ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತರ ಕಲ್ಯಾಣಕ್ಕೆ ಜೀವನ ಮುಡಿಪಿಟ್ಟ ಮಹಾನಾಯಕ ಅಂಬೇಡ್ಕರ್‌: ಎನ್.ವಿ. ಪ್ರಸಾದ್

ಡಾ.ಬಿ.ಆರ್. ಅಂಬೇಡ್ಕರ್ 131ನೇ ಜಯಂತ್ಯುತ್ಸವದಲ್ಲಿ ಪ್ರಾದೇಶಿಕ ಆಯುಕ್ತ ಎನ್.ವಿ. ಪ್ರಸಾದ್
Last Updated 14 ಏಪ್ರಿಲ್ 2022, 10:03 IST
ಅಕ್ಷರ ಗಾತ್ರ

ಕಲಬುರಗಿ: ‘ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ಅವರು ಶೋಷಿತರ ಕಲ್ಯಾಣಕ್ಕಾಗಿ ಇಡೀ ಜೀವನವನ್ನು ಮುಡಿಪಿಟ್ಟ ಮಹಾ ನಾಯಕರಾಗಿದ್ದಾರೆ’ ಎಂದು ಪ್ರಾದೇಶಿಕ ಆಯುಕ್ತ ಡಾ.ಎನ್‌.ವಿ. ಪ್ರಸಾದ್ ಅಭಿಪ್ರಾಯಪಟ್ಟರು.

ಗುರುವಾರ ನಗರದ ಜಗತ್ ವೃತ್ತದ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾರ್ಮಿಕ, ಮಹಿಳೆಯರ ಹಕ್ಕಿಗಾಗಿ ಹೋರಾಡಿದ ಮಹಾನ್ ಪುರುಷ ಅಂಬೇಡ್ಕರರು.ಭಾರತವು ಇಂದು 140 ಕೋಟಿ ಜನಸಂಖ್ಯೆ ದಾಟಿದರೂ ಅಂಬೇಡ್ಕರ್ ನೀಡಿದ ಸಂವಿಧಾನ ಗಟ್ಟಿಯಾಗಿರುವ ಕಾರಣ ದೇಶದಲ್ಲಿ ಯಾವುದೇ ಸಮಸ್ಯೆ ಇಲ್ಲ. ನೆರೆಯ ರಾಷ್ಟ್ರಗಳಲ್ಲಿ ಆಗಾಗ ರಾಜಕೀಯ ಅಸ್ಥಿರತೆಯನ್ನು ಕಾಣುತ್ತಿದ್ದೇವೆ. ಆದರೆ ಅಂತಹ ಯಾವುದೇ ಪರಿಸ್ಥಿತಿ ಭಾರತದಲ್ಲಿ ಇದೂವರೆಗೆ ಕಂಡಿಲ್ಲ. ಅದಕ್ಕೆ ಕಾರಣ ಅಂಬೇಡ್ಕರ್ ಅವರು ಸರ್ವರನ್ನೂ ಸಮನಾಗಿ ಕಾಣುವ, ಎಲ್ಲಾ ಧರ್ಮ, ಸಂಸ್ಕೃತಿ ಆಚಾರ ವಿಚಾರಗಳನ್ನು ಗೌರವಿಸುವ ಮತ್ತು ಸರ್ವರೂ ಒಪ್ಪುವ ಸಮಾನತೆಯ ಗಟ್ಟಿತನದ ಸಂವಿಧಾನ’ ಎಂದರು.

ಚಿತ್ತಾಪೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವಿಜಯಕುಮಾರ ಸಾಲಿಮನಿ ಉಪನ್ಯಾಸ ನೀಡಿದರು.

ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ ಟೆಂಗಳಿ, ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿದರು.

ಸಹಾಯಧನ ಬಾಂಡ್ ವಿತರಣೆ: ಅಂತರ್ಜಾತಿ ವಿವಾಹ ಮಾಡಿಕೊಂಡ ಒಟ್ಟು 5 ಜನ ಫಲಾನುಭವಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ತಲಾ ₹ 1.5 ಲಕ್ಷ ಬಾಂಡ್ ಫಲಾನುಭವಿಗಳಿಗೆ ಗಣ್ಯರು ವಿತರಿಸಿದರು. ಇದಲ್ಲದೆ ಕಾರ್ಮಿಕ ಇಲಾಖೆಯಿಂದ ಮದುವೆ ಮಾಡಿಕೊಂಡ ಕಾರ್ಮಿಕರ ಮಕ್ಕಳಿಗೆ ತಲಾ ₹ 50 ಸಾವಿರ ಸಹಾಯಧನದ ಮಂಜೂರಾತಿ ಆದೇಶವನ್ನು 8 ಜನ ಫಲಾನುಭವಿಗಳಿಗೆ ನೀಡಲಾಯಿತು.

ಬುದ್ದ ವಿಹಾರದ ಸಂಗಾನಂದ ಭಂತೇಜಿ ಧಮ್ಮ ವಂದನೆ ಸಲ್ಲಿಸಿದರು. ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ ಪಂಚಶೀಲ ಮತ್ತು ಜಿಲ್ಲಾಧಿಕಾರಿ ಯಶವಂತ ಗುರುಕರ್ ನೀಲಿ ಧ್ವಜಾರೋಹಣ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಸಾಸಿ, ಮಹಾನಗರ ಪಾಲಿಕೆಯ ಆಯುಕ್ತ ಡಾ. ಶಂಕರ ವಣಿಕ್ಯಾಳ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ, ಅಂಬೇಡ್ಕರ್ ಜಯಂತ್ಯುತ್ಸವ ಆಚರಣೆ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಲಾಖೆ, ಗೌರವಾಧ್ಯಕ್ಷ ಡಾ.ಗುಂಡಪ್ಪ ಲಂಡನಕರ್, ಬಾಬು ಜಗಜೀವನರಾಂ ಜಯಂತ್ಯುತ್ಸವ ಆಚರಣೆ ಸಮಿತಿ ಅಧ್ಯಕ್ಷ ದಶರಥ ಕಲಗುರ್ತಿ, ಎಸ್.ಸಿ, ಎಸ್.ಟಿ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಸೋಮಶೇಖರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಅಲ್ಲಾಭಕಷ್ ಸ್ವಾಗತಿಸಿದರು.

*

ಅಂಬೇಡ್ಕರ್ ಕೇವಲ ಒಂದು ಸಮುದಾಯದವರಿಗೆ ಸೇರಿದವರಲ್ಲ. ಇಡೀ 134 ಕೋಟಿ ಜನರ ಆಸ್ತಿಯಾಗಿದ್ದಾರೆ. ಬಡವ–ಬಲ್ಲಿದ ಎನ್ನದೆ ಪ್ರತಿಯೊಬ್ಬರಿಗೂ ಒಂದೇ ಮತದ ಹಕ್ಕು ನೀಡಿ ಎಲ್ಲರನ್ನು ಸಮನಾಗಿ ಕಂಡವರಾಗಿದ್ದಾರೆ.
-ಡಾ. ಉಮೇಶ ಜಾಧವ,ಸಂಸದ

*

ಜಾತಿ, ಧರ್ಮ, ಗಡಿ ಮೀರಿದ ವ್ಯಕ್ತಿ ಅಂಬೇಡ್ಕರರು. ಅಂಬೇಡ್ಕರ್ ರಚಿಸಿದ ಸಂವಿಧಾನದ ಚೌಕಟ್ಟಿನಲ್ಲಿಯೇ ಇಂದು ಇಡೀ ದೇಶದ ಆಡಳಿತ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ.
-ಬಸವರಾಜ ಮತ್ತಿಮೂಡ,ಶಾಸಕ

*

ದೇಶದ ಪ್ರತಿಯೊಂದು ಭೂಭಾಗವೂ ವೈವಿಧ್ಯಮಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಹೊಂದಿದ್ದರೂ ನಾವೆಲ್ಲ ಒಂದೇ ಎಂಬುದನ್ನು ಸಂವಿಧಾನ ಸಾರುತ್ತದೆ. ಸಂವಿಧಾನದ ಹಾದಿಯಲ್ಲಿ ನಮ್ಮ ಉಸಿರು ಇರುವವರೆಗೂ ಸಾಗಬೇಕಿದೆ
-ಡಾ. ವೈ.ಎಸ್. ರವಿಕುಮಾರ್,ಕಲಬುರಗಿ ಪೊಲೀಸ್ ಕಮಿಷನರ್

*

ವಿದೇಶದ ವಿ.ವಿ.ಗಳಲ್ಲಿ ಅನೇಕ ಪದವಿಗಳನ್ನು ಪಡೆದ ಅಂಬೇಡ್ಕರರು ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದಾರೆ. ಜೀವನದುದ್ದಕ್ಕೂ ಶೋಷಿತರ ಪರ, ಧ್ವನಿಯಿಲ್ಲದವರ ಧ್ವನಿಯಾಗಿ ಬದುಕಿದವರು.
-ಶಶೀಲ್ ಜಿ. ನಮೋಶಿ,ವಿಧಾನಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT