ಚಿಂಚೋಳಿ: ತಾಲ್ಲೂಕಿನ ರುದ್ನೂರು ಗ್ರಾಮದ ಬಳಿ ಶಹಾಪುರ ಶಿವರಾಂಪುರ ರಾಜ್ಯ ಹೆದ್ದಾರಿ 122ರಲ್ಲಿ ಭಾನುವಾರ ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದು ಟಿಎಪಿಸಿಎಂಎಸ್ ನಿರ್ದೆಶಕ ಮಲ್ಲಿಕಾರ್ಜುನ ಕೊಡದೂರು ತಿಳಿಸಿದ್ದಾರೆ.
ರುದ್ನೂರು ಚಿಂತಪಳ್ಳಿ ಗ್ರಾಮದ ಗ್ರಾಮದ ಮಧ್ಯೆ ಸಂಜೆ ಸುರಿದ ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಸುದ್ದಿ ತಿಳಿದು ಧಾವಿಸಿದ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳನ್ನು ಹೆದ್ದಾರಿಯಿಂದ ಸ್ಥಳಾಂತರಿಸಿ ಅಲ್ಲಿಯೇ ರಸ್ತೆಯ ಪಕ್ಕದಲ್ಲಿ ಹಾಕಿದ್ದಾರೆ ಎಂದರು.
ಜೆಸ್ಕಾಂ ಸಿಬ್ಬಂದಿ ಕಂಬಗಳು ನೆಲಕ್ಕುರುಳಿದ ಮೇಲೆ ಬಂದು ಸರಿಪಡಿಸುವುದಕ್ಕಿಂತ ವಿದ್ಯುತ್ ಕಂಬಗಳ ದೃಢತೆಯನ್ನು ಮಳೆಗಾಲಕ್ಕೂ ಮುನ್ನ ಪರಿಶೀಲಿಸಿ ಬೀಳದಂತೆ ನೋಡಿಕೊಳ್ಳುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ.
ಆರು ತಿಂಗಳ ಹಿಂದೆ ಹಾಕಿದ ವಿದ್ಯುತ್ ಕಂಬ ಈಗ ಬಿದ್ದಿವೆ. ಕಪ್ಪು ಮಣ್ಣಿನ ಹೊಲದಲ್ಲಿ ವಿದ್ಯುತ್ ಕಂಬಗಳು ಮಳೆ ನೀರಿನಲ್ಲಿ ಮಣ್ಣು ನೆಂದಾಗ ನೆಲಕ್ಕುರುಳುತ್ತಿವೆ ಹೀಗಾಗಿ ಕಂಬ ಸ್ಥಾಪಿಸುವಾಗ ಸಿಮೆಂಟ್ ಕಾಂಕ್ರೀಟ್ ಹಾಕಬೇಕೆಂದು ಒತ್ತಾಯಿಸಿದರು.