ಶುಕ್ರವಾರ, ನವೆಂಬರ್ 27, 2020
19 °C

ಚಿಂಚೋಳಿ: ಕಾಣದ ವಿಜಯದಶಮಿ ಸಡಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನಲ್ಲಿ ಈ ವರ್ಷ ವಿಜಯದಶಮಿ ಹಬ್ಬದ ಸಡಗರ ಅತಿವೃಷ್ಟಿ, ಪ್ರವಾಹ ಹಾಗೂ ಕೊರೊನಾ ಹಾವಳಿಯಿಂದಾಗಿ ಕಣ್ಮರೆಯಾಗಿದೆ.

ಭಕ್ತಿಶ್ರದ್ಧೆಯಿಂದ 10 ದಿನಗಳ ಕಾಲ ಆಚರಿಸಲಾಗುವ ತುಳಜಾಪುರ ಅಂಬಾಭವಾನಿಯ ಆರಾಧನೆ ಮನೆ ಮನೆಯಲ್ಲೂ ನಡೆಯುತ್ತದೆ. ಮಡಿಯಿಂದ ದೇವಿಯ ಪಾರಾಯಣ ನಡೆಸುತ್ತ ಉಪವಾಸ ಆಚರಿಸುವ ಹೆಂಗಳೆಯರು ತಮ್ಮ ಮನೆಯಲ್ಲಿ ಘಟ ಸ್ಥಾಪಿಸಿ ದೇವಿಯ ಮುಂದೆ ಇರುವೆ ಮನೆಗಳ ಮಣ್ಣು ತಂದು ಅದರಲ್ಲಿ ಮಣ್ಣಿನ ಮಡಕೆ ಇಟ್ಟು ನೀರು ಹಾಕಿ ಪೂಜಿಸಿ ವಿವಿಧ ಧಾನ್ಯಗಳನ್ನು ಹಾಕುವ ಪದ್ಧತಿ ಜಾರಿಯಲ್ಲಿದೆ. ಮಣ್ಣಿನ ಹಣತೆಯಲ್ಲಿ ನಂದಾದೀಪ ಉರಿಸುವ ಭಕ್ತರು ಆರದಂತೆ ಕಾಪಾಡುತ್ತಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಹಬ್ಬದ ಸಂಭ್ರಮ ಅಷ್ಟಾಗಿಲ್ಲ ಎಂದು ಕಬ್ಬು ಮತ್ತು ಬಾಳೆ ದಿಂಡು ಮಾರಾಟ ಮಾಡುತ್ತಿದ್ದ ಸಿದ್ದು ಸ್ವಾಮಿ ತಿಳಿಸಿದರು. ₹10ಕ್ಕೆ ಒಂದರಂತೆ 5 ದಂಟು ಕಬ್ಬು, 5 ಬಾಳೆ ದಿಂಡು ₹100ಕ್ಕೆ ಮಾರಾಟ ಮಾಡುತ್ತಿದ್ದೇವೆ ಎಂದರು. ಹೂವಿನ ದರ ಕೆಜಿಗೆ ₹180. ಕೆಲವರು ಅರ್ಧ ಕೆ.ಜಿ, ಇನ್ನೂ ಕೆಲವರು ಕಾಲು ಕೆ.ಜಿ ಹೂವು ತೆಗೆದುಕೊಂಡು ಹೋಗಿ ಹಬ್ಬ ಆಚರಿಸುತ್ತಿದ್ದಾರೆ.  ಈ ಹಿಂದೆ ಒಬ್ಬೊಬ್ಬರು ಎರಡೆರಡು ಕೆ.ಜಿ ಹೂ ಕೊಳ್ಳುತ್ತಿದ್ದರು ಎಂದರು ಹೂವಿನ ವ್ಯಾಪಾರಿ ಸಮಗಮೇಶ ಹೂಗಾರ.

ಮಣ್ಣಿನ ಕುಳ್ಳಿ ಮತ್ತು ಹಣತೆ ಸೇರಿ ₹ 50ಕ್ಕೆ ಒಂದರಂತೆ ಮಾರಾಟ ಮಾಡುತ್ತಿದ್ದೇವೆ. ಜನ ಚೌಕಾಸಿ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಣೆಮ್ಮ ಕುಂಬಾರ ತಿಳಿಸಿದರು. ಕಣ್ಣಿನ ಖರೀದಿ ನೀರಸವಾಗಿತ್ತು ಎಂದು ವ್ಯಾಪಾರಿ ಬಾಬಾ ತಿಳಿಸಿದರು. ಕೆಲವರು 9 ದಿನ ಘಟ ಸ್ಥಾಪಿಸಿ ನಂದಾದೀಪ ಉರಿದರೆ, ಕೆಲವರು 5 ದಿನಗಳ ಕಾಲ ಘಟ ಸ್ಥಾಪಿಸಿ ನಂದಾದೀಪ ಉರಿಸುವುದು ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.