ಕಲಬುರಗಿ: ‘ಮಹಾನಗರ ಪಾಲಿಕೆಯ ಕರ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿಯು ₹50 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಅಧಿಕಾರಿಗಳಿಗೆ ನೀಡಿದೆ’ ಎಂದು ಮೇಯರ್ ಯಲ್ಲಪ್ಪ ನಾಯ್ಕೋಡಿ ಹೇಳಿದರು.
ಇಲ್ಲಿನ ಜಗತ್ ವೃತ್ತದಲ್ಲಿ ಸೋಮವಾರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಆಸ್ತಿ ತೆರಿಗೆ ವಸೂಲಾತಿ ಮತ್ತು ಉದ್ದಿಮೆ ಪರವಾನಗೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಉದ್ದಿಮೆಗಳು, ವ್ಯಾಪಾರಸ್ಥರು, ಪಾಲಿಕೆಯ ಸೇವೆಗಳನ್ನು ಬಳಸಿಕೊಳ್ಳವವರು ತಪ್ಪದೇ ಕರ ಪಾವತಿ ಮಾಡಬೇಕು. ಸಾರ್ವಜನಿಕರಿಂದ ₹40 ಕೋಟಿಯಷ್ಟು ತೆರಿಗೆ ಬಾಕಿ ಇದೆ. ಒಂದಿಷ್ಟು ಕೋಟಿ ರೂಪಾಯಿ ತೆರಿಗೆ ವಸೂಲಿ ಮಾಡಲಾಗಿದೆ’ ಎಂದರು.
‘ಪಾಲಿಕೆಯ ಸೌಕರ್ಯಗಳನ್ನು ಕೇಳುವುದು ಪ್ರತಿಯೊಬ್ಬರ ಹಕ್ಕು. ಪಾಲಿಕೆಯಿಂದ ಪಡೆಯುವ ಸೇವೆಗಳಿಗೆ ಪ್ರತಿಯಾಗಿ ತಾವೂ ಕರ ಕಟ್ಟಬೇಕು. ವ್ಯಾಪಾರ, ನೀರು ಸೇರಿದಂತೆ ಎಲ್ಲ ಬಗೆಯ ಕರಗಳನ್ನು ಪಾವತಿಸಿದರೆ ನಮಗೂ ಅನುಕೂಲವಾಗುತ್ತದೆ’ ಎಂದು ಹೇಳಿದರು.
ಪಾಲಿಕೆ ಆಯಕ್ತ ಭುವನೇಶ ಪಾಟೀಲ ಮಾತನಾಡಿ, ‘₹20 ಕೋಟಿ ಇದ್ದ ತೆರಿಗೆ ಮೊತ್ತ ₹40 ಕೋಟಿಯಷ್ಟು ಆಗಿದೆ. ಇನ್ನೂ ₹35 ಕೋಟಿಯಷ್ಟು ಬಾಕಿ ಇದೆ. ಪಾಲಿಕೆ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಜನರು ಮತ್ತು ಉದ್ಯಮಿದಾರರು ತಮ್ಮ ಕರವನ್ನು ಪಾವತಿ ಮಾಡಬೇಕು’ ಎಂದರು.
‘ಪಾಲಿಕೆಯ ಸಿಬ್ಬಂದಿ ವ್ಯಾಪಾರಿಗಳ ಬಳಿಗೆ ಹೋಗಿ, ಪರವಾನಗಿ ಕೊಟ್ಟು ಸ್ಥಳದಲ್ಲಿಯೇ ವಸೂಲಿ ಮಾಡುತ್ತಾರೆ. ಅದಕ್ಕೆ ಎಲ್ಲರೂ ಸಹಕರಿಸಬೇಕು. ಪಾಲಿಕೆಗೆ ಕರ ಕಟ್ಟುವುದರಿಂದ ಹಲವು ಅಭಿವೃದ್ಧಿ ಕಾರ್ಯಗಳು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿಗತಿಯ ಸುಧಾರಣೆಗೂ ಸಹಾಯವಾಗುತ್ತದೆ’ ಎಂದು ಹೇಳಿದರು.
ಕರ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪರವೀನ್ ಬೇಗಂ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಮದ್ ಅಜಿಮೊದ್ದೀನ್, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಪರವೀನ್, ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ, ವಲಯ ಆಯುಕ್ತರಾದ ರಮೇಶ ಪಟ್ಟೇದಾರ, ಉಮೇಶ ಚವ್ಹಾಣ, ಮುಜಾಮಿನ್ ಅಲ್ಲಮ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.