ಬುಧವಾರ, ನವೆಂಬರ್ 20, 2019
27 °C

ರಾಮ ಹುಟ್ಟಿದ್ದು ಭಾರತದಲ್ಲಿ ಅಲ್ಲ, ಥೈಲ್ಯಾಂಡ್‌ನಲ್ಲಿ: ಬಹಿರಂಗ ಚರ್ಚೆಗೆ ಆಹ್ವಾನ

Published:
Updated:
Prajavani

ಕಲಬುರ್ಗಿ: ‘ಶ್ರೀರಾಮ ಭಾರತದಲ್ಲಿ ಹುಟ್ಟಿದ್ದಾನೆ ಎಂಬ ಕಥೆ ಕಟ್ಟಿ, ತಮ್ಮ ಲಾಭಕ್ಕಾಗಿ ಜನರಲ್ಲಿ ಭಯ ತುಂಬಲಾಗುತ್ತಿದೆ. ವಾಸ್ತವದಲ್ಲಿ ರಾಮ ಜನಿಸಿದ್ದು ಭಾರತದಲ್ಲಿ ಅಲ್ಲ, ಥೈಲ್ಯಾಂಡ್‌ನಲ್ಲಿ. ಈಗಲೂ ಆ ದೇಶದಲ್ಲಿ ರಾಮನ ಆರಾಧನೆ ನಡೆಯುತ್ತಿದೆ. ಈ ಬಗ್ಗೆ ಯಾರೇ ಚರ್ಚೆಗೆ ಕರೆದರೂ ನಾನು ಸಿದ್ಧ’ ಎಂದು ಅಖಿಲ ಭಾರತ ಭಿಕ್ಕು ಸಂಘದ ಉಪಾಧ್ಯಕ್ಷ ಭಂತೆ ಆನಂದ ಮಹಾಶ್ಥವೀರ ಸವಾಲು ಹಾಕಿದರು.

ಮೆತ್ತಾ ಫೌಂಡೇಷನ್ ಧಮ್ಮಚಕ್ರ ಪ್ರವರ್ತನಾ ದಿನ, ವರ್ಷವಾಸದ ಮುಕ್ತಾಯ ಮತ್ತು ಕಠಿಣ ಛೀವರ ದಾನ ನೀಡುವ ಪ್ರಯುಕ್ತ ಇಲ್ಲಿನ ಸಿದ್ಧಾರ್ಥ ನಗರದ ದೀಕ್ಷಾಭೂಮಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಧಮ್ಮ ಉತ್ಸವ’ದಲ್ಲಿ ಅವರು ಧಮ್ಮ ದೀಕ್ಷೆ ನೀಡಿ ಮಾತನಾಡಿದರು.

‘ಭಾರತದಲ್ಲಿ ದೇವರೆಂದು ಕರೆಯುವ ರಾಮನೇ ಹುಟ್ಟಿಲ್ಲ. ಆತ ಹುಟ್ಟಿದ್ದಾನೆಂದು ಕೇವಲ ಕಲ್ಪನೆಯನ್ನು ಭಾರತೀಯರ ಮೇಲೆ ಹೇರಲಾಗಿದೆ. ಈ ನಿಟ್ಟಿನಲ್ಲಿ ಬ್ರಾಹ್ಮಣರಾದಿಯಾಗಿ ಪ್ರಧಾನಿ, ಜನತೆ, ವಿದ್ವಾಂಸರು, ಮಂತ್ರಿಗಳು, ಇತಿಹಾಸಕಾರರು, ಹೋರಾಟಗಾರರು ಯಾರು ಬೇಕಾದರೂ ಬಂದು ನನ್ನೊಂದಿಗೆ ಚರ್ಚೆ ಮಾಡಿದರೂ ನಾನು ಸಿದ್ಧ ಇದ್ದೇನೆ. ವೈಜ್ಞಾನಿಕವಾಗಿ ಎಲ್ಲವನ್ನು ನಿರೂಪಿಸುತ್ತೇನೆ’ ಎಂದು ಆಹ್ವಾನ ನೀಡಿದರು.

‘ದೇಶದ ರಸ್ತೆ– ರಸ್ತೆಗಳಲ್ಲಿ ದೇವರ ಮಂದಿರಗಳನ್ನು ಕಟ್ಟಿಸಿದ್ದಾರೆ. ಅದಾವುದಕ್ಕೂ ದಾಖಲೆಯೇ ಇಲ್ಲ. ಆದರೆ, ದೆಹಲಿಯಲ್ಲಿ ರಾಮದಾಸ ಮಂದಿರವನ್ನು ಬೀಳಿಸಲಾಗುತ್ತದೆ. ಈ ಮಂದಿರ ನಿರ್ಮಾಣಕ್ಕೆ ಸುಪ್ರಿಂಕೋರ್ಟ್‌ ಅನುಮತಿ ಪಡೆದಿಲ್ಲ ಎನ್ನುವ ಹೇಳಿಕೆ ನೀಡುತ್ತದೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

‘ಮನುಷ್ಯರಲ್ಲಿ ಭಯ ಹುಟ್ಟಿಸುವ, ನಂಬಿಕೆ, ಮೂಢನಂಬಿಕೆಗಳನ್ನು ಹೇರುವ, ಆಹಾರ, ಜೀವನ ಶೈಲಿ, ದೇವರು, ಪಕ್ಷ, ಆಚರಣೆಗಳಲ್ಲೂ ಇಂತಹದ್ದೇ ಇರಬೇಕು ಎಂದು ಒತ್ತಾಯಿಸುವ, ಜಾತಿ ಪದ್ಧತಿ ಮುಂದುವರಿಸುವ ಸ್ಥಿತಿಯಲ್ಲಿ ಇರುವುದು ಬೇಡ ಎಂದು ಅಂಬೇಡ್ಕರ್ ಅವರು ಬೌದ್ಧ ಧರ್ಮದ ದೀಕ್ಷೆ ಪಡೆದರು’ ಎಂದು ತಿಳಿಸಿದರು.

‘ನಮ್ಮ ಮಾಧ್ಯಮಗಳಲ್ಲಿ ದಿನವಿಡೀ ಹಲವಾರು ವಿಷಯಗಳ ಮೇಲೆ ಚರ್ಚೆ ನಡೆಯುತ್ತದೆ. ಆದರೆ, ಧರ್ಮದ ಚರ್ಚೆ ನಡೆದಾಗ ಬೌದ್ಧ ಬಿಕ್ಕುಗಳನ್ನು ಏಕೆ ಕರೆಸುವುದಿಲ್ಲ? ಸುಳ್ಳುಗಳನ್ನು ಪ್ರತಿಪಾದನೆ ಮಾಡುವ ಮುಖಂಡರನ್ನು ಕರೆದು ಟಿ.ವಿ.ಗಳಲ್ಲಿ ಚರ್ಚೆ ಬಿತ್ತರಿಸುತ್ತಾರೆ. ಇದೆಲ್ಲ ವ್ಯವಸ್ಥಿತ ಹುನ್ನಾರ’ ಎಂದೂ ಅವರು ದೂರಿದರು.

‘ಅಂಬೇಡ್ಕರ್ ಅವರೊಂದಿಗೆ ಒಂದು ಲಕ್ಷ ಜನ ಬೌದ್ಧ ಧರ್ಮ ಸ್ವೀಕರಿಸಿದರು. ಆದರೂ ಅವರು ಕಟ್ಟಿದ ಆರ್‌ಪಿಐ ಪಕ್ಷ, ಸಮತಾ ಸೈನಿಕ ದಳ, ಭಾರತೀಯ ಬೌದ್ಧ ಮಹಾಸಭಾ ಹೀಗೆ ಎಲ್ಲ ಸಂಘಟನೆಗಳೂ ಇಬ್ಭಾಗವಾದವು. ಈಗ ಬೌದ್ಧ ಮತ್ತು ಧಮ್ಮವನ್ನು ಒಡೆಯಲಾಗುತ್ತಿದೆ. ಅದಕ್ಕೆ ನಮ್ಮವರೇ ಕಾರಣ ಆಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮತಿ ಸಂಚಾಲಕ ಡಿ.ಜಿ.ಸಾಗರ ಮಾತನಾಡಿದರು. ಪಂಚಾಯತರಾಜ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಡಾ. ಸುರೇಶ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಬಿಕ್ಕುಣಿ ಸುಮನಾ ಪುಣೆ, ಬಿಕ್ಕುಣಿ ಧಮ್ಮದೀಪ ಅಕೋಲಾ, ಕೀರ್ತಿ, ರಾಹುಲ್ ಲಕ್ಷ್ಮಿಕಾಂತ ಹುಬ್ಬಳ್ಳಿ ವೇದಿಕೆ ಮೇಲಿದ್ದರು.

ಸುರೇಶ ಮೇಂಗನ್ ಸ್ವಾಗತಿಸಿದರು. ಅಂಬಿಕಾ ಹುಬ್ಬಳ್ಳಿ ಕಾರ್ಯಕ್ರಮ ನಿರೂಪಿಸಿದರು.

**
ಹನುಮಂತ ಸೂರ್ಯನನ್ನು ನುಂಗಿದ ಎಂಬ ಕಥೆಯನ್ನು ಹೇಳುವವರಿಗೆ ಏನೆನ್ನಬೇಕು. ಆತ ದೇವರು ಎಂದು ನಂಬಿಸಿ, ಆ ಮೂಲಕ ಭಯ ಹುಟ್ಟಿಸಿದ್ದಾರೆ. ಜನರು ಹೀಗೆ ಬದುಕಬೇಕು ಎಂದು ಬಿಂಬಿಸುವ ಪ್ರಯತ್ನಗಳು ನಡೆದಿವೆ.
-ಭಂತೆ ಆನಂದ ಮಹಾಶ್ಥವೀರ, ಉಪಾಧ್ಯಕ್ಷ, ಅಖಿಲ ಭಾರತ ಭಿಕ್ಕು ಸಂಘ 

ಪ್ರತಿಕ್ರಿಯಿಸಿ (+)