ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್ಎಲ್‌ ಕಾರ್ಖಾನೆಗೆ ಕಬ್ಬು ಪೂರೈಸಲ್ಲ: ಮಾಜಿ ಶಾಸಕ ಬಿ.ಆರ್‌. ಪಾಟೀಲ

ರೈತರ ಹೆಸರಲ್ಲಿ ಕೋಟ್ಯಂತರ ಸಾಲ, ಕಬ್ಬಿನ ಬಿಲ್‌ ನೀಡದೇ ವಂಚನೆ: ಬಿ.ಆರ್‌.ಪಾಟೀಲ ಆರೋಪ
Last Updated 5 ನವೆಂಬರ್ 2019, 15:13 IST
ಅಕ್ಷರ ಗಾತ್ರ

ಕಲಬುರ್ಗಿ: ‘ಆಳಂದ ತಾಲ್ಲೂಕಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯು ರೈತರನ್ನು ನಂಬಿಸಿ ನಿರಂತರವಾಗಿ ಮೋಸ ಮಾಡುತ್ತ ಬಂದಿದೆ. ಇದರ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗುವುದು’ ಎಂದು ಮಾಜಿ ಶಾಸಕ ಬಿ.ಆರ್‌. ಪಾಟೀಲ ತಿಳಿಸಿದರು.

‘ರೈತರಿಗೆ ಕಬ್ಬಿನ ಹಣ ಪಾವತಿಸುವಲ್ಲಿ ಮೋಸ ಮಾಡುತ್ತ ಬಂದಿದೆ. ಇದರಿಂದ ಬೇಸತ್ತಿರುವ ರೈತರು ಮುಂದಿನ ಹಂಗಾಮಿನಲ್ಲಿ ಈ ಕಾರ್ಖಾನೆಗೆ ಕಬ್ಬು ಸಾಗಿಸದಿರುವ ತೀರ್ಮಾನಕ್ಕೆ ಬಂದಿದ್ದಾರೆ’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘2018- 19ರ ಹಂಗಾಮಿನಲ್ಲಿ ಕಾರ್ಖಾನೆಯವರು ರೈತರ ₹ 11 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಪ್ರತಿ ಟನ್ ಕಬ್ಬಿಗೆ ನಿಯಮದಂತೆ ₹2,250 ದರ ನೀಡಬೇಕು. ಆದರೆ, ಕೇವಲ ₹ 2,100 ಪಾವತಿಸುವ ಮೂಲಕ ವಂಚಿಸುತ್ತಿದ್ದಾರೆ. ಕಾರ್ಖಾನೆಯವರು ಕಬ್ಬು ಕಟಾವು ಮಾಡಿಕೊಂಡು ಸಾಗಿಸಿದರೆ ಲೋಡ್‌ಗೆ ₹ 850 ದರ ಇದ್ದರೆ, ರೈತರೇ ಕಟಾವು ಮಾಡಿ ಸಾಗಿಸಿದರೆಕೇವಲ ₹ 650 ಕೊಡಲಾಗುತ್ತದೆ. ಇದರಿಂದ ರೈತರಿಗೆ ಪ್ರತಿ ಲೋಡ್‌ನಲ್ಲಿ ₹ 200 ನಷ್ಟವಾಗುತ್ತಿದೆ’ ಎಂದೂ ಅವರು ದೂರಿದರು.

‘ರೈತರ ಪಹಣಿ ಪತ್ರಗಳನ್ನು ಪಡೆದಿರುವ ಕಾರ್ಖಾನೆ ಆಡಳಿತ ಮಂಡಳಿ; ರೈತರ ಗಮನಕ್ಕೆ ಬರದಂತೆಯೇ ಅವರ ಜಮೀನಿನ ಮೇಲೆ ಸಾಲ ಪಡೆದಿದೆ. ಓರಿಯಂಟಲ್ ಇನ್ಶೂರೆನ್ಸ್‌ ಕಂಪನಿ ಒಂದರಿಂದಲೇ ₹9 ಕೋಟಿ ಸಾಲ ಪಡೆದಿದ್ದಾರೆ.ಇದರಿಂದ ರೈತರಿಗೆ ‘ನೋ ಡಿವ್‌‘ ಪ್ರಮಾಣಪತ್ರ ಸಿಗದೆ, ಇತರೆ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ರೈತರಿಗೆ ಇದಕ್ಕಿಂತ ದೊಡ್ಡ ಅನ್ಯಾಯ ಬೇಕೆ‘ ಎಂದೂ ಕಿಡಿ ಕಾರಿದರು.

‘2012– 13ನೇ ಸಾಲಿನಲ್ಲಿ ಹೈಕೋರ್ಟ್ ಆದೇಶದಂತೆ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹ 100ರಂತೆ ಒಟ್ಟು ₹ 6 ಕೋಟಿಯನ್ನು ಕಾರ್ಖಾನೆ ನೀಡಬೇಕಿತ್ತು. ಆದರೆ, ಒಂದು ಪೈಸೆ ಕೂಡ ನೀಡಿಲ್ಲ. ಇದು ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರೈತರ ನೇತೃತ್ವದಲ್ಲಿ ಧರಣಿ ನಡೆಸಿದ್ದೆ. ಆಗ ಕ್ಷೇತ್ರದ ಶಾಸಕ ಸುಭಾಷ ಗುತ್ತೇದಾರ ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೆ ಕಣ್ಣೆತ್ತಿ ನೋಡಿಲ್ಲ. ರಾಜ್ಯ ಸರ್ಕಾರದ ಗಮನ ಸೆಳೆಯುವಲ್ಲಿ ಶಾಸಕರು ವಿಫಲವಾಗಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡರಾದ ಗಣೇಶ, ರಾಜಶೇಖರ್, ಸತೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT