ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಗರಗಾ ವಸತಿ ಯೋಜನೆಗೆ ಹಸಿರು ನಿಶಾನೆ

ಕಲಬುರ್ಗಿ ಜಿಲ್ಲೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ; ಸಂಪುಟ ಸಭೆಯಲ್ಲಿ ಅನುಮೋದನೆ
Last Updated 28 ಮೇ 2021, 3:56 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಾಗರಗಾ ಗ್ರಾಮದಲ್ಲಿ ₹ 63.76 ಕೋಟಿ ಅಂದಾಜು ವೆಚ್ಚದಲ್ಲಿ ವಸತಿ ಯೋಜನೆ ನಿರ್ಮಾಣ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತ್ಮಾಕ ಅನುಮೋದನೆ ನೀಡಲಾಗಿದೆ.

ಹಾಗರಗಾ ಗ್ರಾಮದಲ್ಲಿ ಶೇ 50–50 ರೈತರ ಸಹಭಾಗಿತ್ವದಲ್ಲಿ ಈ ಯೋಜನೆ ಯನ್ನು ಕೈಗೆತ್ತಿಕೊಳ್ಳಲು ಸಂಪುಟ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿತು.

ಪ್ರಾಧಿಕಾರದಿಂದ ಹಾಗರಗಾ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ಒಟ್ಟು 107 ಎಕರೆ 5 ಗುಂಟೆ ಕರಾಬ್ ಜಮೀನಿನಲ್ಲಿ ರೈತರ ಸಹಭಾಗಿತ್ವದಡಿ ವಸತಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಈ ಜಮೀನನ್ನು ವಸತಿ ಯೋಜನೆಗೆ ಬಿಟ್ಟುಕೊಡಲು ರೈತರು ಒಪ್ಪಿಕೊಂಡಿದ್ದು, ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಈ ಯೋಜನೆಗೆ 17,200 ಅರ್ಜಿಗಳು ಸ್ವೀಕೃತವಾಗಿದ್ದು, ವಸತಿ ಯೋಜನೆಯನ್ನು ₹ 76 ಕೋಟಿ ಮೊತ್ತದ ವೆಚ್ಚದಲ್ಲಿ ನಗರಾಭಿವೃದ್ಧಿ ಆಯುಕ್ತರು 2017ರಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

ವಸತಿ ಯೋಜನೆಗೆ ರಾಜ್ಯ ಹೆದ್ದಾರಿ ಮತ್ತು ಸಂಪರ್ಕ ರಸ್ತೆ ಇರುತ್ತದೆ. ಜಮೀನಿನ ಸುತ್ತಮುತ್ತ ಹಲವಾರು ಖಾಸಗಿ ವಿನ್ಯಾಸಗಳು ಮತ್ತು ಇತರೆ ಬೆಳವಣಿಗೆಗಳು ಬಂದಿರುತ್ತವೆ. ಸದರಿ ಪ್ರದೇಶವು ಹಾಲಿ ರಿಂಗ್ ರಸ್ತೆಯಿಂದ 3 ಕಿ.ಮೀ ದೂರದಲ್ಲಿದ್ದು, ವಸತಿ ಬಡಾವಣೆಗಳಿಗೆ ಸೂಕ್ತವಾಗಿದ್ದು, ಮೂಲಸೌಕರ್ಯಗಳಾದ ನೀರು, ಒಳಚರಂಡಿ, ವಿದ್ಯುತ್ ಸೌಲಭ್ಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅನುಕೂಲವಾಗಲಿದೆ ಎಂದು ಹೇಳಿದರು.

117.5 ಎಕರೆ ಜಮೀನಿನಲ್ಲಿ ಯೋಜನೆ ಕೈಗೊಳ್ಳಲು ಉದ್ದೇಶಿಸಿರುವುದರಿಂದ ನಗರದ ಯೋಜಿತ ಬೆಳವಣಿಗೆಗೆ ಪೂರಕವಾಗಿದ್ದು, ಈ ಯೋಜನೆಯನ್ನು ನಿವೇಶನ ರಹಿತ ನಾಗರಿಕರಿಗೆ ಅಥವಾ ಸಾರ್ವಜನಿಕರಿಗೆ ಹಂಚಿಕೆ ಮಾಡುವ ಸಲುವಾಗಿ ಪ್ರಸ್ತಾಪಿಸಲಾಗಿದೆ ಎಂದರು.

ನೂತನ ಮಾದರಿಯ ಕಾಯಿಪಲ್ಲೆ ಮಾರುಕಟ್ಟೆ: ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿರುವ ಎಂಎಸ್‍ಕೆ ಮಿಲ್ ಬಡಾವಣೆಯಲ್ಲಿ ನೂತನ ಮಾದರಿಯ ಕಾಯಿಪಲ್ಲೆ ಮಾರುಕಟ್ಟೆ ನಿರ್ಮಾಣ ಮಾಡಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಅಂದಾಜು 2 ಎಕರೆ ವಿಸ್ತೀರ್ಣದ ನಾಗರಿಕ ಸೌಲಭ್ಯದ ನಿವೇಶನದಲ್ಲಿ ಸುವರ್ಣ ಕರ್ನಾಟಕ ವಾಣಿಜ್ಯ ಮಳಿಗೆಯನ್ನು ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. 2012ರಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ನೀಡಲಾಗುವ ಅನುದಾನ ಮತ್ತು ಪ್ರಾಧಿಕಾರದ ವತಿಯಿಂದ ₹ 26.30 ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಲು ಆಯುಕ್ತರು ಸಮ್ಮತಿಸಿದ್ದರು.

60 ದ್ವಿಚಕ್ರ, 150 ನಾಲ್ಕು ಚಕ್ರ ವಾಹನ ನಿಲುಗಡೆ, ಲಿಫ್ಟ್, ಸ್ಟೇರ್ ಕೇಸ್, ಟ್ಯಾಂಕ್, ಎಲೆಕ್ಟ್ರಿಕಲ್, ಪೆನೆಲ್ ಕೋಣೆಯನ್ನು ಅಳವಡಿಸಲಾಗುತ್ತದೆ. ನೆಲಮಹಡಿಯಲ್ಲಿ ದೊಡ್ಡ, ಸಣ್ಣ ಅಂಗಡಿ, ಫ್ಲಾಟ್‍ಫಾರಂ, ಸಗಟು ವ್ಯಾಪಾರದ ಹರಾಜು ಪ್ರಕ್ರಿಯೆ ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ, ಕೋಲ್ಡ್ ಸ್ಟೋರೇಜ್, ಬ್ಯಾಂಕ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT