ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಂಡಗುಂಡ ದೇಗುಲ ನಿರ್ಮಾಣಕ್ಕೆ ₹3 ಕೋಟಿ ಖರ್ಚು: ಬಿ.ಜಿ.ಪಾಟೀಲ

ವರ್ಷದೊಳಗೆ ನೂತನ ದೇವಸ್ಥಾನ ಲೋಕಾರ್ಪಣೆ: ಟ್ರಸ್ಟ್ ಸದಸ್ಯ ಭೀಮಣ್ಣ ಸಾಲಿ
Published : 30 ಆಗಸ್ಟ್ 2024, 5:01 IST
Last Updated : 30 ಆಗಸ್ಟ್ 2024, 5:01 IST
ಫಾಲೋ ಮಾಡಿ
Comments

ಚಿತ್ತಾಪುರ: ‘ಧಾರ್ಮಿಕ ಕ್ಷೇತ್ರ ದಂಡಗುಂಡ ಬಸವಣ್ಣ ದೇವಸ್ಥಾನದ ಹಳೆಯ ಕಟ್ಟಡ ತೆರವುಗೊಳಿಸಿ ಹೊಸ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಈವರೆಗೂ ₹3 ಕೋಟಿ ಖರ್ಚಾಗಿದೆ. ಭಕ್ತರ ದೇಣಿಗೆ, ದಂಡಗುಂಡ ಗ್ರಾಮಸ್ಥರ ಸಹಕಾರ, ಬಸವಣ್ಣನ ಭಕ್ತರ ನೆರವಿನಿಂದ ಯಾವುದೇ ಅಡೆತಡೆಯಿಲ್ಲದೆ ಕಾಮಗಾರಿ ನಡೆಯುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಹೇಳಿದರು.

ತಾಲ್ಲೂಕಿನ ದಂಡಗುಂಡ ಗ್ರಾಮದ ಬಸವಣ್ಣ ದೇವಸ್ಥಾನದ ಯಾತ್ರಿ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದ ಜಾತ್ರೆಯ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಜಾತ್ರೆ, ಪಲ್ಲಕ್ಕಿ ಉತ್ಸವ ಅತ್ಯಂತ ಯಶಸ್ವಿಯಾಗಿದೆ. ಸಹಕಾರ ನೀಡಿದ ಎಲ್ಲರಿಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಅವಂಟಿ ಮಾತನಾಡಿ, ‘ಜಾತ್ರೆಗೆ ಅಂದಾಜು ಎರಡೂವರೆ ಲಕ್ಷ ಭಕ್ತರು ಆಗಮಿಸಿದ್ದರು. ಮುಂಬರುವ ದಿನಗಳಲ್ಲಿ ಟ್ರಸ್ಟ್ ಕ್ರಾಂತಿಕಾರಕ ಹೆಜ್ಜೆ ಇಡಲಿದೆ. ದೇವಸ್ಥಾನ ಅಭಿವೃದ್ಧಿಯ ದೃಷ್ಟಿಯಿಂದ ಸಂಗಮೇಶ್ವರ ಸಂಸ್ಥಾನ ಮಠದ ಸ್ವಲ್ಪ ಗೋಡೆ ಕೆಡವಲಾಗಿದೆ ಅದರಲ್ಲಿ ಯಾವುದೇ ದುರುದ್ದೇಶವಿಲ್ಲ. ದೇವಸ್ಥಾನ ನಿರ್ಮಾಣಕ್ಕೆ ಟ್ರಸ್ಟ್ ವತಿಯಿಂದ ಯಾವುದೇ ಚಂದಾ ಹಣ ಸಂಗ್ರಹಿಸಿಲ್ಲ. ಭಕ್ತರ ದೇಣಿಗೆಯಿಂದ ಮಾತ್ರ ಕಾಮಗಾರಿ ನಡೆಯುತ್ತಿದೆ. ದೇವಸ್ಥಾನದ ಪರಿಸರವು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ಟ್ರಸ್ಟ್ ಸದಸ್ಯ ಭೀಮಣ್ಣ ಸಾಲಿ ಅವರು ಮಾತನಾಡಿ, ‘ಗ್ರಾಮಸ್ಥರು ದೇವಸ್ಥಾನದ ನಿರ್ಮಾಣ ಕೆಲಸಕ್ಕೆ ₹15 ಲಕ್ಷ ದೇಣಿಗೆ ನೀಡಿದ್ದಾರೆ. ಗ್ರಾಮಸ್ಥರ ನಿರ್ಣಯದಂತೆ ಸಂಗಮೇಶ್ವರ ಸಂಸ್ಥಾನದ ಮೂಲ ಗದ್ದುಗೆ ಇರುವ ಸ್ಥಳದಲ್ಲಿಯೇ ಮರುಸ್ಥಾಪನೆ ಮಾಡಲಾಗುತ್ತದೆ. ಮುಂಬರುವ ಶ್ರಾವಣದವರೆಗೆ ದೇವಸ್ಥಾನದ ಲೋಕಾರ್ಪಣೆ ಮಾಡುವ ಗುರಿ ಇದೆ’ ಎಂದು ಹೇಳಿದರು.

‘ದಂಡಗುಂಡದ ಸಂಗಮೇಶ್ವರ ಸಂಸ್ಥಾನ ಮಠಕ್ಕೆ ಯಾವುದೇ ಇತಿಹಾಸವಿಲ್ಲ. ದೇವಸ್ಥಾನದ ಪರಿಸರದಲ್ಲಿ ಮಠದ ಪರಂಪರೆ ಬೆಳೆದಿದೆ. ಮಠವು ಬಸವಣ್ಣ ದೇವಸ್ಥಾನದ ಆಸ್ತಿ. ಮಠದ ಸ್ವಾಮಿಜಿ ಸಂಗನಬಸವ ಶಿವಾಚಾರ್ಯರು ಟ್ರಸ್ಟ್ ವಿರುದ್ಧ ಅನಗತ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಭಕ್ತರು ಯಾವುದೇ ಊಹಾಪೋಹದ ಸುದ್ಧಿಗಳಿಗೆ ಕಿವಿಗೊಡದೆ ಲಕ್ಷಾಂತರ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸಿ ಟ್ರಸ್ಟ್ ಕಾರ್ಯಕ್ಕೆ ಬೆಂಬಲಿಸಿದ್ದಾರೆ’ ಎಂದು ಅವರು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸದಸ್ಯರಾದ ರಾಜಶೇಖರ ಪಾಟೀಲ, ಭೀಮರಾಯಗೌಡ ಚಾಮನೂರು, ಬಸವರಾಜಗೌಡ ಭಾಸರೆಡ್ಡಿ, ಮಹಾಂತಗೌಡ ಪಾಟೀಲ್, ಗ್ರಾಮದ ಮುಖಂಡರಾದ ಭೀಮಣ್ಣ ದಂಡಗುಂಡ, ಹಣಮಂತ ದೊಡ್ಡಮನಿ, ಶರಣಪ್ಪ ಭೂತಪೂರ, ಮಲ್ಲು ಹಳಬಾ, ಬಸಪ್ಪ ದೊಡ್ಡಮನಿ, ಬಸಣ್ಣ ಹಳಬಾ, ಗಂಗಪ್ಪ ಆಡಕಾಯಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT