ಬುಧವಾರ, ಮೇ 27, 2020
27 °C
ನೀರು ಪೂರೈಕೆ ಸ್ಥಳದಲ್ಲಿ ಬೆಳೆದ ಪಾಚಿ, ಸಮರ್ಪಕ ನೀರಿಲ್ಲದೆ ಶೌಚಾಲಯ ನಿರುಪಯುಕ್ತ

ಚಿತ್ತಾಪುರ ಆಸ್ಪತ್ರೆ; ಹೊರೆಗೆ ಥಳಕು ಒಳಗೆ ಹುಳುಕು...!

ಮಲ್ಲಿಕಾರ್ಜುನ ಎಚ್. ಮುಡಬೂಳಕರ್ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಪಟ್ಟಣದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯು ಹಲವು ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ರೋಗಿಗಳಿಗೆ ಸಮರ್ಪಕ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಸುಸಜ್ಜಿತ ದೊಡ್ಡ ಕಟ್ಟಡವಿದೆ. ಹೊರಗಿನಿಂದ ನೋಡಲು ಥಳುಕು ಒಳಗೆ ಮಾತ್ರ ಹುಳುಕು ಎನ್ನುವ ಪರಿಸ್ಥಿತಿಯಿದೆ.

100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ 70 ಹಾಸಿಗೆಗಳು ಮಾತ್ರ ಬಳಕೆಯಾಗುತ್ತಿವೆ. ಆಸ್ಪತ್ರೆಯಲ್ಲಿರುವ 94 ಪೈಕಿ 73 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 21 ಹುದ್ದೆಗಳು ಖಾಲಿಯಿವೆ. 5 ಜನ ತಜ್ಞ ವೈದ್ಯರ ಹುದ್ದೆಗಳು ಖಾಲಿಯಿವೆ. ನೇತ್ರ ತಜ್ಞ ವೈದ್ಯ, ದಂತ ತಜ್ಞ ವೈದ್ಯ ಹಾಗೂ ಇಬ್ಬರು ಕಿರಿಯ ಫಾರ್ಮಾಸಿಸ್ಟ್ ಹುದ್ದೆಗಳು ಖಾಲಿಯಿವೆ.

ಸ್ತ್ರೀರೋಗ ತಜ್ಞ ವೈದ್ಯರು ಇಬ್ಬರಿದ್ದು, ಒಬ್ಬರು ಒಂದು ವರ್ಷದಿಂದ ಕರ್ತವ್ಯಕ್ಕೆ ಬರುತ್ತಿಲ್ಲ. 39 ಗ್ರೂಪ್ ಡಿ ಹುದ್ದೆಗಳ ಪೈಕಿ 32 ಹುದ್ದೆ ಭರ್ತಿಯಿವೆ. 7 ಹುದ್ದೆಗಳು ಖಾಲಿಯಿವೆ. ಗ್ರೂಪ್ ಡಿ ಸಿಬ್ಬಂದಿಗಳನ್ನು ಅವರ ಕೆಲಸ ಹೊರತುಪಡಿಸಿ ಆಸ್ಪತ್ರೆಯ ಕಚೇರಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಬಹಳಷ್ಟು ಜನರು ತಮ್ಮ ಕರ್ತವ್ಯ ನಿರ್ವಹಿಸುವುದಿಲ್ಲ. ಡಿ ಗ್ರೂಪ್ ನೌಕರರೆ ತಮ್ಮ ಸಹಾಯಕ್ಕೆಂದು ಸ್ವಚ್ಛತಾ ಕೆಲಸಕ್ಕೆ ಐದಾರು ಜನ ಖಾಸಗಿಯವರಿಗೆ ಸ್ವಚ್ಛತಾ ಕೆಲಸಕ್ಕಾಗಿ ನೇಮಿಸಿಕೊಂಡಿದ್ದಾರೆ ಎನ್ನುವ ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ.

ಆಸ್ಪತ್ರೆಯಲ್ಲಿ ಫಿಜಿಶಿಯನ್, ಆರ್ಥೊಪೆಡಿಶಿಯನ್ ಹಾಗೂ ಅರವಳಿಕೆ ತಜ್ಞರು ಸೇರಿ 20 ಜನರು ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಲಾ ಒಬ್ಬರೆ ತಜ್ಞ ವೈದ್ಯ ಇರುವುದರಿಂದ ಹಗಲು ರಾತ್ರಿ ಪಾಳಿಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಗಂಭೀರ ಸ್ವರೂಪದ ಪ್ರಕರಣ ಬಂದರೆ ನೇರವಾಗಿ ಜಿಲ್ಲಾಸ್ಪತ್ರೆಗೆ ಕಳಿಸುವ ಕೆಲಸ ಮುಲಾಜಿಲ್ಲದೆ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ವರ್ಷದ ಹಿಂದೆ ಉದ್ಘಾಟನೆಯಾದ ತೀವ್ರ ನಿಗಾ ಘಟಕ (ಐಸಿಯು) ಇನ್ನೂ ರೋಗಿಗಳ ಸೇವೆಗೆ ಲಭ್ಯವಾಗಿಲ್ಲ. ಸದಾ ಬಾಗಿಲು ಹಾಕಿರಲಾಗುತ್ತದೆ. ಅದರ ನಿರ್ವಹಣೆಗೆ ತಜ್ಞ ವೈದ್ಯರ, ಸಿಬ್ಬಂದಿ ಕೊರತೆ ಇದೆ. ಮಹಿಳಾ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ವಾರ್ಡ್ ನಲ್ಲಿ ಆಸ್ಪತ್ರೆಯ ಔಷಧ ಮತ್ತು ಇತರೆ ಸಾಮಾಗ್ರಿಗಳನ್ನು ದಾಸ್ತಾನು ಮಾಡಲಾಗಿದೆ. ಇದು ಮಹಿಳಾ ರೋಗಿಗಳಿಗೆ ಮಾಡುತ್ತಿರುವ ಅನ್ಯಾಯ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ.

ಆಸ್ಪತ್ರೆಗೆ ನೀರಿನ ಸಮಸ್ಯೆಯಿದೆ. ಪುರಸಭೆಯಿಂದ ಸರಿಯಾಗಿ ನೀರು ಪೂರೈಸುತ್ತಿಲ್ಲ. ಶೌಚಾಲಯ ಕೋಣೆಗಳು ನಿರುಪಯುಕ್ತವಾಗಿವೆ. ಹಳೆ, ಹೊಸ ಕಟ್ಟಡದಲ್ಲಿನ ಮಹಿಳಾ, ಪುರುಷರ ಶೌಚಾಲಯ ಕೊಣೆಗಳಿಗೆ ಬೀಗ ಹಾಕಲಾಗಿದೆ.

ಆಸ್ಪತ್ರೆಯ ಸಾಮಾನುಗಳನ್ನು ಶೌಚಾಯಲಯಕ್ಕೆ ಹೋಗುವ ಮಾರ್ಗದಲ್ಲಿ ದಾಸ್ತಾನು ಮಾಡಲಾಗಿದೆ. ಇದರಿಂದ ರೋಗಿಗಳು ಮತ್ತು ಅವರ ಜೊತೆಗಿನವರು ಜನರು ಶೌಚಾಲಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ.  ಶೌಚಾಲಯ ಕೋಣೆಗಳು ಬಳಕೆಯಲ್ಲಿಲ್ಲ ಎಂದು ಅವುಗಳ ದುಸ್ಥಿತಿಯೆ ಹೇಳುತ್ತವೆ.

ಮೊದಲ ಮಹಡಿಯ ಕಟ್ಟಡದ ಮೇಲಿರುವ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಸಿಬ್ಬಂದಿ ಬಳಸುವ ಶೌಚಾಲಯಕ್ಕೂ ನೀರಿನ ಸೌಲಭ್ಯವಿಲ್ಲ. ನೀರಿಲ್ಲದೆ ಶೌಚಾಲಯ ಕೋಣೆಗಳು ಭಣಗುಡುತ್ತಿವೆ. ಮೇಲ್ಚಾವಣಿ ಮೇಲಿಟ್ಟಿರುವ ನೀರಿನ ಸಿಂಟೆಕ್ಸ್ ಟ್ಯಾಂಕ್ ಗಳು ಬಹುತೇಕ ಖಾಲಿಯಿವೆ. ಸ್ವಚ್ಛತೆ ಮಾಡದ ಕಾರಣ ಹಸಿರು ಪಾಚಿ ಬೆಳೆದು ನೀರು ಕಲುಷಿತವಾಗುತ್ತಿದೆ. ಅದೇ ನೀರು ಆಸ್ಪತ್ರೆಯ ರೋಗಿಗಳಿಗೆ ಪೂರೈಕೆ ಮಾಡಲಾಗುತ್ತಿದೆ.

ಆಸ್ಪತ್ರೆಯಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕೆಲ ಸಿಬ್ಬಂದಿ ಹಗಲಿನಲ್ಲೆ ಮದ್ಯ ಸೇವಿಸಿ ಆಸ್ಪತ್ರೆಯಲ್ಲೆ ಹಾಯಾಗಿ ಮಲಗುತ್ತಾರೆ. ಆಸ್ಪತ್ರೆಯ ಬಟ್ಟೆ ತೊಳೆಯಲು ತಂದಿರುವ ದೊಡ್ಡ ವಾಸಿಂಗ್ ಮಶಿನ್ ಉಪಯೋಗಿಸದೆ ಹಾಗೆಯೆ ಬಿಸಿಲಿನಲ್ಲಿ ಇಡಲಾಗಿದೆ.

ಶವ ಪರೀಕ್ಷೆ ನಡೆಸುವ ಕೋಣೆಯು ಅವ್ಯವಸ್ಥೆಯಿಂದ ಕೂಡಿದೆ. ಆಸ್ಪತ್ರೆಯ ಹಿಂದಿನ ಖುಲ್ಲಾ ಜಾಗದ ಪರಿಸರ ಹದಗೆಟ್ಟಿದೆ ಸ್ವಚ್ಛ ಮಾಡಲು ಸಂಪೂರ್ಣ ಕಡೆಗಣಿಸಲಾಗಿದೆ. ರಾತ್ರಿ ವಿದ್ಯುತ್ ಕೈಕೊಟ್ಟರೆ ಆಸ್ಪತ್ರೆ ಕತ್ತಲಲ್ಲಿ ಮುಳುಗುತ್ತದೆ ಎಂದು ಜನರು ಹೇಳುತ್ತಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು