ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧದಷ್ಟು ಮತಗಟ್ಟೆಗಳಿಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು; ಯಶವಂತ ಗುರುಕರ್

Last Updated 29 ಮಾರ್ಚ್ 2023, 16:18 IST
ಅಕ್ಷರ ಗಾತ್ರ

ಕಲಬುರಗಿ: ‘ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದು, ಜಿಲ್ಲೆಯ 2,380 ಮತಗಟ್ಟೆಗಳ ಪೈಕಿ ಶೇ 50ರಷ್ಟು ಮತಗಟ್ಟೆಗಳ ಮೇಲೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಿ ಮುಕ್ತ, ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾಗಿ ಮತದಾನ ನಡೆಸಲಾಗುವುದು’ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಯಶವಂತ ಗುರುಕರ್ ಹೇಳಿದರು.

‘ಈ ಹಿಂದಿನ ಚುನಾವಣೆಯಲ್ಲಿ ಶೇ 10ರಷ್ಟು ಮತಗಟ್ಟೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಈ ಬಾರಿ ಶೇ 50ರಷ್ಟು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗುವುದು. ಚುನಾವಣಾ ಆಯೋಗದ ವೆಬ್‌ಸೈಟ್ ಮುಖಾಂತರ ಅವುಗಳ ನೇರ ವೀಕ್ಷಣೆ ಮಾಡಬಹುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪರಿಶಿಷ್ಟ ಜಾತಿಯ ಮೂರು ಮೀಸಲು ಕ್ಷೇತ್ರಗಳು ಸೇರಿ ಒಟ್ಟು ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ 10.98 ಲಕ್ಷ ಪುರುಷ ಹಾಗೂ 10.72 ಲಕ್ಷ ಮಹಿಳಾ ಮತದಾರರು ಒಳಗೊಂಡು 21.71 ಲಕ್ಷ ಮತದಾರರು ಇದ್ದಾರೆ. ಇದರಲ್ಲಿ 80 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲ ಮತದಾರರ ಸಂಖ್ಯೆ 70 ಸಾವಿರದಷ್ಟಿದೆ. ಈ ಎಲ್ಲ ಮತದಾರರಿಗೆ ಪ್ರಜಾಪ್ರಭುತ್ವದಡಿ ತಮ್ಮ ಮತದಾನದ ಹಕ್ಕು ಚಲಾಯಿಸುವಂತೆ ಮಾಡಲು ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ’ ಎಂದರು.

‘9 ವಿಧಾನಸಭಾ ಕ್ಷೇತ್ರಗಳಲ್ಲಿ 2,380 ಮತದಾನ ಕೇಂದ್ರಗಳಿದ್ದು, ಅವುಗಳಲ್ಲಿ 45 ಮಹಿಳಾ, ಅಂಗವಿಕಲರ ಹಾಗೂ ಯುವ ನೌಕರರು ನಿರ್ವಹಣೆ ಮಾಡುವ ತಲಾ 9 ವಿಶೇಷ ಮತಗಟ್ಟೆಗಳಿವೆ’ ಎಂದು ಹೇಳಿದರು.

‘ಕಳೆದ ಬಾರಿಯ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳ ಮತಗಟ್ಟೆಗಳಲ್ಲಿ ಮುಖ ಮುಚ್ಚಿಕೊಂಡು ಮತಚಲಾಯಿಸಿರುವುದಾಗಿ ಆರೋಪ ಕೇಳಿ ಬಂದಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಯಾರೂ ಕೂಡ ಮುಖ ಮುಚ್ಚಿಕೊಂಡು ಮತ ಚಲಾಯಿಸುವಂತಿಲ್ಲ’ ಎಂದರು.

‘ಚುನಾವಣೆ ನೀತಿ ಸಂಹಿತೆ ಅವಧಿಯಲ್ಲಿ ಸಾರ್ವಜನಿಕ, ಧಾರ್ಮಿಕ ಕಾರ್ಯಕ್ರಮ ಹಾಗೂ ಜಯಂತ್ಯುತ್ಸವ, ಮೆರವಣಿಗೆಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕು. ರಾಜಕೀಯ ಮುಖಂಡರ ಪ್ರಾಯೋಜನೆ ಕಂಡುಬಂದಲ್ಲಿ ಪ್ರಕರಣ ದಾಖಲಿಸಲಾಗುವುದು. ರಾಜಕೀಯ ಪಕ್ಷಗಳ, ಅಭ್ಯರ್ಥಿಗಳ ನೆರವಿಲ್ಲದೆ ಸಾರ್ವಜನಿಕರು, ಭಕ್ತರು ಸ್ವಯಂ ಪ್ರೇರಿತವಾಗಿ ನಡೆಸುವ ಯಾವುದೇ ತರಹದ ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅನ್ವಯಿಸುವುದಿಲ್ಲ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಕಾಸಿಗಾಗಿ ಸುದ್ದಿ ಮೇಲೆ ನಿಗಾ: ‘ಚುನಾವಣೆ ವೇಳೆ ಯಾವುದೇ ಅಭ್ಯರ್ಥಿ, ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಸುದ್ದಿ ಪ್ರಕಟಣೆ, ಬಿತ್ತರಿಸುವ ಮಾಧ್ಯಮ ಸಂಸ್ಥೆಗಳ ಮೇಲೆ ನಿಗಾ ವಹಿಸಲು ಎಂಸಿಎಂಸಿ ಸಮಿತಿ ರಚಿಸಿಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಗಾವಲು ಇರಿಸಲಾಗುವುದು’ ಎಂದು ಗುರುಕರ್ ಹೇಳಿದರು.

ನೀತಿ ಸಂಹಿತೆಗೂ ಮುನ್ನ ₹3.50 ಕೋಟಿ ಜಪ್ತಿ

ಚುನಾವಣೆಯ ನೀತಿ ಸಂಹಿತೆಗೂ ಮುನ್ನವೇ ಸೂಕ್ತ ದಾಖಲಾತಿ ಇಲ್ಲದೆ, ನಿಯಮ ಉಲ್ಲಂಘಿಸಿದ ಸಂಬಂಧ ಜಿಲ್ಲೆಯ ವಿವಿಧ ಚೆಕ್‌ ಪೋಸ್ಟ್‌ಗಳಲ್ಲಿ ₹3.50 ಕೋಟಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ₹40 ಲಕ್ಷ ನಗದು ಜ‍ಪ್ತಿ ಮಾಡಿಕೊಳ್ಳಲಾಗಿತ್ತು. ಈಗ ಚುನಾವಣೆಗೂ ಮೊದಲೇ ಅಧಿಕ ಮೊತ್ತದ ನಗದು ಜಪ್ತಿಯಾಗಿದೆ. ಹೀಗಾಗಿ, 9 ಕ್ಷೇತ್ರಗಳಲ್ಲಿ 42 ಚೆಕ್‌ಪೋಸ್ಟ್ ತೆರೆಯಲಾಗಿದೆ. ಇದರಲ್ಲಿ 16 ಅಂತರರಾಜ್ಯ(ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ತಲಾ 8), ವಿಧಾನಸಭಾ ಕ್ಷೇತ್ರಗಳಲ್ಲಿ 16 ಹಾಗೂ 10 ನಗರ ವ್ಯಾಪ್ತಿಯಲ್ಲಿ ಚೇಕ್‌ಪೋಸ್‌ ಸ್ಥಾಪಿಸಲಾಗಿದೆ.

ಪ್ರತಿ ಚೆಕ್‌ಪೋಸ್ಟ್‌ನಲ್ಲಿ 3 ಎಸ್‌ಎಸ್‌ಟಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಇರುವರು. ಪ್ರತಿ ಮತಕ್ಷೇತ್ರಕ್ಕೆ ವಲಯ ಅಧಿಕಾರಿ, ವಿಡಿಯೊ ವೀಕ್ಷಣಾ ತಂಡ, ಸ್ಟಾಟಿಕ್ ಸರ್ವಿಲೆನ್ಸ್ ತಂಡ, ಫ್ಲೈಯಿಂಗ್ ಸ್ಕ್ವಾಡ್, ಲೆಕ್ಕ ಮತ್ತು ಹಣಕಾಸು ವೆಚ್ಚ ಅಧಿಕಾರಿಗಳ ತಂಡ ಸೇರಿ 329 ತಂಡಗಳು ಚುನಾವಣೆಯ ಅಕ್ರಮ, ನಿಯಮ ಉಲ್ಲಂಘನೆಯ ಮೇಲೆ ಹದ್ದಿನ ಕಣ್ಣು ಇರಿಸಲಿವೆ.

ಜೇವರ್ಗಿ, ಆಳಂದ, ಅಫಜಲಪುರ ಕ್ಷೇತ್ರಗಳಲ್ಲಿ ವಿಶೇಷ ನಿಗಾ

‘ಜಿಲ್ಲೆಯ ಜೇವರ್ಗಿ, ಆಳಂದ ಮತ್ತು ಅಫಜಪುರ ಮತ ಕ್ಷೇತ್ರಗಳನ್ನು ಸೂಕ್ಷ್ಮ ಕ್ಷೇತ್ರಗಳು ಎಂದು ಗುರುತಿಸಲಾಗಿದೆ. ಹೀಗಾಗಿ, ಅವುಗಳ ಮೇಲೆ ವಿಶೇಷ ನಿಗಾ ವಹಿಸಲಾಗುವುದು’ ಎಂದು ಯಶವಂತ ಗುರುಕರ್ ಹೇಳಿದರು.

‘ಈ ಕ್ಷೇತ್ರಗಳಲ್ಲಿ ನಡೆದ ಹಣ ಹಂಚಿಕೆ, ನೀತಿ ಸಂಹಿತೆ ಉಲ್ಲಂಘನೆ ಸೇರಿ ವಿವಿಧ ಪ್ರಕರಣಗಳ ಆಧಾರದ ಮೇಲೆ ಗುರುತಿಸಲಾಗಿದೆ. ಸಂಚಾರಿ ಜಾಗೃತ ದಳವು ತೀವ್ರ ನಿಗಾ ವಹಿಸಲಿದೆ’ ಎಂದರು.

ಮತದಾರರನ್ನು ಬೆದರಿಸುವ 451 ಜನರು ಗುರುತು

‘ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರ ಪೊಲೀಸ್ ಕಮಿಷನರ್ ಅವರು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಆಧರಿಸಿ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ವೇಳೆ ಮತದಾರರಿಗೆ ಬೆದರಿಕೆ ಒಡ್ಡಬಹುದಾದ 451 ಜನರನ್ನು ಗುರುತಿಸಿ ಪಟ್ಟಿ ನೀಡಿದ್ದಾರೆ’ ಎಂದು ಯಶವಂತ ಗುರುಕರ್ ತಿಳಿಸಿದರು.

‘451 ಜನರ ಪೈಕಿ ಚುನಾವಣೆ ಆಗುವವರೆಗೂ 28 ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಬೆದರಿಕೆ ಒಡ್ಡಬಹುದಾದ ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ’ ಎಂದರು.

ಬ್ಯಾನರ್, ಭಿತ್ತಿಪತ್ರ ತೆರವಿಗೆ ಸೂಚನೆ

ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಮತ್ತು ಖಾಸಗಿ ಹೆದ್ದಾರಿ ಫಲಕಗಳ ಮೇಲಿನ ಸರ್ಕಾರಿ ಯೋಜನೆಗಳ ಪ್ರಚಾರದ ಬ್ಯಾನರ್, ಭಿತ್ತಿಪತ್ರ, ಕಟೌಟ್‌ಗಳನ್ನು ಕೂಡಲೇ ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.‌

ಜನಪ್ರತಿನಿಧಿಗಳಿಗೆ ಸರ್ಕಾರ ನೀಡಿದ ವಾಹನಗಳನ್ನು 24 ಗಂಟೆಗಳ ಒಳಗೆ ವಾಪಸ್ ಮಾಡಬೇಕು. ಬಸ್‌, ಬಸ್ ನಿಲ್ದಾಣ, ಕುಡಿಯುವ ನೀರಿನ ಘಟಕ ಸೇರಿದಂತೆ ವಿವಿಧಡೆ ಇರುವ ರಾಜಕೀಯ ನಾಯಕರ ಭಾವಚಿತ್ರಗಳನ್ನು ತೆರವುಗೊಳಿಸಲಾಗುವುದು. ಇಲ್ಲವೆ ಮುಚ್ಚಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಮತದಾರರ ಮತ್ತು ಮತಗಟ್ಟೆಗಳ ವಿವರ

ಮತಕ್ಷೇತ್ರ; ಪುರುಷ; ಮಹಿಳೆ; ಒಟ್ಟು ಮತದಾರರು; ಸೂಕ್ಷ್ಮ ಮತಗಟ್ಟೆ; ಒಟ್ಟು ಮತಗಟ್ಟೆ

ಅಫಜಲಪುರ; 1,15,002; 1,08,801; 2,23,803; 43; 251

ಜೇವರ್ಗಿ; 1,19,248; 1,15,790; 2,35,038; 9; 279

ಚಿತ್ತಾಪುರ; 1,15,798; 1,15,388; 2,31,186; 32; 257

ಸೇಡಂ; 1,08,006; 1,10,692; 2,18,698; 17; 260

ಚಿಂಚೋಳಿ; 1,01,639; 97,515; 1,99,154; 40; 242

ಕಲಬುರಗಿ ಗ್ರಾಮೀಣ; 1,30,508, 1,23,347; 2,53,855; 39; 293

ಕಲಬುರಗಿ ದಕ್ಷಿಣ; 1,35,393; 1,37,427; 2,72,820; 63; 260

ಕಲಬುರಗಿ ಉತ್ತರ; 1,49,840; 1,50,653; 3,00,493; 154; 284

ಆಳಂದ; 1,23,115; 1,13,049; 2,36,164; 28; 254

ಒಟ್ಟು; 10,98,549; 10,72,662; 21,71,211; 425; 2,380

ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT