ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿದಂತೆ ನಡೆದವರು ಮಹಾತ್ಮರು; ಚೆನ್ನವೀರ ಶಿಚಾರ್ಯರು

Last Updated 3 ಅಕ್ಟೋಬರ್ 2022, 5:28 IST
ಅಕ್ಷರ ಗಾತ್ರ

ಕಲಬುರಗಿ: ‘ಮನಸ್ಸು ಮತ್ತು ಮಾತಿನಲ್ಲಿ ಸದ್ವಿಚಾರವಿದ್ದು, ಅದನ್ನು ಕೃತಿಯಲ್ಲೂ ತಂದವರು ಮಹಾತ್ಮರು ಎನಿಸಿಕೊಳ್ಳುತ್ತಾರೆ’ ಎಂದುಹಾರಕೂಡದ ಸಂಸ್ಥಾನ ಮಠದ ಚೆನ್ನವೀರ ಶಿಚಾರ್ಯರು ಹೇಳಿದರು.

ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠದಿಂದ ನಗರದ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರಿಗೆ 2022ನೇ ಸಾಲಿನ ‘ಚೆನ್ನ ರೇಣುಕ ಬಸವ ಪ್ರಶಸ್ತಿ’ ಪ್ರದಾನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಶರಣಬಸವಪ್ಪ ಅಪ್ಪ ಅವರು ಲಿಂಗದಲ್ಲಿ ಮನ, ಗುರುವಿನಲ್ಲಿ ತನವು ಸಮರ್ಪಿಸಿ ನಿರಂತರವಾಗಿ ದಾಸೋಹ ಕಾಯಕ ಮಾಡಿಕೊಂಡು ಬರುತ್ತಿದ್ದಾರೆ. ಎಂಟು ದಶಕಗಳಿಂದ ಸಮಾಜವನ್ನು ಜ್ಞಾನ ಹಾಗೂ ಅನ್ನ ದಾಸೋಹದ ಮುಖಾಂತರ ಬೆಳಗಿದ್ದಾರೆ’ ಎಂದರು.

‘ಹಸಿದವನಿಗೆ ಅನ್ನ ಹಾಕಿದರೆ ಅದು ಸ್ವರ್ಗಕ್ಕೆ ಕರೆದೊಯ್ಯುತ್ತದೆ. ಪ್ರತಿಯೊಬ್ಬರು ತಮ್ಮ ದುಡಿಮೆಯಿಂದ ಬಂದ ಗಳಿಕೆಯಲ್ಲಿ ಶೇ 90ರಷ್ಟು ಸ್ವಂತಕ್ಕೆ, ಉಳಿದ ಶೇ 10ರಷ್ಟಾದರು ದಾಸೋಹಕ್ಕೆ ವಿನಿಯೋಗಿಸಬೇಕು’ ಎಂದು ತಿಳಿಸಿದರು.

‘ಶರಣಬಸವಪ್ಪ ಅಪ್ಪ ಅವರು ವಿಶ್ವವಿದ್ಯಾಲಯದಲ್ಲಿ ಕಲಿಯದೆ, ಗ್ರಂಥಗಳನ್ನು ಓದದೆ ಅವರೇ ಗ್ರಂಥವಾಗಿ ಜ್ಞಾನದ ಬೋಧನೆ ಮಾಡಿದರು. ಪರರ ಮನೆಯನ್ನು ಮಣ್ಣಂತೆ, ಎಲ್ಲ ಪ್ರಾಣಿಗಳನ್ನು ತನ್ನಂತೆಯೇ ಜೀವಿಗಳು ಎಂದಿಕೊಳ್ಳುವವನು ಪಂಡಿತ ಎನಿಸಿ ಕೊಳ್ಳುತ್ತಾನೆ’ ಎಂದು ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಿಣಿ ಎಸ್‌. ಅಪ್ಪ ಮಾತನಾಡಿ, ‘ಶರಣ ಬಸವಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ತೆರೆಯುವ ಮೂಲಕ ಈ ಭಾಗದ ಶೈಕ್ಷಣಿಕ ಸಬಲೀಕರಣಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಇಲ್ಲಿ ಕಲಿತವರು ವೈದ್ಯರಾಗಿ, ಎಂಜಿನಿಯರಾಗಿ ಖಾಸಗಿ ಕಂಪನಿಗಳು, ಸರ್ಕಾರಿ ಹುದ್ದೆಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ’ ಎಂದರು.

ಚೆನ್ನ ರೇಣುಕ ಬಸವ ಪ್ರಶಸ್ತಿಯು ₹1 ಲಕ್ಷ ನಗದು, 20 ಗ್ರಾಂ ಚಿನ್ನ, ಪ್ರಶಸ್ತಿ ಫಲಕ ಒಳಗೊಂಡಿದೆ. ಇದೇ ವೇಳೆ ಚೆನ್ನವೀರ ಶಿವಾಚಾರ್ಯರಿಗೆ ಬೆಳ್ಳಿ ಕಿರೀಟ ತೊಡಿಸಿ, ತುಲಾಭಾರ ಮಾಡಲಾಯಿತು.

ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಬಸವಕಲ್ಯಾಣದ ಶಾಸಕ ಶರಣು ಸಲಗರ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಶಶೀಲ್ ನಮೋಶಿ, ಅಲ್ಲಂ ಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ಬಿ.ಆರ್. ಪಾಟೀಲ, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಕುಲಪತಿ ಡಾ.ನಿರಂಜನ ನಿಷ್ಠಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಡೀನ್ ಲಕ್ಷ್ಮಿ ಮಾಕಾ, ಶರಣು ಮೋದಿ, ಡಾ.ಎಸ್.ಬಿ ಕಾಮರೆಡ್ಡಿ, ಬಾಬು ಹೊನ್ನಾನಾಯಕ, ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ, ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT