ಭಾನುವಾರ, ಆಗಸ್ಟ್ 14, 2022
20 °C
ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪ

ದೂರು ನೀಡಿದರೂ ಕ್ರಮ ಇಲ್ಲ: ಅಭ್ಯರ್ಥಿಗಳ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕಳೆದ ಮಾರ್ಚ್‌ ತಿಂಗಳಲ್ಲಿ ನಡೆದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಸಂದರ್ಭದಲ್ಲಿ ಕಲಬುರಗಿ ಕೇಂದ್ರದಲ್ಲಿ ಅಕ್ರಮ ನಡೆದಿರುವ ಶಂಕೆ ಇದ್ದು, ಈ ಬಗ್ಗೆ ಸಿ.ಸಿ. ಟಿ.ವಿ. ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸುವಂತೆ ಮನವಿ ಮಾಡಿದರೂ ಪರೀಕ್ಷಾ ಪ್ರಾಧಿಕಾರ ಹಾಗು ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ಪರೀಕ್ಷೆ ಬರೆದ ಅಭ್ಯರ್ಥಿ ಪ್ರವೀಣ ಹರಿದಾಸ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಷ್ಟೋ ಕೇಂದ್ರಗಳಲ್ಲಿ ಕೊಠಡಿ ಮೇಲ್ವಿಚಾರಕರು ಕೊಠಡಿಯಲ್ಲಿ ಇರಲಿಲ್ಲ. ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಉತ್ತರಗಳನ್ನು ಚರ್ಚೆ ಮಾಡಿ ಬರೆದಿದ್ದಾರೆ. ಕಡ್ಡಾಯವಾಗಿ ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಬೇಕು ಎಂಬ ಆದೇಶವಿದ್ದರೂ ಕೆಲ ಕೇಂದ್ರಗಳಲ್ಲಿ ಕ್ಯಾಮೆರಾಗಳೇ ಇರಲಿಲ್ಲ. ಕೆಲವೆಡೆ ಇದ್ದರೂ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ, ಅಲ್ಲಿ ಅಕ್ರಮ ನಡೆದಿರುವ ಶಂಕೆ ಇದೆ. ಈ ಬಗ್ಗೆ ಪರೀಕ್ಷೆ ಮುಗಿದ ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಇ ಮೇಲ್ ಮೂಲಕ ದೂರು ಕಳಿಸಿದೆವು. ಅದಕ್ಕೆ ಸ್ಪಂದನೆ ಸಿಗಲಿಲ್ಲ. ಹೀಗಾಗಿ, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಹೋಗಿದ್ದೆವು. ಅಲ್ಲಿನ ಸಿಬ್ಬಂದಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಬಳಿ ಕಳಿಸಿದರು. ನಮ್ಮ ದೂರಿಗೆ ಪ್ರತಿಕ್ರಿಯಿಸಿದ ಪಿಯು ಡಿ.ಡಿ. ಅವರು ಈ ಬಗ್ಗೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ನೋಟಿಸ್ ಕೊಟ್ಟಿದ್ದು, ಅದರ ಉತ್ತರವನ್ನು ಜಿಲ್ಲಾಧಿಕಾರಿ ಅವರಿಗೆ ಕಳಿಸುತ್ತೇವೆ ಎಂದಿದ್ದರು. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನೂ ಕೊಟ್ಟಿಲ್ಲ. ಈ ಬಗ್ಗೆ ದೂರು ನೀಡಲು ಸ್ಟೇಶನ್ ಬಜಾರ್ ಠಾಣೆಗೆ ಹೋದಾಗ ಅಲ್ಲಿಯೂ ದೂರು ಸ್ವೀಕರಿಸದೇ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಲು ತಿಳಿಸಿದರು. ಹೀಗಾಗಿ, ನಮ್ಮ ಕೆಲಸ ಬರೀ ಕಚೇರಿ ಅಲೆಯುವುದೇ ಆಗಿದೆ. ನಮ್ಮ ದೂರಿನ ಮೇಲೆ ಯಾವ ಕ್ರಮವೂ ಆಗುತ್ತಿಲ್ಲ. ಇದನ್ನು ಗಮನಿಸಿದರೆ ಅಧಿಕಾರಿಗಳೂ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಆರೋಪಿಸಿದರು.

ಅಭ್ಯರ್ಥಿಗಳಾದ ನಿವೇದಿತಾ, ಅಶ್ವಿನಿ, ರಾಚಪ್ಪ, ರಾಘವೇಂದ್ರ, ಹನುಮೇಶ್, ನಿಜಾಮುದ್ದೀನ್ ಹಾಗೂ ಯೂಸುಫ್ ಆರೋಪಿಸಿದರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು