ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆ ಬೆಳೆದು ಯಶ ಕಂಡ ರೈತ

ಕೃಷಿಯಲ್ಲಿ ಖುಷಿ ಕಂಡುಕೊಂಡ ಶಿವಲಿಂಗಪ್ಪ ಕಲಶೆಟ್ಟಿ ಕುಟುಂಬ
Last Updated 14 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ರಾಯಕೋಡ ಗ್ರಾಮದ ಪ್ರಗತಿಪರ ರೈತ ಶಿವಲಿಂಗಪ್ಪ ಕಲಶೆಟ್ಟಿ ಇಷ್ಟಪಟ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಯಶಸ್ಸು ಕಂಡಿದ್ದಾರೆ.

ಕಳೆದ ವರ್ಷ ಜಿ-9 ಅಂಗಾಂಶ ಬಾಳೆ ಬೆಳೆದು 5 ಎಕರೆ ಜಮೀನಿನಲ್ಲಿ ₹ 16.5 ಲಕ್ಷ ಆದಾಯ ಗಳಿಸಿ ಬೇರೆ ರೈತರು ಬಾಳೆ ಬೇಸಾಯದಲ್ಲಿ ತೊಡಗುವಂತೆ ಮಾಡಿದ್ದಾರೆ. ಬಾಳೆ ಬೆಳೆಯ ದ್ವಿತೀಯ ಫಸಲು ತೋಟದಲ್ಲಿ ಬೆಳವಣಿಗೆ ಹಂತದಲ್ಲಿದೆ.

ಒಟ್ಟು 7 ಸಾವಿರ ಬಾಳೆ ಗಿಡಗಳಿವೆ. ಪ್ರತಿ 2 ಸಾವಿರ ಗಿಡಗಳು 2 ತಿಂಗಳು ಅಂತರದಲ್ಲಿ ಫಸಲು ಕಟಾವಿಗೆ ಬರುವಂತೆ ಅಂತರ ಕಾಯ್ದುಕೊಂಡು ನಾಟಿ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ದರ ಲಭಿಸುವಂತೆ ಮೆರೆದಿದ್ದಾರೆ.

ಪ್ರಸಕ್ತ ವರ್ಷ 86 ಕ್ವಿಂಟಲ್ ಹೆಸರು, 17 ಕ್ವಿಂಟಲ್ ಉದ್ದು ಹಾಗೂ 180 ಕ್ವಿಂಟಲ್ ತೊಗರಿ ಬೆಳೆದಿದ್ದಾರೆ. 5 ಎಕರೆ ಬಾಳೆಯ ಎರಡನೇ ಫಸಲು, 20 ಗುಂಟೆ, ಈರುಳ್ಳಿ, 20 ಗುಂಟೆ ಗೋಧಿ, ಒಂದುವರೆ ಎಕರೆ ಕಲ್ಲಂಗಡಿ ಬೆಳೆ ಇವರ ತೋಟದಲ್ಲಿದೆ.

ಸ್ವಂತ 58 ಎಕರೆ ಜಮೀನಿನ ಜತೆಗೆ ಇತರ ರೈತರ ಜಮೀನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡು ಬೇಸಾಯ ನಡೆಸುತ್ತಿರುವ ಶಿವಲಿಂಗಪ್ಪ ಕಲಶೆಟ್ಟಿ ಸುತ್ತಲಿನ ಗ್ರಾಮಗಳ ರೈತರಿಗೆ ಮಾದರಿಯಾಗಿದ್ದಾರೆ.

ಎಲ್ಲಾ ಬೆಳೆಗಳಿಗೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿರುವ ರೈತ ನೀರಿನ ಮಿತವ್ಯಯದ ಜತೆಗೆ ಹೆಚ್ಚು ಇಳುವರಿ ಮೂಲಕ ಅಧಿಕ ಆದಾಯ ಪಡೆಯುತ್ತಿದ್ದಾರೆ. ತೋಟದ ಸುತ್ತಲೂ ಸೋಲಾರ್ ತಂತಿಬೇಲಿ ನಿರ್ಮಿಸಿಕೊಂಡಿದ್ದಾರೆ. ರಸಗೊಬ್ಬರ ಹಾಗೂ ಜೀವಾಮೃತ ಬೆಳೆಗಳಿಗೆ ಪೂರೈಸಲು ಪ್ರತ್ಯೇಕ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಅಲ್ಲದೆ ಮಂಗಗಳ ಹಾವಳಿ ತಡೆಗಟ್ಟಲು ₹500ಯಲ್ಲಿ ಮಂಕಿ ಗನ್ ಮಾಡಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ಈರುಳ್ಳಿ ಶೇಖರಣ ಘಟಕ ಪಡೆದಿರುವ ಅವರು ಬೆಳ್ಳುಳ್ಳಿ ಬೇಸಾಯವು ನಡೆಸುತ್ತಿದ್ದಾರೆ. ಜತೆಗೆ ಮನೆಗೆ ಅಗತ್ಯವಾದಷ್ಟು ತರಕಾರಿ ಬೆಳೆಗಳ ಬೇಸಾಯ ಅವರ ತೋಟದಲ್ಲಿ ಕಾಣಸಿಗುತ್ತದೆ.

ಬಾಳೆ ಬೆಳೆಯ ಸುತ್ತಲೂ ಛಡಿಯ ಗಿಡಗಳನ್ನು ನೆಟ್ಟಿರುವ ಇವರು ಕಲ್ಲಂಗಡಿ, ತರಕಾರಿ ಮತ್ತು ಈರುಳ್ಳಿ ಸುತ್ತಲೂ ಚಂಡು ಹೂವು ನೆಟ್ಟು ರೋಗಗಳಿಂದ ರಕ್ಷಿಸಿದ್ದಾರೆ ಇವರಿಗೆ ಕೃಷಿ ಇಲಾಖೆ ಶ್ರೇಷ್ಠ ರೈತ ಪ್ರಶಸ್ತಿ ನೀಡಿ ಗೌರವಿಸಿದೆ. ಶಿವಲಿಂಗಪ್ಪ ಕಲಶೆಟ್ಟಿ ಮತ್ತು ಅವರ ಮಕ್ಕಳ ಪರಿಶ್ರಮದಿಂದ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹಣಮಂತ ಡೋಣಗಾಂವ್ ತಿಳಿಸಿದರು.

‘ಜಿಆರ್ಜಿ 811 ತೊಗರಿ ತಳಿ ಬೀಜ ತಂದು ಬೇಸಾಯ ಮಾಡಿ ರೈತರಿಗೆ ₹ 12.5 ಸಾವಿರಕ್ಕೆ ಕ್ವಿಂಟಲ್ ದರದಲ್ಲಿ ಬೀಜ ಮಾರಾಟ ಮಾಡಿದ್ದಾರೆ. ಇವು ನೆಟೆರೋಗ ನಿರೋಧಕ ಆಗಿದ್ದರಿಂದ ರಾಯಕೋಡ ಹಾಗೂ ಸುತ್ತಲಿನ ರೈತರಲ್ಲಿ ಇವುಗಳು ಗಾಣಿಗರ್ ಬೀಜ ಎಂದೇ ಖ್ಯಾತಿ ಪಡೆದಿವೆ’ ಎಂದರು.

(ಮೊ:97319 41879)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT