ಸೋಮವಾರ, ಜನವರಿ 24, 2022
23 °C
ಸಿಎಂ, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್‌ಗೂ ದೂರು 

ಮದುವೆಯಾಗುವುದಾಗಿ ನಂಬಿಸಿ ಮೋಸ: ಕಲಬುರಗಿ ಪಾಲಿಕೆ ಆಯುಕ್ತರ ವಿರುದ್ಧ ಯುವತಿ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಮದುವೆಯಾಗುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಕಲಬುರಗಿ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ವಿರುದ್ಧ ಯುವತಿ ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಹಾಗೂ ಕಲಬುರಗಿ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಮೂಲಕ ಯುವತಿ ದೂರು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಪತ್ರ ಸದ್ಯ ವೈರಲ್ ಆಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

ಆರೋಪಕ್ಕೆ ಸ್ನೇಹಲ್ ಲೋಖಂಡೆ ಸ್ಪಷ್ಟನೆ: ನನ್ನ ವಿರುದ್ಧ ಆರೋಪಿಸಿರುವ ಯುವತಿ ಯಾರೆಂದು ಗೊತ್ತಿಲ್ಲ. ಈ ಬಗ್ಗೆ ಪೊಲೀಸರಿಗೂ ನಾನು ದೂರು ನೀಡಿದ್ದೇನೆ. ನನ್ನ ಹೆಸರು ಕೆಡಿಸುವುದಕ್ಕೆ ಈ ರೀತಿಯಾಗಿ ಮಾಡುತ್ತಿದ್ದಾರೆ. ಆ ಯುವತಿ ಜತೆ ನಾನು ಯಾವುದೇ ಚಾಟಿಂಗ್ ಮಾಡಿಲ್ಲ. ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ವಾಟ್ಸ್ಆ್ಯಪ್ ಚಾಟಿಂಗ್ ಬಗ್ಗೆಯೂ ನನಗೆ ಗೊತ್ತಿಲ್ಲ. ಆ ಫೋಟೊಗಳು ಎಲ್ಲಿಂದ ತೆಗೆದುಕೊಂಡರೆಂದು ಗೊತ್ತಿಲ್ಲ ಎಂದು ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಹೇಳಿಕೆ ನೀಡಿದ್ದಾರೆ.

ದೆಹಲಿ ಮೂಲದ ಯುವತಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಈವರೆಗೆ ನನಗೆ ಯಾವುದೇ ರೀತಿ ಬ್ಲ್ಯಾಕ್‌ಮೇಲ್ ಮಾಡಿಲ್ಲ. ಆದರೆ ಆ ಯುವತಿ ನನಗೆ ಬೆದರಿಸಲು ಈ ರೀತಿ ತಂತ್ರ ಮಾಡಿದ್ದಾಳೆ. ಆ ಯುವತಿ ಟ್ವೀಟ್ ಸಂಬಂಧ ನಾನು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದೇನೆ ಎಂದು ಪಾಲಿಕೆ ಆಯುಕ್ತ ಸ್ನೇಹಲ್ ತಿಳಿಸಿದ್ದಾರೆ.

'ದೆಹಲಿ ಮೂಲದ ಯುವತಿ ಪೋಷಕರ ಜೊತೆ ಕಚೇರಿಗೆ ಬಂದಿದ್ದಳು. ಪಾಲಿಕೆ ಆಯುಕ್ತ ಸ್ನೇಹಲ್ ತನಗೆ ಪರಿಚಯ ಇದ್ದಾರೆ. ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ಹೇಳಿದ್ದರು. ಯುವತಿ ಮತ್ತು ಪೋಷಕರು ಯಾವುದೇ ಲಿಖಿತ ದೂರು ನೀಡಿಲ್ಲ. ದೆಹಲಿಯಲ್ಲಿ ಭೇಟಿ ಮಾಡಿದ್ದರಿಂದ ಅಲ್ಲಿಯೇ ದೂರು ನೀಡಲು ಹೇಳಲಾಗಿತ್ತು. ಈ ಕುರಿತು ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಶುಕ್ರವಾರ ದೂರು ನೀಡಿದ್ದಾರೆ. ಆ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಹೆಸರು ಹಾಳು ಮಾಡುತ್ತಿದ್ದಾಳೆ ಎಂದು ದೂರು ನೀಡಿದ್ದಾರೆ. ನಾವು ಯಾವುದೇ ಲಾಬಿಗೆ ಮಣಿದಿಲ್ಲಾ. ಸಂಧಾ‌ನ ಮಾಡಿಕೊಳ್ಳುವಂತೆಯೂ ಹೇಳಿಲ್ಲ' ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ವೈ. ಎನ್. ರವಿಕುಮಾರ್ ಹೇಳಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದ ಯುವತಿ: ವಾರದ ಹಿಂದೆಯೇ ಜಿಲ್ಲಾಧಿಕಾರಿ ವಿ. ವಿ. ಜೋತ್ಸ್ನಾರನ್ನು ಭೇಟಿ ಮಾಡಿದ್ದ ಯುವತಿ ತನ್ನ ಅಳಲು ತೋಡಿಕೊಂಡಿದ್ದರು. ಆದರೆ ಯಾರೂ ಸ್ಪಂದಿಸಿಲ್ಲ. ಯಾರನ್ನು ಭೇಟಿಯಾದರೂ ನನಗೆ ನ್ಯಾಯ ಸಿಕ್ಕಿಲ್ಲ. ಎಲ್ಲರೂ ರಾಜಿ ಮಾಡಿಕೊಳ್ಳಲು ಹೇಳಿದ್ದಾರೆ ಎಂದು ಯುವತಿ ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು