ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆರಂಭಕ್ಕೆ ತಡೆ: ಸದಸ್ಯರ ಆಕ್ರೋಶ

ನೀತಿ ಸಂಹಿತೆ: ತಾ.ಪಂ ಸಾಮಾನ್ಯ ಸಭೆ ಅರ್ಧಕ್ಕೆ ಮೊಟಕು
Last Updated 1 ಡಿಸೆಂಬರ್ 2020, 3:04 IST
ಅಕ್ಷರ ಗಾತ್ರ

ಚಿಂಚೋಳಿ: ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಇಲ್ಲಿನ ಚಂದಾಪುರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆ ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ಸೋಮವಾರ ಇಲ್ಲಿ ನಡೆಯಿತು.

ಆರಂಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರೂ ಆಗಿರುವ ಪ್ರಭಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲಕುಮಾರ ರಾಠೋಡ್ ಅವರು ಮೊದಲಿಗೆ ಕೃಷಿ ಇಲಾಖೆಯ ಪ್ರಗತಿ ವಿವರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.

ತಾಲ್ಲೂಕಿನಲ್ಲಿ 907 ಮಿ.ಮೀ ಸರಾಸರಿ ಮಳೆಯಾಗಬೇಕಿತ್ತು. ಆದರೆ ಪ್ರಸಕ್ತ ವರ್ಷ 1084 ಮಿ.ಮೀ ಮಳೆ ಸುರಿದಿದೆ. ಇದರಿಂದ ನಷ್ಟ ಅನುಭವಿಸಿದ 30 ಸಾವಿರ ರೈತರ ವಿವರ ಪರಿಹಾರ ಸಾಫ್ಟ್‌ವೇರ್‌ನಲ್ಲಿ ದಾಖಲಿಸಲಾಗಿದೆ. ಈಗಾಗಲೇ 2 ಸಾವಿರ ರೈತ ಖಾತೆಗೆ ಬೆಳೆ ಹಾನಿಯ ಪರಿಹಾರ ಧನ ಜಮಾ ಆಗಿದೆ ಎಂದರು.
ಒಟ್ಟು 54 ಸಾವಿರ ಹೆಕ್ಟೇರ್ ಬೆಳೆಹಾನಿಯಾಗಿದ್ದು, ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಿದ್ದಾರೆ ಎಂದರು.

ಆರ್‌ಐಡಿಎಫ್ ನಬಾರ್ಡ-25ರಲ್ಲಿ ತಾಲ್ಲೂಕಿಗೆ 143 ಶಾಲಾ ಕೊಠಡಿಗಳು ಮಂಜೂರಾಗಿವೆ. ಈಗಾಗಲೇ ಕಾಮಗಾರಿ ಪ್ರಾರಂಭವಾಗಿ ಕೆಲವು ಕಡೆ ಮುಕ್ತಾಯದ ಹಂತದಲ್ಲಿವೆ ಎಂದು ಬಿಇಒ ದತ್ತಪ್ಪ ತಳವಾರ ತಿಳಿಸಿದರು.

ಆನಲೈನ್ ಪಾಠಗಳು ಮಕ್ಕಳಿಗೆ ಅರ್ಥವಾಗುತ್ತಿಲ್ಲ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸದಸ್ಯ ವೀಣಾ ವಿಜಯಕುಮಾರ ಮಾನಕಾರ ದೂರಿದರೆ, ಖಾಸಗಿ ಶಾಲೆಗಳು ಪೋಷಕರಿಂದ ಹಣ ವಸೂಲಿ ಮಾಡುತ್ತಿವೆ ಎಂದು ಸದಸ್ಯ ಪ್ರೇಮಸಿಂಗ್ ಜಾಧವ ಮತ್ತು ಮಹಮದ್ ಹುಸೇನ್ ನಾಯಕೋಡಿ ದೂರಿದರು.

ಮದುವೆ, ಮುಂಜಿ, ಚುನಾವಣೆ, ಸಭೆ, ಸಮಾರಂಭ ಹಾಗೂ ಹೋಟೆಲ, ಅಂಗಡಿ, ವಾರದ ಸಂತೆಗಳಿಗೆ ಇಲ್ಲದ ನಿರ್ಬಂಧ ಶಾಲೆಗಳಿಗೆ ಏಕೆ ಎಂದು ಪ್ರಶ್ನಿಸಿದ ಅವರು ಶಾಲೆ ಪ್ರಾರಂಭಿಸಬೇಕೆಂಬುದು ಪಾಲಕರ ಒತ್ತಾಸೆಯಾಗಿದೆ ಎಂದು ಪ್ರತಿಪಾದಿಸಿದರು. ಇದಕ್ಕೆ ಹಣಮಂತ ರಾಜಗಿರಾ, ವೆಂಕಟರೆಡ್ಡಿ ಜಟ್ಟೂರು ಧ್ವನಿ ಗೂಡಿಸಿದರು.

ದೂರದರ್ಶನ ಚಂದನ ವಾಹಿನಿಯ ಪ್ರಶಸ್ತಿ ಪುರಸ್ಕೃತ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ ಪಾಟೀಲ, ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ವನ್ಯಜೀವಿ ಧಾಮದ ಅರಣ್ಯ ರಕ್ಷಕ ಸಿದ್ಧಾರೂಢ ಹೊಕ್ಕುಂಡಿ ಅವರಿಗೆ ತಾಲ್ಲೂಕು ಪಂಚಾಯಿತಿ ವತಿಯಿಂದ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ ಸನ್ಮಾನಿಸಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಚಿರಂಜೀವಿ ಪಾಪಯ್ಯ, ಸದಸ್ಯರಾದ ಜಗನ್ನಾಥ ಈದಲಾಯಿ, ರಾಜೇಂದ್ರ ಗೋಸುಲ್, ನೀಲಾವತಿ ಸೋಮಶೇಖರ ಸೂರವಾರ, ಕಾವೇರಿ ರವೀಂದ್ರ ವರ್ಮಾ, ಅಂಜನಾದೇವಿ ಜಗನ್ನಾಥ ಮಾಳಗೆ, ಬಲಭೀಮ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT