ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿ ಹರಿಯುತ್ತಿದೆ ಕಪಿಲಾ ನದಿ

Last Updated 16 ಜೂನ್ 2018, 19:07 IST
ಅಕ್ಷರ ಗಾತ್ರ

ನಂಜನಗೂಡು: ಕೇರಳದ ವೈನಾಡಿನಲ್ಲಿ ಭಾರಿ ಮಳೆ ಬೀಳುತ್ತಿದ್ದು, ಕಬಿನಿ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ 35 ಸಾವಿರ ಕ್ಯುಸೆಕ್‌ ನೀರನ್ನು ಹೊರಗೆ ಬಿಡಲಾಗಿದೆ. ಇದರಿಂದ ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ.

ಸಾಮಾನ್ಯವಾಗಿ ಜುಲೈ ತಿಂಗಳ ಮಧ್ಯಭಾಗದಲ್ಲಿ ಕಪಿಲಾ ನದಿ ಮೈದುಂಬಿ ಹರಿಯುತ್ತದೆ. ಆದರೆ, ಈ ಬಾರಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಉತ್ತಮವಾಗಿರುವುದರಿಂದ ಜೂನ್‌ ಮಧ್ಯ ಭಾಗದಲ್ಲೇ ಜಲಾಶಯದ ಒಳಹರಿವು ಹೆಚ್ಚಾಗಿದೆ. ನದಿಯಲ್ಲೂ ನೀರಿನ ಹರಿವು ಏರಿಕೆಯಾಗಿದೆ. ನದಿ ತೀರದ ಪರಶುರಾಮ ದೇವಾಲಯ ಹಾಗೂ ಸ್ನಾನಘಟ್ಟ ಜಲಾವೃತಗೊಂಡಿದೆ. ಹದಿನಾರು ಕಾಲು ಮಂಟಪ ಬಹುತೇಕ ಮುಳುಗಿದೆ.

ಬೆಳೆ ಹಾನಿ:  ನದಿಗೆ ನೀರು ಬಿಟ್ಟ ಪರಿಣಾಮ ನದಿ ತೀರದ ತಾಲ್ಲೂಕಿನ ಹಲವು ಗ್ರಾಮಗಳ ನೂರಾರು ಎಕರೆ ಗದ್ದೆಗೆ ನೀರು ನುಗ್ಗಿದ್ದು ಕೊಯ್ಲಿಗೆ ಬಂದಿದ್ದ ಭತ್ತ, ರಾಗಿ, ಹೂವಿನ ಬೆಳೆಗೆ ಹಾನಿಯಾಗಿದೆ.

ಕಪಿಲಾ ನದಿ ತೀರದಲ್ಲೇ ಶ್ರೀಕಂಠೇಶ್ವರ ದೇವಾಲಯವಿದೆ. ಇದರ ಪಕ್ಕದಲ್ಲೇ ಕಪಿಲಾ ನದಿಯ ಉಪನದಿಗಳಾದ ಗುಂಡ್ಲು ಹಾಗೂ ಸ್ಪಟಿಕಾ ನದಿಗಳು ಹರಿಯುತ್ತವೆ. ಇವು ದೇವಾಲಯದ ಸಮೀಪವೇ ಸಂಗಮಗೊಳ್ಳುತ್ತವೆ. ಸ್ಪಟಿಕಾ ನದಿ ತೀರದಲ್ಲೇ ಪರಶುರಾಮ ದೇವಾಲಯವಿದೆ. ಶ್ರೀಕಂಠೇಶ್ವರ ದೇವರನ್ನು ನೋಡಿದ ಬಳಿಕ ಪರಶುರಾಮ ದೇವಾಲಯಕ್ಕೆ ಭೇಟಿ ನೀಡಿದರೆ ಪುಣ್ಯ ಪ್ರಾಪ್ತಿ ಎಂಬ ಪ್ರತೀತಿ ಇದೆ. ಹೀಗಾಗಿ, ಪರಶುರಾಮ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿರುತ್ತದೆ.

ಪರಶುರಾಮ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿತ್ತು. ಆದರೆ, ಕಪಿಲಾ ನದಿ ಹಿನ್ನೀರು ಹೆಚ್ಚಾಗಿರುವುದರಿಂದ ದೇವಾ
ಲಯ ಜಲಾವೃತಾಗಿದೆ. ಹೀಗಾಗಿ, ಜೀರ್ಣೋದ್ಧಾರ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಧ್ವನಿವರ್ಧಕದ ಮೂಲಕ ಎಚ್ಚರಿಕೆ

ಕಪಿಲಾ ನದಿ ತುಂಬಿ ಹರಿಯುತ್ತಿರುವುದರಿಂದ ನದಿಯಲ್ಲಿ ಈಜುವುದು, ಆಳದ ಪ್ರದೇಶಗಳಿಗೆ ತೆರಳದಂತೆ ದೇವಾಲಯದ ಆಡಳಿತ ಮಂಡಳಿಯವರು ಧ್ವನಿ
ವರ್ಧಕಗಳ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ.

ಸ್ನಾನಘಟ್ಟದ ಮೆಟ್ಟಿಲುಗಳು ಮುಳುಗಿದ್ದು, ಭಕ್ತರು ನೀರಿಗಿಳಿಯದಂತೆ ತಡೆಯಲು ಹಗ್ಗ ಕಟ್ಟಿದ್ದಾರೆ. ಸ್ನಾನ ಮಾಡುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡುತ್ತಿದ್ದಾರೆ.

ಕೆಆರ್‌ಎಸ್‌ಗೆ 100 ಅಡಿ ನೀರು

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದಲ್ಲಿ ಶನಿವಾರ ಸಂಜೆ ವೇಳೆಗೆ 99.60 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಭಾನುವಾರ ಬೆಳಿಗ್ಗೆ ಹೊತ್ತಿಗೆ 100 ಅಡಿಗಳಿಗೆ ಏರಿಕೆ ಆಗಲಿದೆ.

ಜಲಾಶಯಕ್ಕೆ 28,132 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, 451 ಕ್ಯುಸೆಕ್‌ ಹೊರ ಹರಿವು ಇದೆ. ಸದ್ಯ 22.799 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ. 6 ದಿನಗಳಲ್ಲಿ ಜಲಾಶಯಕ್ಕೆ 23 ಅಡಿಗಳಷ್ಟು ನೀರು ಹರಿದು ಬಂದಿದೆ.

ಶನಿವಾರ ಮುಂಜಾನೆ ಜಲಾಶಯದ ಮಟ್ಟ 98.20 ಅಡಿಗಳ
ಷ್ಟಿತ್ತು. 31,037 ಕ್ಯುಸೆಕ್‌ ಒಳ ಹರಿವು ಇತ್ತು. ಕಳೆದ ವರ್ಷದ ಇದೇ ದಿನ ಜಲಾಶಯದಲ್ಲಿ 67.78 ಅಡಿಗಳಷ್ಟು ನೀರಿತ್ತು. 124.80 ಅಡಿ ಗರಿಷ್ಠ ಎತ್ತರದ ಜಲಾಶಯ ಸಂಪೂರ್ಣ ಭರ್ತಿಯಾದರೆ 49.452 ಟಿಎಂಸಿ ಅಡಿ ನೀರು ಸಂಗ್ರಹವಾಗಲಿದೆ.

ಕಪಿಲಾ ನದಿಯ ನೀರಲ್ಲಿ ಮುಳುಗಿದ ಬೆಳೆ

ನಂಜನಗೂಡು: ಕಬಿನಿ ಜಲಾಶಯದ ನಾಲ್ಕೂ ಕ್ರೆಸ್ಟ್ ಗೇಟ್‌ ಮೂಲಕ ಕಪಿಲಾ ನದಿಗೆ ಶುಕ್ರವಾರ ರಾತ್ರಿಯಿಂದಲೇ 35 ಸಾವಿರ ಕ್ಯುಸೆಕ್‌ ನೀರು ಹರಿಬಿಡಲಾಗಿದೆ. ಇದರ ಪರಿಣಾಮ ನದಿ ತೀರದ ತಾಲ್ಲೂಕಿನ ಹಲವು ಗ್ರಾಮಗಳ ನೂರಾರು ಎಕರೆ ಗದ್ದೆಗೆ ನೀರು ನುಗ್ಗಿದ್ದು ಕೊಯ್ಲಿಗೆ ಬಂದಿದ್ದ ಭತ್ತ, ರಾಗಿ, ಹೂವಿನ ಬೆಳೆಗೆ ಹಾನಿಯಾಗಿದೆ.

ಸುತ್ತೂರು, ಕುಪ್ಪರವಳ್ಳಿ, ಬೊಕ್ಕಹಳ್ಳಿ, ಆಲತ್ತೂರು, ಹೊಸಕೋಟೆ, ಬಿಳುಗಲಿ, ತಾಯೂರು, ತುಂನೇರಳೆ, ಹೊಸಕೋಟೆ, ಬಿಳುಗಲಿ, ನಂದಿಗುಂದ, ಎಡಕೊಳ, ಸಿದ್ದರಾಮನಹುಂಡಿ, ಕುಪ್ಪರವಳ್ಳಿ, ಬಸವಪುರ ಸರಗೂರು ಮುಂತಾದ ಗ್ರಾಮಗಳ ರೈತರಿಗೆ ನಷ್ಟವಾಗಿದೆ.

ವಾರದಿಂದ ಸತತವಾಗಿ ಮಳೆ ಬೀಳುತ್ತಿದ್ದು, ಮಳೆ ಬಿಡುವು ಕೊಟ್ಟಾಗ ಭಕ್ತ ಕೊಯ್ಲು ಮಾಡಲು ರೈತರು ಸಿದ್ಧತೆ ನಡೆಸಿದ್ದರು. ಜಲಾಶಯದಿಂದ ಏಕಾಏಕಿ ನದಿಗೆ ನೀರು ಹರಿಬಿಟ್ಟಿದ್ದು, ಸಾಕಷ್ಟು ನೀರು ಗದ್ದೆಗೆ ನುಗ್ಗಿದ್ದು ಬೆಳೆ ಹಾಳಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT