‘ಶಸ್ತ್ರಚಿಕಿತ್ಸೆಯಿಂದ ಸೀಳುತುಟಿ ಸಮಸ್ಯೆ ನಿವಾರಣೆ’

7
ಸೀಳುತುಟಿ ಸಮಸ್ಯೆ; ಇಎಸ್‌ಐ ಆಸ್ಪತ್ರೆಯಲ್ಲಿ ನಾಲ್ಕು ದಿನ ಉಚಿತ ಶಸ್ತ್ರಚಿಕಿತ್ಸಾ ಶಿಬಿರ

‘ಶಸ್ತ್ರಚಿಕಿತ್ಸೆಯಿಂದ ಸೀಳುತುಟಿ ಸಮಸ್ಯೆ ನಿವಾರಣೆ’

Published:
Updated:
Deccan Herald

ಕಲಬುರ್ಗಿ: ‘ಮಕ್ಕಳ ಸೀಳುತುಟಿ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಇದು ಪೂರ್ವಜರಿಂದಲೋ, ದೇವರ ಕಾಟದಿಂದಲೋ ಬರುವಂತಹ ಕಾಯಿಲೆ ಅಲ್ಲ. ಪಾಲಕರು ಮೌಢ್ಯದಿಂದ ಹೊರಬಂದು ಶಸ್ತ್ರಚಿಕಿತ್ಸೆ ಮಾಡಿಸಬೇಕು’ ಎಂದು ‘ಮಿಷನ್‌ ಸ್ಮೈಲ್‌’ ನಿರ್ದೇಶಕ ದಲೀಪ್‌ ಪಾಂಡೆ ಹೇಳಿದರು.

ಮುತ್ತೂಟ್‌ ಪಪ್ಪಚಾನ್‌ ಫೌಂಡೇಶನ್‌ ವತಿಯಿಂದ ಇಲ್ಲಿನ ಇಎಸ್ಐ ಆಸ್ಪತ್ರೆಯಲ್ಲಿ ನಾಲ್ಕು ದಿನ (ಆ. 12ರಿಂದ 15ರವರೆಗೆ) ಹಮ್ಮಿಕೊಂಡಿರುವ ಸೀಳುತುಟಿ ನಿವಾರಣೆಗೆ ಉಚಿತ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಅವರು ಮಾಹಿತಿ ನೀಡಿದರು.

‘ಈ ಸಮಸ್ಯೆ ಇರುವ ಮಕ್ಕಳಿಗೆ ತುಟಿ ಮಾತ್ರ ಒಡೆದಿರುವುದಿಲ್ಲ; ಬಾಯಿಯಿಂದ ಆರಂಭವಾಗಿ ಅಂಗಳದವರೆಗೂ ಅದು ಸೀಳಿರುತ್ತದೆ. ಇದರಿಂದ ಮಕ್ಕಳು ಸರಿಯಾಗಿ ಉಸಿರಾಡಲು, ಹಾಲು ಕುಡಿಯಲು, ಊಟ ಮಾಡಲು ಅಥವಾ ನಗುವುದಕ್ಕೂ ಕಷ್ಟವಾಗುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಸಾಕಷ್ಟು ಮಕ್ಕಳು ಮೃತಪಟ್ಟಿದ್ದಾರೆ. ಈ ಸಮಸ್ಯೆ ಬಗೆಹರಿಸಲು ದೇಶದ ವಿವಿಧೆಡೆ ಉಚಿತ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸುತ್ತಿದೆ’ ಎಂದು ತಿಳಿಸಿದರು.

‘ದೇಶದ ವಿವಿಧೆಡೆ ಹಾಗೂ ವಿದೇಶದಲ್ಲಿ ಪರಿಣತಿ ಪಡೆದ 40 ತಜ್ಞ ವೈದ್ಯರು ಈ ಕಾರ್ಯದಲ್ಲಿ ನಿರತರಾದ್ದಾರೆ. ತಪಾಸಕರು, ಮಕ್ಕಳ ತಜ್ಞರು, ಆಹಾರ ತಜ್ಞರು, ಅರಿವಳಿಕೆ ತಜ್ಞರು... ಹೀಗೆ ಒಂದು ಚಿಕಿತ್ಸೆಗೆ ಬೇಕಾದ ಪೂರ್ಣ ಪ್ರಮಾಣದ ತಂಡ ಇದರಲ್ಲಿದೆ. ತುಟಿಯನ್ನು ಜೋಡಿಸಿದ ನಂತರ ಮಗುವಿನ ಭಾಷೆ ಬಗ್ಗೆ ನಿಗಾವಹಿಸಲು ಭಾಷಾ ತಜ್ಞರೂ ಇದ್ದಾರೆ’ ಎಂದು ವಿವರಿಸಿದರು.

‘ಸಾಮಾನ್ಯವಾಗಿ ಒಂದು ಚಿಕಿತ್ಸೆ ಹಾಗೂ ಔಷಧೋಪಚಾರ ಸೇರಿ ₹70 ಸಾವಿರದಿಂದ ₹1.20 ಲಕ್ಷದವರೆಗೂ ಖರ್ಚಾಗುತ್ತದೆ. ಆದರೆ, ಫೌಂಡೇಷನ್‌ನಿಂದ ಇದಕ್ಕೆ ಒಂದೂ ಪೈಸೆಯನ್ನೂ ಪಡೆಯುವುದಿಲ್ಲ. ಮಾತ್ರವಲ್ಲ, ಮಗು ಮತ್ತು ಪಾಲಕರ ಊಟ, ವಸತಿ, ವಾಹನ ವೆಚ್ಚ, ಔಷಧೋಪಚಾರವನ್ನೂ ನಾವೇ ನೀಡುತ್ತೇವೆ. ಚಿಕಿತ್ಸೆಗೆ ಮುನ್ನ ಮಗು ಸದೃಢವಾಗಿರಬೇಕು. ಕೆಲವು ಮಕ್ಕಳು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುತ್ತವೆ. ಅಂಥ ಮಕ್ಕಳಿಗಾಗಿ ನಮ್ಮ ತಂಡದವರೇ ಆಯಾ ಗ್ರಾಮಕ್ಕೆ ಹೋಗಿ ಪೌಷ್ಟಿಕ ಆಹಾರ ತಲುಪಿಸುತ್ತಾರೆ’ ಎಂದರು.

ಫೌಂಡೇಷನ್‌ನ ಸಾಮಾಜಿಕ ಹೊಣೆಗಾರಿಕೆ ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ.ಪ್ರಶಾಂತ್‌ ಮಾತನಾಡಿ, ‘ಈ ಕಾರ್ಯಕ್ಕಾಗಿ 15 ಸಾವಿರ ಕಾರ್ಯಕರ್ತರನ್ನು ನೇಮಿಸಲಾಗಿದೆ. ತಂಡದವರು ಹಳ್ಳಿಗಳಿಗೆ ಹೋಗಿ ಮಕ್ಕಳನ್ನು ಗುರುತಿಸಿ, ಪಾಲಕರಿಗೆ ಅರಿವು ಮೂಡಿಸಿ ಕರೆತರುತ್ತಾರೆ. ಚಿಕಿತ್ಸೆ ನಂತರ ಮತ್ತೆ ಕೆಲ ತಿಂಗಳು ಮಗುವಿನ ಮೇಲೆ ನಿಗಾ ಇಟ್ಟು ನೋಡಿಕೊಳ್ಳುತ್ತಾರೆ’ ಎಂದು ಹೇಳಿದರು.

‘ಹೈದರಾಬಾದ್‌ ಕರ್ನಾಟಕ ಭಾಗದ ಆರೂ ಜಿಲ್ಲೆಗಳಲ್ಲಿ ಆರು ತಿಂಗಳಿಂದ ಅಲೆದಾಡಿ ಜಾಗೃತಿ ಮೂಡಿಸಿದ್ದೇವೆ. ಕಲಬುರ್ಗಿಯಲ್ಲಿ ಇದು ಎರಡನೇ ಶಿಬಿರ. ಈಗಾಗಲೇ 65 ಮಕ್ಕಳನ್ನು ಕರೆತರಲಾಗಿದೆ. ಸದೃಢವಾಗಿರುವ ಎಲ್ಲ ಮಕ್ಕಳನ್ನೂ ಚಿಕಿತ್ಸೆಗೆ ಒಳಪಡಿಸಲಾಗುವುದು. ಇದರಲ್ಲಿ ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದ 12 ಮಕ್ಕಳೂ ಸೇರಿದ್ದಾರೆ. ಕಳೆದ ಶಿಬಿರದಲ್ಲೇ ಅವರನ್ನು ಗುರುತಿಸಲಾಗಿತ್ತು. ಉತ್ತಮ ಆಹಾರ ಸರಬರಾಜು ಮಾಡಿದ್ದರಿಂದ ಈಗ ಚಿಕಿತ್ಸೆಗೆ ಸಿದ್ಧವಾಗಿದ್ದಾರೆ’ ಎಂದರು.

ಮಿಷನ್‌ ಸ್ಮೈಲ್‌ನ ಸಿಒಒ ಕರ್ನಲ್‌ ಶಿವಾಜಿ ಸಮದ್ದಾರ್‌, ಕಂಪನಿಯ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಬಿಶ್ವ ಬಿಕಾಸ್‌ ಮಹಾಲೆ, ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕ ಸೂರ್ಯಕಾಂತ ಲೆಂಕಾ, ಕಲಬುರ್ಗಿ ಜಿಲ್ಲಾ ವ್ಯವಸ್ಥಾಪಕ ವಿನಾಯಕ ಕೆ., ರಾಯಚೂರು ಜಿಲ್ಲಾ ವ್ಯವಸ್ಥಾಪಕ ಜಿ.ಗುಲಾಬ್‌ಚಂದ್‌ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !