ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆಗಳ ಹಿಂಪಡೆಯುವಿಕೆ- ರೈತ ಚಳವಳಿ; ಸಂಘಟನೆಗಳ ಹರ್ಷ

Last Updated 20 ನವೆಂಬರ್ 2021, 7:46 IST
ಅಕ್ಷರ ಗಾತ್ರ

‘ಹಿಂಪಡೆದಿದ್ದನ್ನು ಸಂಸತ್ತಿನಲ್ಲೇ ಖಾತ್ರಿಪಡಿಸಲಿ’‌

ದೇಶದ ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿಕೊಡುವ ಕೇಂದ್ರ ಸರ್ಕಾರದ ಕಾಯ್ದೆಗಳನ್ನು ಪ್ರತಿರೋಧಿಸಿ, 360 ದಿನಗಳಿಂದ ನಿರಂತರವಾಗಿ ನಡೆದ ಹೋರಾಟದಿಂದ ಸರ್ಕಾರ ಪಾಠ ಕಲಿತಿದೆ. ರೈತರ ಸಮರಶೀಲವಾದ ಈ ಪ್ರತಿರೋಧಕ್ಕೆ ಜಗತ್ತಿನಾದ್ಯಂತ ಮನ್ನಣೆ ಸಿಕ್ಕಿದೆ. ಆದರೆ, ನರೇಂದ್ರ ಮೋದಿ ಅವರು ನಂಬಿಕೆ ಇಡುವಂಥ ವ್ಯಕ್ತಿಯಲ್ಲ. ಕಾಯ್ದೆ ಹಿಂಪಡೆದ ವಿಷಯವನ್ನು ಅವರು ಸಂಸತ್ತಿನಲ್ಲಿಯೇ ಖಾತ್ರಪಡಿಸಬೇಕು. ಸರ್ಕಾರ ತನ್ನ ಮೊಂಡುತನದ ಕಾರಣ ಲಕ್ಷಾಂತರ ರೈತರಿಗೆ ನೀಡಿದ ಹಿಂಸೆ ಅಷ್ಟಿಷ್ಟಲ್ಲ.

ಈಗಾಗಲೇ 806 ರೈತರ ಪ್ರಾಣವನ್ನೇ ತೆಗೆದಿದ್ದಾರೆ.‌ ಲಾಠಿ ಚಾರ್ಜ್‌, ಟಿಯರ್ ಗ್ಯಾಸ್ ಹಾಗೂ ವಾಟರ್ ಕೆನಾನ್ ಸಿಡಿಸಿದ್ದಾರೆ. ಲಖಿಂಪುರದಲ್ಲಿ ವಾಹನಗಳನ್ನು ಹಾಯಿಸಿ ಕೊಲ್ಲುವ ದಾಳಿಗಳನ್ನು, ಗುಂಡಾ ದಾಳಿಗಳನ್ನು ಪೊಲೀಸರ ಹಿಂಸೆಗಳನ್ನೂ, ಕೋರ್ಟ್‌ ಕೇಸುಗಳನ್ನೂ ರೈತರು ಎದುರಿಸಬೇಕಾಯಿತು. ಈ ಎಲ್ಲ ಕೇಸ್‌ಗಳನ್ನು ಹಿಂಡೆಪಯುವ ಜತೆಗೆ, ಎಲ್ಲ ಅವಘಡಗಳಿಗೂ ಕೇಂದ್ರವೇ ಹೊಣೆ ಹೊರಬೇಕು.

ಶರಣಬಸಪ್ಪ ಮಮಶೆಟ್ಟಿ,ಜಿಲ್ಲಾ ಘಟಕದ ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ

***

‘ರೈತ ಕ್ರಾಂತಿಯ ಪರಿಣಾಮ ಗೊತ್ತಾಯಿತು’

ಕೇಂದ್ರ ಸರ್ಕಾರವನ್ನು ಮಣಿಸುವಲ್ಲಿ ರೈತರು ಯಶಸ್ವಿಯಾಗಿದ್ದಾರೆ. ಈ ದೇಶದ ಅನ್ನದಾತ ಯಾವತ್ತೂ ಅನ್ಯಾಯವನ್ನು ಸಹಿಸುವುದಿಲ್ಲ. ರೈತರು ಕ್ರಾಂತಿಗೆ ನಿಂತರೆ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿ ಉಳಿಯಲಿದೆ. ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ ಸಂಘಟನೆಗಳು, ಯುವಜನರು ಈ ಸಾಮೂಹಿಕ ಹೋರಾಟದಲ್ಲಿ ಪಾಲ್ಗೊಂಡು ರೈತರಿಗೆ ಕೈಜೋಡಿಸಿದ್ದು ದೊಡ್ಡ ಯಶಸ್ಸಿಗೆ ಕಾರಣ. ಚಳವಳಿಯನ್ನು ಜೀವಂತ ಇಡುವ ಮೂಲಕ ಹುತಾತ್ಮರಾದ ರೈತರನ್ನು ನಾವು ಸ್ಮರಿಸಬೇಕಿದೆ. ‘ದೇಶದ ವಿದ್ಯಾರ್ಥಿಗಳು ರೈತರೊಂದಿಗೆ’ ಎಂಬ ಘೋಷ ವಾಕ್ಯದೊಂದಿಗೆ ಎಐಡಿಎಸ್‌ಒ ಸಂಘಟನೆ ಕೂಡ ಹೋರಾಟದಲ್ಲಿ ಭಾಗಿಯಾಯಿತು. ರೈತರ ಮೇಲಿನ ಸುಳ್ಳು ಕೇಸ್‌ಗಳನ್ನು ಹಿಂದಕ್ಕೆ ಪಡೆಯುವವರೆಗೆ, ಬೆಳೆಗಳ ಅಸಲಿ ವೆಚ್ಚದ ಶೇ 50ರಷ್ಟು ಬೆಂಬಲ ಬೆಲೆ ನೀಡುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ.

ಅಜಯ್‌ ಕಾಮತ್,ರಾಜ್ಯ ಘಟಕದ ಕಾರ್ಯದರ್ಶಿ, ಎಐಡಿಎಸ್‌ಒ‌

***

‘ಕಾರ್ಪೊರೇಟ್‌ ಕುಳಗಳ ಕುಟಿಲ ತಂತ್ರಕ್ಕೆ ಸೋಲು’

ಕೇಂದ್ರ ಸರ್ಕಾರ ಮಾತ್ರವಲ್ಲ; ದೇಶದ ಕೃಷಿಯನ್ನೇ ನುಂಗಬೇಕು ಎಂದು ಕಾರ್ಪೊರೇಟ್‌ ಕುಳಗಳು ಮಾಡಿದ ಕುತಂತ್ರಕ್ಕೆ ಈಗ ಸೋಲಾಗಿದೆ. ರೈತರ ನ್ಯಾಯಬದ್ಧ ಹೋರಾಟಕ್ಕೆ ಜಯವಾಗಿದೆ. ವಿಶ್ವದ ದೊಡ್ಡ ಕ್ರಾಂತಿಗಳ ಸಾಲಿನಲ್ಲಿ ನಿಲ್ಲುವಂಥ ವಿಜಯವಿದು.‌ ಕೇಂದ್ರ ಸರ್ಕಾರ ಮಾಡಿದ ಹಿಂಸೆಗಳಿಗೆ ಹೆದರದೇ ಎದೆಗೊಟ್ಟು ಇಂಥ ಹೋರಾಟ ಮಾಡಿದರು. ನಮ್ಮ ಹೋರಾಟದಿಂದ ಮಾತ್ರ ನಾವು ಬಂಡವಾಳಶಾಹಿಗಳನ್ನು ಈ ದೇಶದಿಂದ ದೂರ ಇಡಬಹುದು ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ.

ಎಚ್.ವಿ.ದಿವಾಕರ್,ಜಿಲ್ಲಾ ಘಟಕದ ಕಾರ್ಯದರ್ಶಿ, ಎಸ್‌ಯುಸಿಐ(ಸಿ)

***

ಎಂದೂ ಯಾರೊಂದಿಗೂ ಮಾತನಾಡದ ಪ್ರಧಾನಿಯನ್ನು ರೈತರು ಇಂದು ಬಾಯಿಬಿಡಿಸಿದ್ದಾರೆ. ದೆಹಲಿಯಲ್ಲಿ ಸೇರಿದ ರೈತರ ತಾಳ್ಮೆ ಹಾಗೂ ಛಲ; ಈ ಎರಡರಿಂದಲೇ ಚಳವಳಿಗೆ ಜಯವಾಗಿದೆ. ಹೋರಾಟ ದಾರಿ ತಪ್ಪಿಸಲು, ರೈತರನ್ನು ಹೆದರಿಸಲು ಸಾಕಷ್ಟು ಪ್ರಯತ್ನಗಳು ನಡೆದವು. ಎಂಥದ್ದೇ ಕಷ್ಟದ ಸಂದರ್ಭದಲ್ಲೂ ರೈತರು ತಾಳ್ಮೆ ಕಳೆದುಕೊಳ್ಳಲಿಲ್ಲ. ಲಕ್ಷಲಕ್ಷ ಸಂಖ್ಯೆಯಲ್ಲಿ ಸೇರಿದವರು ಹೀಗೆ ಒಂದೇ ಮನಸ್ಥಿತಿಯಿಂದ ಗಟ್ಟಿಯಾಗಿ ನಿಂತಿದ್ದು ಇತಿಹಾಸವೇ ಸರಿ. ದೆಹಲಿ, ಪಂಜಾಬ್‌ನ ರೈತರ ಶಿಸ್ತು, ಛಲದ ಗುಣಗಳು ನಮಗೂ ಮಾದರಿ. ಜೀವ ತೆತ್ತಾದರೂ ನಾನು ಉಳಿದವರಿಗೆ ನ್ಯಾಯ ಕೊಡಿಸುತ್ತೇನೆ ಎನ್ನುವ ಅವರ ಮನೋಧರ್ಮವು ನನಗೆ ಅಚ್ಚರಿ ಉಂಟುಮಾಡಿದೆ.

ಸದ್ಯ ಪ್ರಧಾನಿ ಭರವಸೆ ನೀಡಿದ್ದಾರೆ ಅಷ್ಟೇ. ಇದೇ ಅಂತ್ಯವಲ್ಲ. ರೈತರು ಸ್ಥಳದಿಂದ ಕದಲುವುದಿಲ್ಲ. ಸಂಸತ್ತಿನಲ್ಲಿಯೇ ಈ ಕಾಯ್ದೆಗಳನ್ನು ಹಿಂಪಡೆಯಲು ಮತ್ತೊಮ್ಮೆ ತಿದ್ದುಪಡಿ ಕಾಯ್ದೆ ಮಂಡಿಸಬೇಕಾಗುತ್ತದೆ. ಅದನ್ನು ಚರ್ಚಿಸಿಯೂ ಮಾಡಬಹುದು ಅಥವಾ ಸುಗ್ರೀವಾಜ್ಞೆ ಮೂಲಕವೂ ಮಾಡಬಹುದು. ಆದರೆ, ಕಾನೂನಾತ್ಮಕವಾಗಿ ಅಂಕಿತ ಬೀಳುವವರೆಗೂ ನಮ್ಮದು ಅರ್ಧ ಜಯ ಮಾತ್ರ.

–ವಿ.ನಾಗಮ್ಮಾಳ್‌, ರಾಜ್ಯ ಘಟಕದ ಖಜಾಂಚಿ, ರೈತ ಕೃಷಿ ಕಾರ್ಮಿಕರ ಸಂಘಟನೆ (ದೆಹಲಿ ಹೋರಾಟದಲ್ಲಿ ಪಾಲ್ಗೊಂಡವರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT