ್ಯಾರಣೆ ಚುರುಕುಗೊಳಿಸಬೇಕು. ನದಿಯತ್ತ ಜನರಿಗೆ ತೆರಳದಂತೆ ಮುಂಜಾಗ್ರತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಅಧಿಕಾರಿ ಉಪವಿಭಾಗಾಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ಶ್ರೀಯಾಂಕ ಧನಶ್ರೀ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ, ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರು, ಪುರಸಭೆ ಸದಸ್ಯ ಸಂತೋಷ ತಳವಾರ, ಮುಖಂಡ ರಾಘವೇಂದ್ರ ಮೆಕ್ಯಾನಿಕ್ ಸೇರಿದಂತೆ ಅಗ್ನಿಶಾಮಕ ಮತ್ತು ಎಸ್.ಡಿ.ಆರ್.ಎಫ್ ಸಿಬ್ಬಂದಿ ಇದ್ದರು.
ದಿನವಿಡೀ ಕಾರ್ಯಾಚರಣೆ: ಕಮಲಾವತಿ ನದಿಯಲ್ಲಿ ಸೋಮವಾರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮತ್ತು ಎಸ್‌ಡಿಆರ್‌ಎಫ್ ತಂಡದ ಸಿಬ್ಬಂದಿ ದಿನವಿಡೀ ಕಾರ್ಯಾಚರಣೆ ನಡೆಸಿದರು. ಮೀನುಗಾರರು ನದಿಗಿಳಿದು ಪತ್ತೆ ನಡೆಸಿದರು. ಡ್ರೋನ್ ಮೂಲಕ ನದಿಯಲ್ಲಿ ಕಿಲೋ ಮಿಟರಗಟ್ಟಲೇ ಹುಡುಕಲಾಯಿತು. ಆದರೂ ಸಹ ಸೋಮವಾರ ರಾಹುಲ್ ಪತ್ತೆಯಾಗಲಿಲ್ಲ.
ನದಿಗೆ ದೌಡಾಯಿಸಿದ ಪಂಚಾಕ್ಷರಿ ಶ್ರೀಗಳು: ಸೇಡಂ ಪಟ್ಟಣದ ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕಾರ್ಯಾಚರಣೆ ಚುರುಕುಗೊಳಿಸಿ, ಪತ್ತೆ ಮಾಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಹಾರ ನೀಡಬೇಕು ಎಂದರು.
ಪ್ರವಾಹದಲ್ಲಿ ಬಾಲಕ ಕೊಚ್ಚಿ ಹೋಗಿರುವುದು ದುಃಖದ ಸಂಗತಿ. ಭಕ್ತರು ನದಿಯತ್ತ ಹೋಗುವುದನ್ನು ನಿಲ್ಲಿಸಬೇಕು. ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು.ಪಂಚಾಕ್ಷರಿ ಸ್ವಾಮೀಜಿ ಹಾಲಪ್ಪಯ್ಯ ವಿರಕ್ತಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.