ಕಲಬುರಗಿ: ದೇಶದಲ್ಲಿ ಪ್ರತಿಕ್ರಾಂತಿ ಜಾರಿಯಲ್ಲಿದ್ದು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸಿನ ಕೋಟೆಯನ್ನು ಛಿದ್ರಗೊಳಿಸುವ ಯತ್ನವನ್ನು ಪುಷ್ಯಮಿತ್ರನ (ಬ್ರಾಹ್ಮಣಶಾಹಿ) ಸಂತತಿಯವರು ಮಾಡುತ್ತಿದ್ದಾರೆ ಎಂದು ಬೆಂಗಳೂರಿನ ಪ್ರಾಧ್ಯಾಪಕ, ಲೇಖಕ ಸಿ.ಜಿ. ಲಕ್ಷ್ಮಿಪತಿ ಎಚ್ಚರಿಸಿದರು.
67ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಅಂಗವಾಗಿ ಇಲ್ಲಿನ ಬುದ್ಧವಿಹಾರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ’ಅಂಬೇಡ್ಕರ್ ಅವರು ಕ್ರಾಂತಿ–ಪ್ರತಿಕ್ರಾಂತಿಯ ಬಗ್ಗೆ ಬರೆದಿದ್ದರು. ಇದೀಗ ಪ್ರತಿಕ್ರಾಂತಿ ನಡೆಯುತ್ತಿದೆ. ಶೋಷಿತರು, ಅಲಕ್ಷಿತರ ಭಾರತದ ಕುರಿತಾಗಿ ಅಂಬೇಡ್ಕರ್ ಅವರು ಹಲವು ಕನಸುಗಳನ್ನು ಕಟ್ಟಿಕೊಂಡಿದ್ದರು. ಅದಕ್ಕೆ ಭಂಗ ತರುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಒಂದೇ ಪರಿಹಾರವೆಂದರೆ ಬುದ್ಧನ ತತ್ವಗಳನ್ನು ಅಳವಡಿಸಿಕೊಳ್ಳುವುದಾಗಿದೆ’ ಎಂದರು.
‘67 ವರ್ಷಗಳ ಹಿಂದೆ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸುವ ಸಂದರ್ಭದಲ್ಲಿ ಈ ಧರ್ಮದ ಅನೇಕ ಕವಲುಗಳಿದ್ದವು. ಜಪಾನ್, ಕೊರಿಯಾ, ಟಿಬೆಟ್ ಸೇರಿದಂತೆ ಹಲವೆಡೆ ಆಯಾ ದೇಶಕ್ಕೆ ಅನುಗುಣವಾಗಿ ಇದನ್ನು ಅಳವಡಿಸಿಕೊಳ್ಳಲಾಗಿತ್ತು. ಭಾರತಕ್ಕೆ ಹೊಂದುವಂತೆ ಬೌದ್ಧ ಧರ್ಮವನ್ನು ರೂಪಿಸುವ ಹೊಣೆ ಅಂಬೇಡ್ಕರ್ ಅವರ ಮೇಲೆ ಇತ್ತು. ಅದಕ್ಕಾಗಿ ಚಾರ್ವಾಕರು, ದರ್ಶನಗಳು, ವಿವಿಧ ಧರ್ಮಗ್ರಂಥಗಳ ಬಗ್ಗೆ ಮಾಹಿತಿ ಇದ್ದುದರಿಂದ ಭಾರತಕ್ಕೆ ಹೊಂದಿಕೆಯಾಗುವ ಆಚರಣೆಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು’ ಎಂದು ಹೇಳಿದರು.
‘ನಾನು ಹಿಂದು ಧರ್ಮದಲ್ಲಿ ಜನಿಸಿದರೂ ಹಿಂದುವಾಗಿ ಸಾಯಲಾರೆ ಎಂದು ಪ್ರತಿಜ್ಞೆ ಕೈಗೊಂಡು ಅಂಬೇಡ್ಕರ್ ಅವರು ಬೇರೆ ಧರ್ಮ ಸೇರುವ ಇಚ್ಛೆ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ಧರ್ಮ ಸೇರುವಂತೆ ಕ್ರೈಸ್ತ, ಇಸ್ಲಾಂ ಸೇರಿದಂತೆ ವಿವಿಧ ಧರ್ಮದ ಗುರುಗಳು ಆಹ್ವಾನ ನೀಡಿದ್ದರು. ಅಂತಿಮವಾಗಿ ಬೌದ್ಧ ಧರ್ಮವು ಜಗದ ವಿಮೋಚನೆಗೆ ಅಗತ್ಯವಾದ ಧರ್ಮ ಎಂದು ಭಾವಿಸಿ ಬೌದ್ಧ ಧರ್ಮ ಸ್ವೀಕರಿಸಿದರು. ಈಗ ಎಲ್ಲೆಲ್ಲೂ ಬೌದ್ಧ ಧರ್ಮ ಸ್ವೀಕರಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಪ್ರತಿಪಾದಿಸಿದರು.
ಬುದ್ಧ ವಿಹಾರ ಟ್ರಸ್ಟ್‌ನ ಸಂಸ್ಥಾಪಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಧಾಬಾಯಿ ಖರ್ಗೆ ಅವರು ಭಂತೇಜಿ ಅವರಿಗೆ ಚೀವರದಾನ (ಖಾವಿ ವಸ್ತ್ರ) ಮಾಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ, ಶಾಸಕರಾದ ಬಿ.ಆರ್. ಪಾಟೀಲ, ಎಂ.ವೈ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಅರವಿಂದಕುಮಾರ ಅರಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಬಸವರಾಜ ಭೀಮಳ್ಳಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ್, ಗುಲಬರ್ಗಾ ವಿ.ವಿ. ಕನ್ನಡ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ, ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ ಲಂಡನಕರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ರೇಣುಕಾ ಸಿಂಗೆ, ಸುರೇಶ ಹಾದಿಮನಿ, ಶಿವಾನಂದ ಪಾಟೀಲ ಮರತೂರ, ನೀಲಕಂಠರಾವ್ ಮೂಲಗೆ, ಗುಂಡಪ್ಪ ಲಂಡನಕರ್ ಸೇರಿದಂತೆ ಸಹಸ್ರಾರು ಬೌದ್ಧ ಉಪಾಸಕರು ಕಾರ್ಯಕ್ರಮದಲ್ಲಿದ್ದರು.
ಜಾತ್ರೆಯ ಸಂಭ್ರಮ: ಅನ್ನಸಂತರ್ಪಣೆ ಧಮ್ಮ ಚಕ್ರ ಪ್ರವರ್ತನ ದಿನಾಚರಣೆ ಅಂಗವಾಗಿ ಕಲಬುರಗಿಯ ಬುದ್ಧ ವಿಹಾರದಲ್ಲಿ ಮಂಗಳವಾರ ಅಕ್ಷರಶಃ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಕಲಬುರಗಿ ಬೀದರ್ ಯಾದಗಿರಿ ವಿಜಯಪುರ ಜಿಲ್ಲೆಗಳು ಸೇರಿದಂತೆ ನೆರೆಯ ಮಹಾರಾಷ್ಟ್ರದಿಂದಲೂ ಸಹಸ್ರಾರು ಬೌದ್ಧ ಉಪಾಸಕರು ಬುದ್ಧ ವಿಹಾರಕ್ಕೆ ಭೇಟಿ ನೀಡಿದರು. ಭಕ್ತರಿಗಾಗಿ ವಿವಿಧ ಸಂಘಟನೆಗಳು ಅನ್ನಸಂತರ್ಪಣೆ ಏರ್ಪಡಿಸಿದ್ದವು. ಭಗವಾನ್ ಬುದ್ಧ ಅಂಬೇಡ್ಕರ್ ಅವರ ಭಾವಚಿತ್ರಗಳು ನೀಲಿ ಶಾಲು ಜಾಕೆಟ್‌ಗಳ ಮಾರಾಟ ನಡೆಯಿತು. ಎಸಿಪಿ ಸುಧಾ ಆದಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.