ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನವೀಯತೆಗೆ ಮಿಡಿಯುತ್ತದೆ ವಿಶ್ವ ಸಾಹಿತ್ಯ’

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವಿ.ಅಳಗವಾಡಿ ಅಭಿಮತ
Last Updated 19 ಜುಲೈ 2021, 3:23 IST
ಅಕ್ಷರ ಗಾತ್ರ

ಕಲಬುರ್ಗಿ: ‘ಭೌಗೋಳಿಕ ಭಿನ್ನತೆ ಇದ್ದರೂ ವಿಶ್ವ ಸಾಹಿತ್ಯ ಮಾನವೀಯತೆಗೆ ಮಿಡಿಯುತ್ತದೆ’ ಎಂದು ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವಿ.ಅಳಗವಾಡಿ ಹೇಳಿದರು.

‘ಧಾರವಾಡ ಕಟ್ಟೆ’ ಜುಲೈ 17ರಿಂದ ನವೆಂಬರ್ ಅಂತ್ಯದವರೆಗೂ ಆಯೋಜಿಸಿರುವ ಜಾಗತಿಕ ಸಾಹಿತ್ಯ ನಿರ್ಮಾಪಕರ ಕುರಿತು ಉಪನ್ಯಾಸ ಸರಣಿ ಹಮ್ಮಿಕೊಂಡಿದೆ.

‘ಡಬ್ಲ್ಯೂ.ಬಿ.ಏಟ್ಸ್ ಮಹಾಕವಿ’ ವಿಷಯದ ಕುರಿತುವಿ.ಟಿ.ನಾಯಕ ಅವರು ನೀಡಿದ ಉಪನ್ಯಾಸ ಮಾಲಿಕೆಯನ್ನು ಭಾನುವಾರ ಆನ್‌ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.‌

‘ಒಂದು ದೇಶದ ಸಾಹಿತ್ಯಕ್ಕೂ ಮತ್ತೊಂದು ದೇಶದ ಸಾಹಿತ್ಯಕ್ಕೂ ಭೌಗೋಳಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಕಾರಣಗಳಿಂದ ವ್ಯತ್ಯಾಸವಿರುತ್ತದೆ. ಆದರೆ, ಎಲ್ಲ ಸಾಹಿತ್ಯದಲ್ಲೂ ಎಲ್ಲರಿಗೂ ಮುಖ್ಯವಾದ, ಎಲ್ಲರ ಹೃದಯವನ್ನು ಮುಟ್ಟಬಲ್ಲ, ಮನಸ್ಸನ್ನು ಬೆಳೆಸಬಲ್ಲ ಸತ್ವ ಇರುತ್ತದೆ’ ಎಂದು ಅಳಗವಾಡಿ ಅಭಿಪ್ರಾಯಪಟ್ಟರು.

‘ಆಧುನಿಕ ಜಾಗತಿಕ ಸಾಹಿತ್ಯದ ನಿರ್ಮಾಪಕರು ಸಮತೆ, ವಾಸ್ತವ್ಯ ಮತ್ತು ಮಾನವೀಯತೆಗೆ ಹೆಚ್ಚು ಒತ್ತು ಕೊಟ್ಟು ಆ ಸತ್ವವನ್ನು ತಮ್ಮ ಸಾಹಿತ್ಯದಲ್ಲಿ ನಿರೂಪಿಸಿದ್ದಾರೆ. ಆದ್ದರಿಂದ, ಅವರು ಸಾಹಿತ್ಯಕ ಎತ್ತರವನ್ನು ಕಾಣಲು ಸಾಧ್ಯವಾಗಿದೆ. ಎಲ್ಲ ಸಾಹಿತ್ಯಗಳಲ್ಲಿ ಮುಖ್ಯವಾದುದನ್ನು ಗುರುತಿಸಿ, ಜಗತ್ತಿನ ಸಾಹಿತ್ಯದ ಸ್ವರೂಪದ ಕಲ್ಪನೆಯನ್ನು ಬೆಳೆಸುವ, ಆ ನೆಲೆಯಲ್ಲಿ ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಸಾಹಿತ್ಯ ಗುರುತಿಸಿಕೊಳ್ಳುವ ಅಗತ್ಯವಿದೆ’ ಎಂದರು.

‘ಯುರೋಪ್ ಮೇಲೆ ಭಾರತೀಯ ಸಾಹಿತ್ಯದ ಪ್ರಭಾವ’ ಎಂಬ ವಿಷಯದ ಕುರಿತು ಹೈದರಾಬಾದಿನ ಇಂಗ್ಲಿಷ್ ಹಾಗೂ ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಪಿ.ವಿ. ಅಮಿತ್ ಕುಮಾರ್ ಮಾತನಾಡಿದರು.

‘ಡಬ್ಲ್ಯೂ.ಬಿ.ಏಟ್ಸ್ ಮಹಾಕವಿ’ ಎಂಬ ವಿಷಯವಾಗಿ ಡಾ.ವಿ.ಟಿ.ನಾಯಕ ಅವರು ಉಪನ್ಯಾಸ ನೀಡಿ, ‘ಏಟ್ಸ್ ಕವಿಯು ಉನ್ನತ ಮಟ್ಟದ ಸೃಜನಶೀಲರು. ಐದು ದಶಕಗಳ ಕಾಲ ಕಾವ್ಯಕೃಷಿಯೊಂದಿಗೆ ತನ್ನ ಜೀವನದ ಕೊನೆಯವರೆಗೂ ಸೃಜನಶೀಲತೆಯನ್ನು ಉಳಿಸಿ-ಬೆಳೆಸಿಕೊಂಡು ಬಂದರು’ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಬಸವರಾಜ ಡೋಣೂರ ಮಾತನಾಡಿ, ‘ಆಧುನಿಕ ಸಾಹಿತ್ಯಕ್ಕೆ ಗಣನೀಯ ಕೊಡುಗೆಗಳನ್ನು ನೀಡಿದ ಲೇಖಕರ ಬಗ್ಗೆ ‘ಧಾರವಾಡ ಕಟ್ಟೆ’ಯಲ್ಲಿ ಚರ್ಚೆಯಾಗುತ್ತದೆ. 19 ಜನ ಜಾಗತಿಕ ಸಾಹಿತ್ಯ ನಿರ್ಮಾಪಕರ ಕುರಿತು ನಾಡಿನ ಸಾಹಿತಿಗಳು ಉಪನ್ಯಾಸಗಳನ್ನು ನೀಡಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT