ಚಿತ್ತಾಪುರ: ಬೇಸಿಗೆಯ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಲೇ ಇದೆ. ಬಿಸಿಲಿನ ಸೆಕೆ, ಬಿಸಿಗಾಳಿಯ ಧಗೆಯ ತಾಪಕ್ಕೆ ಜನರು ಬೇಸತ್ತು ಮಧ್ಯಾಹ್ನದ ಸಮಯದಲ್ಲಿ ನದಿ, ನಾಲೆ, ಕೆರೆ, ಬಾವಿಯ ಮೊರೆ ಹೋಗುತ್ತಿದ್ದಾರೆ.

ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ತಾಣವಾದ ನಾಗಾವಿಯಲ್ಲಿನ ನಂದಿಬಾವಿಯು (ರಾಮತೀರ್ಥ) ಪಟ್ಟಣದ ಜನರಿಗೆ ಬೇಸಿಗೆಯ ತಾಪ ತಣಿಸಿಕೊಳ್ಳುವ ಪ್ರಮುಖ ತಾಣವಾಗಿದೆ. ಬೆಳಿಗ್ಗೆ ಹತ್ತು ಗಂಟೆಯಾಗುತ್ತಿದ್ದಂತೆ ನಂದಿಬಾವಿಯ ಪರಿಸರವು ಜನರಿಂದ ತುಂಬಿ ಕಂಗೊಳಿಸುತ್ತದೆ. ಬಿಸಿಲಿನ ಸೆಕೆ ಶುರುವಾಗುತ್ತಿದ್ದಂತೆ ಜನರು ನಂದಿಬಾವಿಯತ್ತ ಧಾವಿಸುತ್ತಾರೆ.

ಆಳೆತ್ತರದಷ್ಟೇ ನೀರಿರುವ ಬಾವಿಯಲ್ಲಿ ಜನರು ಗಂಟೆಗಟ್ಟಲೆ ಈಜಾಡಿ ತೀವ್ರವಾದ ಬಿಸಿಲಿನ ಸೆಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ಧಾರೆ. ದಿನಾಲೂ ಜನರು ತಮ್ಮ ಮಕ್ಕಳಿಗೆ ಟೈರಿನ ಟೂಬ್ ಅಳವಡಿಸಿ ಬಾವಿಯಲ್ಲಿ ಈಜು ಕಲಿಸುವುದು ಸಾಮಾನ್ಯವಾಗಿದೆ.

ಸಾವಿರ ವರ್ಷಗಳ ಹಳೆ ಬಾವಿ: ನಾಗಾವಿಯಲ್ಲಿರುವ ನಂದಿಬಾವಿಯು ಸಾವಿರ ವರ್ಷಗಳಷ್ಟು ಹಳೆಯದಾಗಿದೆ. ಕಲ್ಯಾಣ ಚಾಲುಕ್ಯರ ಒಂದನೇ ಸೋಮೇಶ್ವರ ಆಡಳಿತಾವಧಿಯಲ್ಲಿ ನಾಗಾವಿ ಅಗ್ರಹಾರದ ದಂಡನಾಯಕ ಮಧುವಪ್ಪರಸನು ಘಟಿಕಾಸ್ಥಾನ ನಿರ್ಮಾಣ ಮಾಡಿ ರಾಮತೀರ್ಥ ಎಂಬ ಬಾವಿ ನಿರ್ಮಿಸಿದ್ದಾರೆ. ಇದು ನಾಗಾವಿಯಲ್ಲಿ ಪತ್ತೆಯಾಗಿರುವ ಕ್ರಿ.ಶ 1058ರ ಶಿಲಾಶಾಸನದಲ್ಲಿ ಉಲ್ಲೇಖವಿದೆ.

ಅಂದು ರಾಮತೀರ್ಥ ಎಂದು ಕರೆಯುತ್ತಿದ್ದ ಬಾವಿಗೆ ಇಂದು ನಂದಿಬಾವಿ ಎಂದು ಕರೆಯಲಾಗುತ್ತಿದೆ. ಇದೇ ಬಾವಿಯ ನೀರು ನಾಗಾವಿ ಅಗ್ರಹಾರಕ್ಕೆ, ದೇವರ ಪೂಜಾಕೈಂಕರ್ಯಗಳಿಗೆ, ಘಟಿಕಾಸ್ಥಾನಕ್ಕೆ ಕುಡಿಯುವ ನೀರಿನ ಮೂಲವಾಗಿತ್ತು.

ನಂದಿಬಾವಿಯ ಸಮೀಪದಲ್ಲಿನ ಸಿದ್ದೇಶ್ವರ ಮಠದಲ್ಲಿ ಯೋಗ, ಧ್ಯಾನ, ಜಪತಪ ನಡೆಯುತ್ತಿತ್ತು ಎಂದು ನಾಗಾವಿ ಶಿಲಾ ಶಾಸನಗಳು ಅರುಹುತ್ತಿವೆ. ಅಂದು ಸಾಧುಸಂತರಿಗೆ, ಯೋಗಿಗಳಿಗೆ ಅನುಕೂಲವಾಗುವಂತೆ ಬಾವಿಯ ನೀರು ಮಠದ ಪಕ್ಕದಿಂದ ಹರಿದು ಹೋಗುವಂತೆ ಚಿಕ್ಕ ಕಾಲುವೆ ನಿರ್ಮಾಣ ಮಾಡಿದ್ದು ವಿಶೇಷವಾಗಿದೆ. ಕಾಲುವೆಯಲ್ಲಿ ಸದಾ ನೀರು ಹರಿಯುತ್ತಿರುತ್ತದೆ.

ಎಂದೂ ಬತ್ತದ ಬಾವಿ: ಸಾವಿರ ವರ್ಷಗಳಷ್ಟು ಹಳೆಯದಾದ ನಂದಿಬಾವಿಯಲ್ಲಿ ಇಂದಿಗೂ ತಣ್ಣನೆಯ ನೀರು ಹೊರಸೂಸುತ್ತಿದೆ. ಬೇಸಿಗೆ ಸಮಯದಲ್ಲಿ ಎಷ್ಟೇ ಬಿಸಿಲು ಹೆಚ್ಚಾದರೂ, ಪ್ರಕೃತಿ ವಿಕೋಪದಂತಹ ಅನಾವೃಷ್ಟಿ ಕಾಡಿದರೂ ಬಾವಿಯ ನೀರು ಎಂದೂ ಬತ್ತಿಲ್ಲ. ಬೇಸಿಗೆಯಲ್ಲಿ ಸೂರ್ಯನ ಪ್ರಕೋಪ ಎಷ್ಟೇ ಹೆಚ್ಚಾದರೂ ಬಾವಿಯಲ್ಲಿ ಒಂದು ಇಂಚು ನೀರು ಕಡಿಮೆಯಾಗದಿರುವುದು ನಾಗಾವಿಯಲ್ಲಿನ ಜಲಸಂಪನ್ಮೂಲದ ಸಮೃದ್ಧಿಯ ವಿಶೇಷವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-31-1918418976

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.