ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ ತಾಲ್ಲೂಕಿನ ಸುಲೇಪೇಟದಲ್ಲಿ ಎಲ್ಲೆಂದರಲ್ಲಿ ದುರ್ನಾತ

ಮಳೆ ನೀರು ಹರಿದು ಹೋಗದೆ ಸಮಸ್ಯೆ, ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನ
Last Updated 6 ಅಕ್ಟೋಬರ್ 2020, 2:26 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಸುಲೇಪೇಟದಲ್ಲಿ ಮುಖ್ಯ ಮಾರುಕಟ್ಟೆ ಸಹಿತ ಜನನಿಬಿಡ ಪ್ರದೇಶಗಳಲ್ಲಿ ಮಳೆ ನೀರು ನಿಂತು ಪಾಚಿ ಬೆಳೆದು ದುರ್ನಾತ ಬೀರುತ್ತಿವೆ.

ಉಮ್ಮರ್ಗಾ– ಸುಲೇಪೇಟ ರಾಜ್ಯ ಹೆದ್ದಾರಿ– 32 ಮತ್ತು ರಾಯಚೂರು– ವನ್ಮಾರಪಳ್ಳಿ ರಾಜ್ಯ ಹೆದ್ದಾರಿ– 15 ಹಾಗೂ ಸುಲೇಪೇಟ– ರಾಣಾಪುರ ಜಿಲ್ಲಾ ಮುಖ್ಯ ರಸ್ತೆಗಳ ಸಂಗಮ ತಾಣವಾದ ಸುಲೆಪೇಟದಲ್ಲಿನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಖಾಲಿ ನಿವೇಶನಗಳು ಮತ್ತು ರಸ್ತೆಗಳ ಮೇಲೆ ನೀರು ನಿಂತು ಪಾಚಿ ಬೆಳೆದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಸುಲೇಪೇಟವು ಸುತ್ತಮುತ್ತಲಿನ 30ಕ್ಕೂ ಹೆಚ್ಚು ಹಳ್ಳಿಗಳಿಗೆ ಕೇಂದ್ರಸ್ಥಾನವಾಗಿದೆ. ಶಿಕ್ಷಣ ಮತ್ತು ಚಿಕಿತ್ಸೆಗಾಗಿ ಜನರು ಈ ಪಟ್ಟಣವನ್ನು ಅವಲಂಬಿಸಿದ್ದಾರೆ.

ಬಸವೇಶ್ವರ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಹಿಂದುಗಡೆ ಹೋಟೆಲ್ ಮತ್ತು ವಿವಿಧ ಅಂಗಡಿಗಳ ಹಿಂದುಗಡೆ ಖಾಲಿ ನಿವೇಶನ ಜಾಗವನ್ನು ಸ್ಥಳೀಯರು ಕೆರೆ ಎಂದೇ ಕೆರೆಯುತ್ತಾರೆ. ಇದರಲ್ಲಿ ಸಂಗ್ರಹವಾದ ನೀರು ಬೇರೆ ಹೋಗಲು ದಾರಿ ಇಲ್ಲ. ಇದರ ಸುತ್ತಲೂ ಟಿಪ್ಪು ಸುಲ್ತಾನ್, ಅಂಬಿಗರ ಚೌಡಯ್ಯ ಕಟ್ಟೆಗಳನ್ನು ನಿರ್ಮಿಸಲಾಗಿದ್ದು, ಇವು ಹೊಲಸು ನೀರಿನಿಂದ ಆವೃತವಾಗಿವೆ.ಇದರ ಪಕ್ಕದಲ್ಲಿಯೇ ವಾಣಿಜ್ಯ ಸಂಕೀರ್ಣಗಳು, ತರಕಾರಿ, ಮಾಂಸ ಮಾರಾಟ ಅಂಗಡಿಗಳು ಇವೆ. ವಾರದ ಸಂತೆ ಇದರ ಬಳಿಯೇ ನಡೆಯುತ್ತದೆ.

ಇಲ್ಲಿಂದ ಪೊಲೀಸ್ ಠಾಣೆ ಕಡೆಗೆ ಹೋಗುವಾಗ ಎದುರಾಗುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಗ್ರಾಣದ ಪಕ್ಕದಲ್ಲಿ ದಕ್ಷಿಣ ದಿಕ್ಕಿನಲ್ಲಿ ಬರುವ ವಾಣಿಜ್ಯ ಸಂಕಿರ್ಣಗಳಿಗೆ ಹೋಗುವ ರಸ್ತೆ ಕೆಸರು ಕೊಚ್ಚೆಯಿಂದ ಕೂಡಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶುದ್ಧ ಕುಡಿವ ನೀರಿನ ಘಟಕದ ಕೊಳವೆ ಬಾವಿಯನ್ನೂ ಕೊಳಚೆ ನೀರು ಆವರಿಸಿಕೊಂಡಿದೆ.

ಉರ್ದು ಶಾಲೆಗೆ ಮತ್ತು ತಾಂಡಾಕ್ಕೆ ಹೋಗುವ ಸಿಮೆಂಟ್ ಕಾಂಕ್ರೀಟ್ ರಸ್ತೆ ಮೇಲೆ ಮೊಳಕಾಲುದ್ದ ನೀರು ನಿಂತು ಪಾಚಿ ಬೆಳೆದಿದೆ. ಇದರ ಹತ್ತಿರದಲ್ಲಿಯೇ ಇರುವ ನಾಡ ಕಚೇರಿ ಜಲಾವೃತವಾಗಿದೆ. ವೀರಭದ್ರೇಶ್ವರ ತೇರ ಮೈದಾನಕ್ಕೆ ಹೋಗುವ ಮಹಾದ್ವಾರದ ಬಳಿ ಹೊಲಸು ನೀರು ತುಂಬಿಕೊಂಡಿದೆ.

ಪ್ರಸಕ್ತ ವರ್ಷ ಭಾರಿ ಮಳೆ ಕಾರಣ ನಾಡ ಕಚೇರಿಗೆ ಹಲವು ಬಾರಿ ನೀರು ನುಗ್ಗಿದೆ. ಹೀಗಾಗಿ ಕಚೇರಿಯನ್ನೇ ಪರಿಶಿಷ್ಟ ಪಂಗಡ ಮಕ್ಕಳ ವಸತಿ ನಿಲಯಕ್ಕೆ ಸ್ಥಳಾಂತರಿಸಿದ್ದಾರೆ. ಆದರೆ ವ್ಯಾಪಾರ ಮಳಿಗೆ ಮತ್ತು ಜನರ ಮನೆಗಳ ಗತಿ ಏನು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಭವಿಷ್ಯದಲ್ಲಿ ಈ ಸಮಸ್ಯೆ ಎದುರಾಗದಂತೆ ಮಾಡಲು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯುತ್ತೇನೆ ಎಂದು ಪಿಡಿಒ ಬಂಡಪ್ಪ ಧನ್ನಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT