ಭಾನುವಾರ, ಜನವರಿ 19, 2020
23 °C
ಚಿತ್ತಾಪುರದಲ್ಲಿ ಕಾನೂನು ಅರಿವು– ನೆರವು ಕಾರ್ಯಕ್ರಮ

‘ಎಫ್‌ಐಆರ್‌ ದಾಖಲಿಸಲು ನಿರಾಕರಿಸುವಂತಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ‘ಅಪರಾಧ ಘಟನೆ ಕುರಿತು ಎಫ್ಐಆರ್ ದಾಖಲಿಸಲು ನಿರಾಕರಿಸಿದರೆ ಠಾಣಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹ್ಮದ ಮೊಯಿನುದ್ದಿನ್ ಅವರು ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತವಾಗಿ ಹಮ್ಮಿಕೊಂಡ ಮಾನವ ಹಕ್ಕುಗಳ ಕುರಿತು ಕಾನೂನು ಅರಿವು– ನೆರವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸಿ ಉದ್ಘಾಟಿಸಿ ಅವರು ಮಾತನಾಡಿದರು.

‘ಕೌಟುಂಬಿಕ ಸಮಸ್ಯೆ, ಗಂಡ– ಹೆಂಡತಿ ಜಗಳ, ಆಸ್ತಿ ಮತ್ತು ವಾಣಿಜ್ಯ ವಿವಾದಕ್ಕೆ ಸಂಬಂಧಿಸಿದಂತೆ ದೂರು ಬಂದರೆ ಪೊಲೀಸರು ತಕ್ಷಣ ಎಫ್ಐಆರ್ ದಾಖಲಿಸದೆ ವಿಚಾರಣೆ, ತನಿಖೆ ನಡೆಸಬಹುದು. ಕೌಟುಂಬಿಕ ಸಾಮರಸ್ಯ ದೃಷ್ಟಿಯಿಂದ ಪರಸ್ಪರ ಒಪ್ಪಂದಕ್ಕೆ ಬರುವಂತೆ ಸೂಚಿಸಬಹುದು. ಅದು ಸಾಧ್ಯವಾಗದಿದ್ದಾಗ ಮಾತ್ರ ಎಫ್ಐಆರ್ ದಾಖಲಿಸಬೇಕು’ ಎಂದು ಅವರು ಹೇಳಿದರು.

ಮುಖ್ಯ ಅತಿಥಿ, ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಸುಭಾಶ್ಚಂದ್ರ ರಾಠೋಡ್, ಅಧ್ಯಕ್ಷತೆ ವಹಿಸಿದ್ದ ಸಿಪಿಐ ಪಂಚಾಕ್ಷರಿ ಸಾಲಿಮಠ, ಅತಿಥಿ ವಕೀಲ ಶರಣಗೌಡ ಪಾಟೀಲ ಮಾತನಾಡಿದರು.

ವಕೀಲ ಎಸ್.ಪಿ ಸಾತನೂರಕರ ಅವರು 'ಮಾನವ ಹಕ್ಕುಗಳ ರಕ್ಷಣೆ ಮತ್ತು ಪರಿಹಾರ' ಕುರಿತು ಮತ್ತು ವಕೀಲ ಎಸ್.ಎಂ ಹೋಳಿ ಅವರು 'ಸಾಮಾನ್ಯ ಕಾನೂನುಗಳ ಅರಿವು ನೆರವು' ಕುರಿತು ಉಪನ್ಯಾಸ ನೀಡಿದರು.

ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಗಿರಿಧರ ವೈಷ್ಣವ, ವಕೀಲ ವಿ.ಎಸ್ ಪಾಟೀಲ್, ಸಂಗಣ್ಣ ಉಪಸ್ಥಿತರಿದ್ದರು. ಗಂಗಣ್ಣ ಹೊಸೂರ ಅವರು ಕಾನೂನು ಗೀತೆ ಹಾಡಿದರು. ಪಿಎಸ್ಐ ಶ್ರೀಶೈಲ್ ಅಂಬಾಟಿ ಸ್ವಾಗತಿಸಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು