ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ:13 ವರ್ಷಗಳ ಹಿಂದೆ ನಿರ್ಮಿಸಿದ ರಸ್ತೆ, ಕೆಸರು ಗದ್ದೆಯಾದ ರಿಂಗ್‌ ರಸ್ತೆ

ಭಾರಿ ವಾಹನಗಳ ಸಂಚಾರದಿಂದ ಹಾಳು
Last Updated 23 ಸೆಪ್ಟೆಂಬರ್ 2020, 2:39 IST
ಅಕ್ಷರ ಗಾತ್ರ

ಚಿತ್ತಾಪುರ: ಪಟ್ಟಣದೊಳಗೆ ವಾಹನ ದಟ್ಟಣೆ ಆಗದಿರಲಿ ಎಂದು ದಶಕದ ಹಿಂದೆ ಎಪಿಎಂಸಿ ಕಚೇರಿ ಪಕ್ಕದಲ್ಲಿ ನಿರ್ಮಾಣ ಮಾಡಿರುವ ದ್ವಿಪಥ ಬೈಪಾಸ್ ರಿಂಗ್ ರಸ್ತೆಯು ಹದಗೆಟ್ಟು, ಸಂಪೂರ್ಣ ಹಾಳಾಗಿ ಕೆಸರು ಗದ್ದೆಯಂತಾಗಿದೆ.

ಇಟಗಾ, ಮೊಗಲಾ, ದಿಗ್ಗಾಂವ್ ಗ್ರಾಮಗಳು ಹಾಗೂ ಎರಡು ತಾಂಡಾಗಳಿಗೆ, ಓರಿಯೆಂಟ್ ಸಿಮೆಂಟ್ ಕಂಪನಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. 13 ವರ್ಷಗಳ ಹಿಂದೆ ನಿರ್ಮಿಸಿದ ಡಾಂಬರ್ ರಸ್ತೆ ಇಂದು ಕಚ್ಚಾ ರಸ್ತೆಯಾಗಿ ಪರಿವರ್ತನೆಯಾಗಿದೆ.

ಇದೇ ಮಾರ್ಗದಲ್ಲಿ ₹12 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದು ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಪಟ್ಟಣದಿಂದ ಓರಿಯೆಂಟ್ ಸಿಮೆಂಟ್ ಕಂಪನಿಗೆ ಇದೇ ರಸ್ತೆಯ ಮೂಲಕ ನಿತ್ಯ ನೂರಾರು ಸಂಖ್ಯೆಯಲ್ಲಿ ಬೃಹತ್ ಗಾತ್ರದ, ಅಧಿಕ ಭಾರದ ಲಾರಿ, ಟ್ಯಾಂಕರ್‌ಗಳು ಸಂಚರಿಸುತ್ತಿವೆ. ಹೆಚ್ಚಿನ ಭಾರ ಹೊತ್ತು ಸಾಗುವ ಲಾರಿ, ಟ್ಯಾಂಕರ್ ಸಂಚಾರದಿಂದ ರಸ್ತೆ ಹಾಳಾಗುತ್ತಿದೆ. ಇಷ್ಟಾದರೂ ತಾಲ್ಲೂಕು ಆಡಳಿತ ಓರಿಯೆಂಟ್ ಕಂಪನಿ ಕುರಿತು ಮೃದು ಧೋರಣೆ ತಾಳುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದ ಆಶ್ರಯ ಬಡಾವಣೆ, ಕೊಳಚೆ ಮಂಡಳಿ ಮನೆಗಳ ಬಡಾವಣೆ, ಚಿನ್ನಮಳ್ಳಿ ಲೇಔಟ್ ಜನರು ಹಾಗೂ ಇಟಗಾ, ಮೊಗಲಾ ಗ್ರಾಮಗಳ ಮತ್ತು ತಾಂಡಾ ಜನರು ಇದೇ ರಸ್ತೆಯ ಮೂಲಕ ಪಟ್ಟಣದೊಳಗೆ ಬಂದು ಹೋಗಬೇಕು. ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಸಂಚರಿಸಲು ಜನರಿಗೆ ಕಷ್ಟ, ತೊಂದರೆಯಾದರೂ ಆಡಳಿತ ಮಾತ್ರ ತೆಪ್ಪಗೆ ಕುಳಿತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಮಳೆ ನೀರು ನಿಂತು ರಸ್ತೆ ಕೆಸರು ಗದ್ದೆಯಾದಾಗೊಮ್ಮೆ ಟಿಪ್ಪರ್ ಮೂಲಕ ಮುರುಮ್ ತಂದು ಸುರಿಯುತ್ತಾರೆ. ಮತ್ತೆ ಅದು ನಿಂತ ನೀರಿನಲ್ಲಿ ಕೆಸರಾಗಿ ಬಿಡುತ್ತದೆ. ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಗಿಯುವವರೆಗೆ ಆಡಳಿತವಾಗಲಿ, ಓರಿಯೆಂಟ್ ಕಂಪನಿ ಯಾಗಲಿ ರಸ್ತೆ ದುರಸ್ತಿ ಮಾಡಿಸ ಬೇಕು ಎಂದು ಜನರು ಮನವಿ ಮಾಡಿದ್ದಾರೆ.

ರಸ್ತೆಯ ಎರಡೂ ಬದಿಯಲ್ಲಿ ನಿರ್ಮಿಸಿರುವ ಚರಂಡಿಯು ಕಲ್ಲು ಮಣ್ಣಿನಿಂದ ತುಂಬಿದೆ. ಮಳೆ ನೀರು ಚರಂಡಿಯೊಳಗೆ ಹರಿದು ಹೋಗಲಾಗದೆ ರಸ್ತೆಯ ಮೇಲೆ ಬರುತ್ತಿವೆ. ಹೀಗಾಗಿ ರಸ್ತೆ ಹಾಳಾಗುತ್ತಿದೆ. ಚರಂಡಿ ಸ್ವಚ್ಛತೆಗೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಪಟ್ಟಣದ ಜನರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT