ಸೋಮವಾರ, ಸೆಪ್ಟೆಂಬರ್ 27, 2021
24 °C

ಆರ್ಥಿಕ ಚಟುವಟಿಕೆಯ ವೇಗ ಹೆಚ್ಚಿಸಿದ ಕಲಬುರ್ಗಿ ವಿಮಾನಸೇವೆ

ಸತೀಶ್‌ ಬಿ. Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ವಿಮಾನ ಸೇವೆ ಆರಂಭಗೊಂಡು, ಸಂಪರ್ಕ ವ್ಯವಸ್ಥೆ ಸುಧಾರಿಸಿದ್ದರಿಂದ ಕಲಬುರ್ಗಿಯ ಆರ್ಥಿಕ ಚಟುವಟಿಕೆ ಮತ್ತು ವಾಣಿಜ್ಯೋಮದ ಅಭಿವೃದ್ಧಿಗೆ ವೇಗ ಬಂದಿದೆ.

2019ರ ನವೆಂಬರ್ 22ರಂದು ಕಲಬುರ್ಗಿಯ ವಿಮಾನ ನಿಲ್ದಾಣ ಉದ್ಘಾಟನೆಯಾಗಿದೆ. 742 ಎಕರೆ ವಿಸ್ತೀರ್ಣದಲ್ಲಿ, ₹181 ಕೋಟಿ ವೆಚ್ಚದಲ್ಲಿ ಇದು ನಿರ್ಮಾಣವಾಗಿದೆ. ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ರನ್‌ವೇ ಇಲ್ಲಿದೆ. ಸದ್ಯ ಸ್ಟಾರ್‌ ಏರ್‌ ಮತ್ತು ಅಲಯನ್ಸ್‌ ಏರ್‌ ಕಂಪನಿಗಳ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಕಲಬುರ್ಗಿಯಿಂದ ಬೆಂಗಳೂರು, ತಿರುಪತಿ, ದೆಹಲಿಗೆ ವಿಮಾನ ಸೇವೆ ಇದೆ.

ವಿಮಾನಯಾನ ಸೇವೆಯಿಂದಾಗಿ ಈ ಭಾಗದ ಜಿಲ್ಲೆಗಳ ಜನರಿಗೆ ಈಗ ‘ರಾಜಧಾನಿ’ ಹತ್ತಿರವಾಗಿದೆ. 2019ರಿಂದ ಈವರೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಕಲಬುರ್ಗಿ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ. ಸದ್ಯ ಪ್ರತಿ ದಿನ 300ಕ್ಕೂ ಹೆಚ್ಚು ಪ್ರಯಾಣಿಕರು ಪ‌್ರಯಾಣಿಸುತ್ತಿದ್ದಾರೆ.

ಈ ಹಿಂದೆ ಕಲಬುರ್ಗಿಯಿಂದ ಮಹಾನಗರಗಳಿಗೆ ರೈಲು, ರಸ್ತೆ ಮಾರ್ಗದ ಮೂಲಕ ಹೋಗಿ ಬರಬೇಕಿತ್ತು. ಇದಕ್ಕೆ ಹೆಚ್ಚು ಸಮಯ ಹಿಡಿಯುತ್ತಿತ್ತು. ಅಲ್ಲದೆ, ಪ್ರಯಾಣವೂ ತ್ರಾಸದಾಯಕವಾಗಿರುತ್ತಿತ್ತು. ವಿಮಾನಯಾನ ಸೇವೆಯಿಂದ ಸುಲಭವಾಗಿ ಹೋಗಿ ಬರಬಹುದು ಎನ್ನುತ್ತಾರೆ ಪ್ರಯಾಣಿಕರು. ವಿವಿಧ ಇಲಾಖೆಗಳ ಅಧಿಕಾರಿಗಳು ಕಲಬುರ್ಗಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಈಗ ಬೆಳಿಗ್ಗೆ ವಿಮಾನದ ಮೂಲಕ ನಗರಕ್ಕೆ ಬಂದು ಸಭೆ ನಡೆಸಿ ಮತ್ತೆ ಸಂಜೆ ವಾಪಸ್ ತೆರಳಲು ಸಾಧ್ಯವಾಗುತ್ತಿದೆ.

ಕೇಂದ್ರೀಯ ವಿಶ್ವವಿದ್ಯಾಲಯವೂ ಸೇರಿದಂತೆ ಐದು ವಿಶ್ವವಿದ್ಯಾಲಯಗಳು ಜಿಲ್ಲೆಯಲ್ಲಿವೆ. ನಾಲ್ಕು ವೈದ್ಯಕೀಯ ಕಾಲೇಜು, ಎರಡು ಎಂಜಿನಿಯರಿಂಗ್ ಕಾಲೇಜು ಇವೆ. ಇಲ್ಲಿ ರಾಜ್ಯ ಸೇರಿದಂತೆ ಹೊರ ರಾಜ್ಯಗಳ ವಿದ್ಯಾರ್ಥಿಗಳೂ ಓದುತ್ತಿದ್ದಾರೆ. ಅವರು ತಮ್ಮ ಊರುಗಳಿಗೆ ತೆರಳಲು, ಕಾಲೇಜು, ವಿ.ವಿಗಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಲು ಇದರಿಂದ ಹೆಚ್ಚು ಅನುಕೂಲವಾಗಿದೆ.

ಬೆಂಗಳೂರು ಸೇರಿದಂತೆ ನೆರೆಯ ರಾಜ್ಯಗಳಿಂದ ತಜ್ಞ ವೈದ್ಯರನ್ನು ಕರೆಸಲು, ತುರ್ತು ಸಂದರ್ಭಗಳಲ್ಲಿ ಏರ್ ಆಂಬುಲೆನ್ಸ್ ಮೂಲಕ ರೋಗಿಗಳನ್ನು ಕಳಿಸಲು ಸಹಕಾರಿಯಾಗಿದೆ.

ವಿಮಾನ ಸೇವೆ ಆರಂಭಗೊಂಡಾಗಿನಿಂದ ಕಲಬುರ್ಗಿ ಸೇರಿದಂತೆ ನೆರೆಯ ವಿಜಯಪುರ, ಯಾದಗಿರಿ ಜಿಲ್ಲೆಗಳ ಜನರಿಗೂ ಅನುಕೂಲವಾಗಿದೆ. ಅಲ್ಲದೆ, ಮಹಾರಾಷ್ಟ್ರ, ತೆಲಂಗಾಣದ ಗಡಿ ಭಾಗದ ಜನರು ವಿಮಾನದ ಮೂಲಕ ಇಲ್ಲಿಗೆ ಬಂದು ರಸ್ತೆ ಮೂಲಕ ತಮ್ಮ ಊರುಗಳಿಗೆ ತೆರಳುತ್ತಾರೆ.

ವಿಮಾನಯಾನ ಸೇವೆಯಿಂದಾಗಿ ಜಿಲ್ಲೆಯಲ್ಲಿ ಬೃಹತ್ ಉದ್ಯಮಗಳು, ಕೈಗಾರಿಕೆಗಳು, ಸಾಫ್ಟ್‌ವೇರ್‌ ಕಂಪನಿಗಳು ಸ್ಥಾಪನೆಯಾಗುವ ನಿರೀಕ್ಷೆ ಹೆಚ್ಚಿಸಿದೆ.

ಆರು ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ

ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಇನ್ನು ಆರು ತಿಂಗಳಲ್ಲಿ ರಾತ್ರಿ ವಿಮಾನ ಸೇವೆ ಆರಂಭವಾಗಲಿದೆ ಎಂದು ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ಅವರು ತಿಳಿಸಿದರು.

ನೈಟ್ ಲ್ಯಾಂಡಿಂಗ್‌ಗೆ ಸಮರ್ಪಕ ಬೆಳಕು ಮತ್ತು ನಾವಿಗೇಷನ್ ವ್ಯವಸ್ಥೆ ಬೇಕು. ಆದರೆ, ಈಗ ಆ ವ್ಯವಸ್ಥೆ ಸರಿಯಾಗಿ ಇಲ್ಲ. ಬೆಳಕಿನ ವ್ಯವಸ್ಥೆಯನ್ನು ಸರಿಪಡಿಸಲಾಗುತ್ತಿದೆ. ಅಲ್ಲದೆ, ನಗರದ ಬಿದ್ದಾಪುರ ಕಾಲೊನಿಯಲ್ಲಿ ಅಳವಡಿಸಲಾಗಿದ್ದ ನಾವಿಗೇಷನ್ ವ್ಯವಸ್ಥೆಯನ್ನು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಇನ್ನು ಆರು ತಿಂಗಳಲ್ಲಿ ಕಾರ್ಯ ಮುಗಿಯಲಿದೆ. ಆ ನಂತರ ಡಿಜಿಸಿಎ ಅನುಮತಿ ಪಡೆದು ನೈಟ್ ಲ್ಯಾಂಡಿಂಗ್‌ಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಬೆಂಗಳೂರು, ದೆಹಲಿ ಮತ್ತು ತಿರುಪತಿ ಜತೆಗೆ ಮುಂಬೈಗೂ ವಿಮಾನ ಸಂಚಾರ ಆರಂಭಿಸಲಾಗಿತ್ತು. ಕೋವಿಡ್ ಕಾರಣ ಸರಿಯಾದ ಸ್ಪಂದನೆ ಸಿಗದ ಕಾರಣ ಮುಂಬೈ ಸೇವೆ ನಿಲ್ಲಿಸಲಾಗಿದೆ. ಡಿಸೆಂಬರ್‌ನಲ್ಲಿ ಮತ್ತೆ ಆರಂಭಿಸಲು ಚಿಂತನೆ ನಡೆಯುತ್ತಿದೆ. ಇಂಡಿಗೊ ಸಂಸ್ಥೆಯು ಇಲ್ಲಿ ವಿಮಾನ ಸಂಚಾರ ಆರಂಭಿಸಲು ಈಗಾಗಲೇ ಮಾರುಕಟ್ಟೆ ಸಮೀಕ್ಷೆ ನಡೆಸಿದೆ ಎಂದು ತಿಳಿಸಿದರು.

ಪೈಲೆಟ್ ತರಬೇತಿ ಕೇಂದ್ರ ಆರಂಭಿಸಲು ವಿಮಾನ ನಿಲ್ದಾಣದಲ್ಲಿ ಹೈದರಾಬಾದ್‌ನ ಏಷಿಯಾ ಪೆಸಿಪಿಕ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿ ಮತ್ತು ದೆಹಲಿಯ ರೆಡ್‌ಬರ್ಡ್ ಫ್ಲೈಟ್ ಅಕಾಡೆಮಿಗಳಿಗೆ ತಲಾ  5 ಸಾವಿರ ಚದರ ಅಡಿ ಜಾಗ ನೀಡಲಾಗಿದೆ. ಅಲ್ಲದೆ, ಕಟ್ಟಡ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಒಂದು ವರ್ಷದ ಒಳಗೆ ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳಲಿವೆ. ಆ ನಂತರ ತರಬೇತಿ ಆರಂಭವಾಗಲಿದೆ ಎಂದರು. ವಿಮಾನ ನಿಲ್ದಾಣದಲ್ಲಿ ಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಂ (ಐಎಲ್‌ಎಸ್‌) ಅಳವಡಿಸಲು ಮನವಿ ಸಲ್ಲಿಸಲಾಗಿದೆ. ಇದರಿಂದಾಗಿ ಪ್ರತಿಕೂಲ ಹವಾಮಾನದಂತಹ ಸಂದರ್ಭದಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಸಾಧ್ಯವಾಗುತ್ತದೆ. ಎರಡು ವರ್ಷಗಳ ಒಳಗೆ ಈ ವ್ಯವಸ್ಥೆ ಅಳವಡಿಸಲಾಗುವುದು ಎಂದರು.

ಈಗ ಒಂದೇ ಟ್ಯಾಕ್ಸಿ ಪಥ ಇದೆ. ಇನ್ನೊಂದು ಪಥ ನಿರ್ಮಿಸುವ ಚಿಂತನೆ ಇದೆ. ಇದರಿಂದ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದರು.

----
ವೈದ್ಯಕೀಯ, ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ

ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿರುವುದು ವೈದ್ಯಕೀಯ, ಶಿಕ್ಷಣ ಮತ್ತು ವಾಣಿಜ್ಯೋಮಗಳ ಅಭಿವೃದ್ಧಿ ಪೂರಕವಾಗಿದೆ ಎಂಬುದು ಹೈದರಾಬಾದ್ ಕರ್ನಾಟಕ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಭೀಮಾಶಂಕರ ಸಿ.ಬಿಲಗುಂದಿ ಅವರ ಅಭಿಮತ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳ ವಿದ್ಯಾರ್ಥಿಗಳು ಸುಲಭವಾಗಿ ಇಲ್ಲಿಗೆ ಬಂದು ಹೋಗಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಅವರು.

ಈ ಮೊದಲು ಸೂಕ್ಷ್ಮ ಮತ್ತು ಅಪರೂಪದ ಶಸ್ತ್ರಚಿಕಿತ್ಸೆಗಳನ್ನು ಮಾಡಲು ವೈದ್ಯರನ್ನು ಹೈದರಾಬಾದ್, ಮುಂಬೈ, ಬೆಂಗಳೂರಿನಿಂದ ಇಲ್ಲಿಗೆ ಕರೆಸಬೇಕಾಗಿತ್ತು. ಅವರು ಬಂದು ಹೋಗಲು ಎರಡು, ಮೂರು ದಿನಗಳು ಬೇಕಾಗುತ್ತಿತ್ತು. ಈಗ ಬೆಳಿಗ್ಗೆ ಬಂದು ಸಂಜೆ ಹೋಗಬಹುದಾಗಿದೆ. ಇದರಿಂದ ಸಮಯವೂ ಉಳಿಯುತ್ತಿದೆ ಎಂದರು.

ಕಲಬುರ್ಗಿಯಿಂದ ಬೇರೆ ಬೇರೆ ಕಡೆ ಹೋಗಲು ಉತ್ತಮ ರೈಲು ಸಂಪರ್ಕ ವ್ಯವಸ್ಥೆ ಇದೆ. ಈಗ ಇಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿ ಹಾಯ್ದು ಹೋಗಿವೆ. ಅದರ ಜತೆಗೆ ವಿಮಾನ ಸಂಚಾರ ಆರಂಭವಾಗಿರುವುದರಿಂದ ತುಂಬಾ ಅನುಕೂಲ ಆಗಿದೆ. ತುರ್ತು ಸಂದರ್ಭದಲ್ಲಿ ಔಷಧವನ್ನು ತರಿಸಲು ಸಾಧ್ಯವಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಏರ್ ಆಂಬುಲೆನ್ಸ್‌ ಮೂಲಕ ಬೇರೆ ಕಡೆಗೆ ರೋಗಿಗಳನ್ನು ಚಿಕಿತ್ಸೆಗಾಗಿ ಕಳಿಸಿ ಅವರ ಜೀವವನ್ನು ಉಳಿಸಲು ಸಾಧ್ಯವಾಯಿತು ಎಂದು ತಿಳಿಸಿದರು.

ಇಲ್ಲಿ ವಿವಿಧ ಕಂಪನಿಗಳ ಶೋರೂಂಗಳು ಇವೆ. ಅವುಗಳ ಮಾಲೀಕರು ಇಲ್ಲಿಗೆ ಸುಲಭವಾಗಿ ಬಂದು ಹೋಗಲು ಅನುಕೂಲವಾಗಿದೆ. ಜಿನ್ನಿಂಗ್ ಕಾರ್ಖಾನೆಗಳು ಅಭಿವೃದ್ಧಿಗೂ ಇದು ಪೂರಕವಾಗಿದೆ ಎಂದರು.

----------
ಜುವೆಲರಿ ಪಾರ್ಕ್‌ಗೆ ಅನುಕೂಲ

ವಿಮಾನ ನಿಲ್ದಾಣ ನಿರ್ಮಾಣದಿಂದಾಗಿ ನಗರದಲ್ಲಿ ಆರಂಭಿಸಲು ಉದ್ದೇಶಿಸಲಾಗಿರುವ ಆಭರಣ ತಯಾರಿಕಾ ಘಟಕಕ್ಕೆ (ಜುವೆಲರಿ ಪಾರ್ಕ್‌) ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ಎಚ್‌ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ.

ಈ ಹಿಂದೆ ವಿಮಾನ ನಿಲ್ದಾಣ ಇಲ್ಲ ಎಂಬ ಕಾರಣಕ್ಕೆ ಐ.ಟಿ ಕಂಪನಿಗಳು ಇಲ್ಲಿ ಬರಲು ಹಿಂದೇಟು ಹಾಕುತ್ತಿದ್ದವು. ಈಗ ವಿಮಾನ ಸೇವೆ ಆರಂಭವಾದಾಗಿನಿಂದ ಇಲ್ಲಿ ಐಟಿ ಕಂಪನಿಗಳನ್ನು ಆರಂಭಿಸಬಹುದು ಎಂದರು.

ಕಾರ್ಗೊ ಸೇವೆ ಆರಂಭಿಸಿದರೆ ಸರಕು ಸಾಗಣೆಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದರು.

ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆ (ಎಂಆರ್‌ಒ) ಘಟಕ ಆರಂಭಿಸಬೇಕು. ಇದರಿಂದ ಸ್ಥಳೀಯ ಕೈಗಾರಿಗಳು ಅಭಿವೃದ್ಧಿಯಾಗುತ್ತವೆ. ನಗರದಲ್ಲಿ ಅದಕ್ಕೆ ಸಾಕಷ್ಟು ಸ್ಥಳ ಇರುವುದರಿಂದ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ಕೋಲ್ಕತ್ತ, ಚೆನ್ನೈ ಸೇರಿದಂತೆ ಇನ್ನಿತರ ಮೆಟ್ರೊ ನಗರಗಳಿಗೆ ವಿಮಾನ ಸೇವೆ ಆರಂಭವಾದರೆ ಕೈಗಾರಿಕೆಗಳು, ವಾಣಿಜ್ಯೋದ್ಯಮಗಳು ಅಭಿವೃದ್ಧಿಯಾಗುತ್ತವೆ ಎಂಬುದು ಅವರ ಅಭಿಮತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು