ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹5 ಕೋಟಿ ವೆಚ್ಚದಲ್ಲಿ ಬ್ರಿಜ್ ಕಂ ಬ್ಯಾರೇಜ್

ರಸ್ತೆಯೊಂದಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ
Last Updated 28 ಅಕ್ಟೋಬರ್ 2020, 4:56 IST
ಅಕ್ಷರ ಗಾತ್ರ

ಹುಣಸಗಿ: ತಾಲ್ಲೂಕಿನ ನಾರಾಯಣಪುರದ ಕೃಷ್ಣಾ ಭಾಗ್ಯ ಜಲ ನಿಗಮದ ವಿಭಾಗದಿಂದ ಹಳ್ಳದ ನೀರನ್ನು ಬಳಸಿಕೊಂಡು ನೀರಾವರಿಗೆ ಒತ್ತು ನೀಡುವ ಮಹತ್ವದ ಯೋಜನೆಯೊಂದನ್ನು ರೂಪಿಸಿದ್ದು, ಈ ಮೂಲಕ ಗ್ರಾಮೀಣ ಭಾಗದ ಬಡ ರೈತರ ನೆರವಿಗೆ ಬರುವ ನಿಟ್ಟಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ( ಕೆಬಿಜೆಎನ್ಎಲ್) ಮುಂದಾಗಿದೆ.

ತಾಲ್ಲೂಕಿನ ಯರಿಕ್ಯಾಳ ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳಿದ್ದು, 1,100 ಮತದಾರರು ಇದ್ದಾರೆ. ಈ ಜನರಿಗೆ ರಸ್ತೆ ಮತ್ತು ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಎರಡು ಕೆಲಸಗಳನ್ನು ಒಂದರ ಅಡಿಯಲ್ಲಿ ನಿರ್ವಹಿಸುವ ಮೂಲಕ ರೈತರಿಗೆ ಹತ್ತಿರವಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿವೆ.

ಯರಿಕ್ಯಾಳ ಗ್ರಾಮದ ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಾಗ ಯರಿಕ್ಯಾಳ, ಕುರೇಕನಾಳ, ಬರದೇವನಾಳ ಯರಿಕ್ಯಾಳ ತಾಂಡ ಮತ್ತಿತರ ಗ್ರಾಮಗಳ ಸಂಪರ್ಕ ಕಡಿತವಾಗುತ್ತಿತ್ತು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗದ್ದೆಪ್ಪಗೌಡ ಮಾಲಿಪಾಟೀಲ ಹಾಗೂ ಹಣಮಂತ್ರಾಯಗೌಡ ಪೊಲೀಸ್ ಪಾಟೀಲ ತಿಳಿಸಿದರು.

ನಮ್ಮ ಗ್ರಾಮದ ಕೆಲ ರೈತರು ಹೊಲದಲ್ಲಿಯೇ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಈ ಬ್ಯಾರೇಜ್ ನಿರ್ಮಾಣದಿಂದ ರೈತರಿಗೆ ಹೆಚ್ಚು ಸಹಕಾರಿಯಾಗಲಿದೆ. ಆದ್ದರಿಂದ ಶಾಸಕ ರಾಜೂಗೌಡ ಅವರ ವಿಶೇಷ ಕಾಳಜಿಯಿಂದಾಗಿ ಈ ಯೋಜನೆ ಸಿದ್ಧವಾಗಿದ್ದು, ಅಂದಾಜು ₹5 ಕೋಟಿ ವೆಚ್ಚದಲ್ಲಿ ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿ ನಿರ್ವಹಿಸಲು ಕೆಬಿಜೆಎನ್ಎಲ್ ಮುಂದಾಗಿದೆ ಎಂದು ಗ್ರಾಮದ ನಿಂಗು ಪಾಟೀಲ ಹಣಮಂತ್ರಾಯ ಸಾಳಿ ಹೇಳಿದರು.

ಈ ಪ್ರದೇಶದಲ್ಲಿ ಪ್ರತಿ ವರ್ಷ ಸರಾಸರಿ 349 ಮಿ.ಮೀ ಮಳೆಯಾಗುತ್ತಿದ್ದು, ನೀರು ವ್ಯರ್ಥವಾಗಿ ಹರಿಯುತ್ತಿತ್ತು. ಆದ್ದರಿಂದ ಕುಡಿಯುವ ನೀರಿನ ಜೊತೆಯಲ್ಲಿ ನೀರಾವರಿಯಿಂದ ವಂಚಿತವಾಗಿರುವ ಸುಮಾರು 100 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುವ ಯೋಜನೆ ಇದಾಗಿದ್ದು, ಹಳ್ಳದ ನೀರನ್ನು ಬಳಸಿಕೊಂಡು ಲಘು ಬೆಳೆಗಳಿಗೆ ನೀರಾವರಿ ಒದಗಿಸಲಾಗುತ್ತಿದೆ. 7 ಸಾವಿರ ಕ್ಯುಸೆಕ್ ನೀರನ್ನು ಬಳಸಿಕೊಂಡು 104 ಮೀಟರ್ ಉದ್ದದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗುತ್ತಿದೆ. 21 ಮುಖ್ಯ ಗೇಟ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ್ ನಾಯ್ಕೋಡಿ ತಿಳಿಸಿದರು.

ಯರಿಕ್ಯಾಳ ಗ್ರಾಮದ ಹಳ್ಳದ ಆ ದಂಡೆಯಲ್ಲಿರುವ ಜಮೀನುಗಳಿಗೆ ತೆರಳಲು ಮತ್ತು ಗ್ರಾಮದ ಸಂಪರ್ಕ ಕಲ್ಪಿಸುವ ಜೊತೆಯಲ್ಲಿ ನೀರಾವರಿಗೆ ಒತ್ತು ನೀಡುವ ಉದ್ದೇಶದಿಂದ ಈ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಶಾಸಕ ರಾಜೂಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT