ಗುರುವಾರ , ಡಿಸೆಂಬರ್ 1, 2022
20 °C
ಕೊಚ್ಚಿಯಿಂದ ಬಂದು ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ವಿಮಾನ

ಗಾಂಜಾ ದಂಧೆಕೋರರಿಂದ ಮಾರಕ ಹಲ್ಲೆಗೆ ಒಳಗಾಗಿದ್ದ ಸಿಪಿಐ ಬೆಂಗಳೂರಿಗೆ ಏರ್‌ಲಿಫ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಮಹಾರಾಷ್ಟ್ರ ಗಡಿಯಲ್ಲಿ ಗಾಂಜಾ ಬೆಳೆಯುತ್ತಿದ್ದ ದುಷ್ಕರ್ಮಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಸುಮಾರು 50 ಜನರಿಂದ ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕಮಲಾಪುರ ವೃತ್ತದ ಸಿಪಿಐ ಶ್ರೀಮಂತ ಇಲ್ಲಾಳ ಅವರನ್ನು ಸೋಮವಾರ (ಸೆ 26) ಬೆಳಿಗ್ಗೆ ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆದೊಯ್ಯಲು ತೀರ್ಮಾನಿಸಲಾಗಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈಶಾನ್ಯ ವಲಯದ ಐಜಿಪಿ ಮನೀಷ್ ಖರ್ಬೀಕರ್, ಕಲಬುರಗಿ ಎಸ್ಪಿ ಇಶಾ ಪಂತ್ ಅವರೊಂದಿಗೆ ಮಾತುಕತೆ ನಡೆಸಿ ಅಗತ್ಯ ಬಿದ್ದರೆ ಬೆಂಗಳೂರಿಗೆ ಕರೆತರುವಂತೆ ಸೂಚಿಸಿದ್ದರು. ಅದರಂತೆ ಶನಿವಾರವೇ ಏರ್ ಅಂಬುಲೆನ್ಸ್ ಮೂಲಕ ಕರೆದೊಯ್ಯುವ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಕಲಬುರಗಿ ವಿಮಾನ ನಿಲ್ದಾಣವನ್ನು ಸಂಜೆ 5.30ರವರೆಗೂ ತೆರೆದಿರುವಂತೆ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಸೂಚನೆ ನೀಡಲಾಗಿತ್ತು. ಆದರೆ, ವೈದ್ಯರ ಸಲಹೆ ಮೇರೆಗೆ ಒಂದು ದಿನ ಕಾಯಲು ತೀರ್ಮಾನಿಸಲಾಗಿತ್ತು.

ಭಾನುವಾರ ಮಧ್ಯಾಹ್ನವೇ ಏರ್ ಆಂಬುಲೆನ್ಸ್ ಕಲಬುರಗಿ ನಿಲ್ದಾಣ ತಲುಪಿದ್ದು, ಇದೇ 26ರಂದು ಬೆಳಿಗ್ಗೆ ಜೀರೊ ಟ್ರಾಫಿಕ್ ಮೂಲಕ ನಗರದ ಯುನೈಟೆಡ್ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಶ್ರೀಮಂತ ಇಲ್ಲಾಳ ಅವರನ್ನು ಕರೆದುಕೊಂಡು ಹೋಗಲಾಗುತ್ತದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಸಂಸದ ಡಾ. ಜಾಧವ ಭೇಟಿ: ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ ಇಲ್ಲಾಳ ಅವರ ಆರೋಗ್ಯವನ್ನು ಸಂಸದ ಡಾ. ಉಮೇಶ ಜಾಧವ ವಿಚಾರಿಸಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ, ಮುಖಂಡ ಅಲ್ಲಮಪ್ರಭು ಪಾಟೀಲ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯ: ಸಿಪಿಐ ಶ್ರೀಮಂತ ಇಲ್ಲಾಳ ಅವರು ದಕ್ಷ ಅಧಿಕಾರಿ. ಜೇವರ್ಗಿ ಕ್ಷೇತ್ರದಲ್ಲಿಯೂ ತುಂಬ ಜನಪರ ಕೆಲಸ ಮಾಡಿದವರು. ಗಾಂಜಾ ದಂಧೆಕೋರರು ಮಾಡಿರುವ ದಾಳಿ ಅಕ್ಷಮ್ಯ. ಖದೀಮರ ಬೆನ್ನಟ್ಟಿ ಬಂಧಿಸಿ ಶಿಕ್ಷಿಸಬೇಕು. ಜೊತೆಗೇ ಹೆಚ್ಚಿನ ಚಿಕಿತ್ಸೆ ಒದಗಿಸಿ, ಖರ್ಚನ್ನೆಲ್ಲ ಭರಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

 

ಹಲ್ಲೆ: 50 ಜನರ ವಿರುದ್ಧ ಪ್ರಕರಣ

ಬಸವಕಲ್ಯಾಣ: ತಾಲ್ಲೂಕಿನ ಹೊನ್ನಳ್ಳಿ ಗ್ರಾಮ ಸಮೀಪದ ಮಹಾರಾಷ್ಟ್ರದ ಗಡಿಯಲ್ಲಿ ಶುಕ್ರವಾರ ಕಲಬುರಗಿ ಗ್ರಾಮೀಣ ‌ಸಿಪಿಐ ಶ್ರೀಮಂತ ಇಲ್ಲಾಳ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಠಾಳ ಠಾಣೆಯಲ್ಲಿ 50 ಜನ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಘಟನಾ ಸ್ಥಳದಲ್ಲಿದ್ದ ಮಹಾಗಾಂವ ಠಾಣೆಯ ಪಿಎಸ್‌ಐ ಆಶಾ ರಾಠೋಡ ಅವರು ಆರೋಪಿಗಳ ವಿರುದ್ಧ ದೂರು ಸಲ್ಲಿಸಿದ್ದಾರೆ. ಗಾಂಜಾ ಮಾರಾಟದಲ್ಲಿ ಸಿಕ್ಕಿ ಬಿದ್ದ ಆರೋಪಿ ಸಂತೋಷ ನಾರಾಯಣಪುರೆ ಎಂಬಾತ ನೀಡಿದ ಮಾಹಿತಿ ಮೇರೆಗೆ ಬಸವ ಕಲ್ಯಾಣ ತಾಲ್ಲೂಕಿನ ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನಳ್ಳಿಯಿಂದ ಒಂದು ಕಿ.ಮೀ. ದೂರದಲ್ಲಿರುವ ಹೊಲಕ್ಕೆ ಪೊಲೀಸ್ ಸಿಬ್ಬಂದಿ ಹಾಗೂ ಪಂಚರೊಂದಿಗೆ ತೆರಳಿದಾಗ ಅಲ್ಲಿ ಗಾಂಜಾ ಬೆಳೆದಿದ್ದು ಗೊತ್ತಾಯಿತು. ದಾಳಿ ಮಾಡಬೇಕು ಎಂದು ಸುತ್ತುವರೆಯುತ್ತಿದ್ದಂತೆಯೇ ಹೊಲದಲ್ಲಿನ ಶೆಡ್‌ನಲ್ಲಿದ್ದ ಸುಮಾರು 50 ಜನರು ಕಲ್ಲು, ಬಡಿಗೆ, ಭರ್ಚಿ, ಹಂಟರ್ ಆಯುಧಗಳನ್ನು ತೆಗೆದುಕೊಂಡು, ದೇಸಿ ಆಯುಧದಿಂದ ಎರಡು ಸುತ್ತು ಮದ್ದು ಗುಂಡುಗಳನ್ನು ಹಾರಿಸುತ್ತಾ ನಮ್ಮೆಡೆಗೆ ಬಂದರು. ಸಿಬ್ಬಂದಿ ಕಿಶನ್ ಎಂಬುವವರನ್ನು ನೆಲಕ್ಕೆ ಕೆಡವಿ ಅವರ ಪರ್ಸ್‌ನಲ್ಲಿದ್ದ ₹ 20 ಸಾವಿರ ನಗದು ಹಾಗೂ ಗುರುತಿನ ಚೀಟಿಗಳನ್ನು ತೆಗೆದುಕೊಂಡರು. ಆ ಸಂದರ್ಭದಲ್ಲಿ ಸಿಪಿಐ ಶ್ರೀಮಂತ ಇಲ್ಲಾಳ ಅವರು ನಾವು ಪೊಲೀಸರಿದ್ದೇವೆ. ತಪಾಸಣೆಗೆ ಬಂದಿದ್ದೇವೆ ಎಂದ ಕೂಡಲೇ ಎಂಟು ಹತ್ತು ಜನ ಸುತ್ತುವರೆದು ಅವರ ಮೇಲೆ ದಾಳಿ ನಡೆಸಿದರು. ಅವರ ಬಳಿ ಇದ್ದ ಇಲಾಖೆಯ ಪಿಸ್ತೂಲ್ ಕಸಿದುಕೊಂಡು, ಪರ್ಸ್‌ನಲ್ಲಿದ್ದ ₹ 5 ಸಾವಿರ ನಗದು ಹಾಗೂ ಒನ್ ಪ್ಲಸ್ ಕಂಪನಿಯ ಮೊಬೈಲ್ ಕಿತ್ತುಕೊಂಡರು. ದಾಳಿ ನಡೆಸಿದ ಬಳಿಕ ಇಲ್ಲಾಳ ಅವರು ಮೃತಪಟ್ಟಿದ್ದಾರೆ ಎಂದೇ ಭಾವಿಸಿ ಅಲ್ಲಿಂದ ಓಡಿ ಹೋದರು. ಅಷ್ಟರಲ್ಲಿ ಮಂಠಾಳ ಹಾಗೂ ಉಮರ್ಗಾ ಪೊಲೀಸರು ಬಂದರು. ವಾಹನದಲ್ಲಿ ಕರೆದುಕೊಂಡು ಮೊದಲು ಬಸವ ಕಲ್ಯಾಣಕ್ಕೆ ಆ ನಂತರ ಕಲಬುರಗಿಗೆ ಚಿಕಿತ್ಸೆಗಾಗಿ ಕರೆತರಲಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು