ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಬಿ ಪೊಲೀಸರಿಂದ ಭರ್ಜರಿ ಬೇಟೆ: ಇಸ್ಪೀಟ್ ಕ್ಲಬ್ ಮೇಲೆ ದಾಳಿ; 113 ಜನರ ಬಂಧನ

Last Updated 23 ನವೆಂಬರ್ 2021, 16:18 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಹೊರವಲಯದ ಆಳಂದ ರಸ್ತೆಯಲ್ಲಿರುವ ಜ್ಯೂರಿಚ್ ಕ್ಲಬ್ ಮತ್ತು ಕ್ರಿಸ್ಟಲ್ ಫಾರಂ ರೆಸಾರ್ಟ್‌ಗಳಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 113 ಜನರನ್ನು ಬಂಧಿಸಿ ಅವರಿಂದ ₹ 5.83 ಲಕ್ಷ ವಶಪಡಿಸಿಕೊಂಡಿರುವ ಪೊಲೀಸರು ಕ್ಲಬ್ ಮತ್ತು ರೆಸಾರ್ಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೋಮವಾರ ತಡರಾತ್ರಿ ಎರಡೂ ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಉಪನಗರ ಠಾಣೆ ವ್ಯಾಪ್ತಿಯ ಆಳಂದ ರಸ್ತೆಯಲ್ಲಿರುವ ಜ್ಯೂರಿಚ್ ಕ್ಲಬ್ ಮೇಲೆ ದಾಳಿ ಮಾಡಿದ ಪೊಲೀಸ್‌ ಭಾಸು ಚವ್ಹಾಣ ಹಾಗೂ ಸಿಬ್ಬಂದಿ ಒಟ್ಟು 21 ಜನರನ್ನು ಬಂಧಿಸಿದ್ದಾರೆ. ಅವರಿಂದ ಇಸ್ಪೀಟ್ ಎಲೆ ಮತ್ತು ಆಟಕ್ಕೆ ಇಟ್ಟಿದ್ದ ₹ 2.11 ಲಕ್ಷ ವಶ ಪಡಿಸಿಕೊಂಡಿದ್ದಾರೆ. ಕ್ಲಬ್ ಮಾಲೀಕ ಅರುಣಕುಮಾರ ಪಾಟೀಲ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಬಂಧಿತ 21 ಜನರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಕ್ರಿಸ್ಟಲ್ ಫಾರಂ ರೆಸಾರ್ಟ್ ಮೇಲೆ ದಾಳಿ ಮಾಡಿದ ಸಿಸಿಬಿ ಘಟಕದ ಪಿಎಸ್‌ಐ ವಾಜೀದ್ ಪಟೇಲ್ ಹಾಗೂ ಸಿಬ್ಬಂದಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 92 ಜನರನ್ನು ಬಂಧಿಸಿದ್ದಾರೆ. ಅವರಿಂದ ಇಸ್ಪಿಟ್ ಎಲೆ ಹಾಗೂ ₹ 3.72 ಲಕ್ಷ ವಶಪಡಿಸಿಕೊಂಡಿದ್ದಾರೆ.

ರೆಸಾರ್ಟ್ ಮಾಲೀಕ ಅಶೋಕ ಗುತ್ತೇದಾರ ಬಡದಾಳ ವಿರುದ್ಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್‌ ಕಮಿಷನರ್ ಡಾ. ವೈ.ಎಸ್.ರವಿಕುಮಾರ, ಎಸಿಪಿಗಳಾದ ಅಂಶುಕುಮಾರ, ಜೆ.ಎಚ್. ಇನಾಂದಾರ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ದಾಳಿ ಮಾಡಲಾಗಿತ್ತು. ಒಟ್ಟು 113 ಜನರನ್ನು ಬಂಧಿಸಿರುವುದು ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯ ಈವರೆಗಿನ ದೊಡ್ಡಪ್ರಕರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ನಗರದ ಹೊರವಲಯದಲ್ಲಿ ಇಸ್ಪೀಟ್‌ ಜೂಜಾಟಕ್ಕೆಂದೇ ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದ ಬರುವವ ಸಂಖ್ಯೆ ಹೆಚ್ಚಾಗಿದ್ದು, ಕಳೆದ 15 ದಿನಗಳಿಂದ ಪೊಲೀಸರು ಇಸ್ಪೀಟ್ ಹಾಗೂ ಮಟ್ಕಾ ಜೂಜಾಟದ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT